

ತುಮಕೂರು: ಜಿಲ್ಲೆಯ ವಿವಿಧ ವೆಂಕಟೇಶ್ವರಸ್ವಾಮಿ ದೇವಾಲಯಗಳಲ್ಲಿ ಸೋಮವಾರ ವೈಕುಂಠ ಏಕಾದಶಿ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.
ಬೆಳಗ್ಗೆಯಿಂದಲೇ ಸರತಿಯಲ್ಲಿ ನಿಂತು ಕಾದು ಸಾಗಿದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಬಟವಾಡಿ ಎಪಿಎಂಸಿ ಯಾರ್ಡ್ ಮುಂಭಾಗದ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಕಾರ್ಯಕ್ರಮಗಳು ಜರುಗಿದವು. ಈ ವಿಶೇಷ ದಿನದಂದು ದೇವರ ದರ್ಶನ ಮತ್ತು ಪೂಜೆಗೆ ಎಲ್ಲ ಭಕ್ತರು ಕಿಕ್ಕಿರಿದು ತುಂಬಿದ್ದರು.
ಟಿಜಿಎಂಸಿ ಬ್ಯಾಂಕ್ ಆವರಣದ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ದೇವರಿಗೆ ಮಾಡಿದ್ದ ವಿಶೇಷ ಅಲಂಕಾರ ಗಮನ ಸೆಳೆಯಿತು. ಕೋತಿತೋಪು ಮುಖ್ಯರಸ್ತೆ, ಜಯನಗರ ಮುಂತಾದ ದೇವಾಲಯಗಳಲ್ಲಿ ದಿನವಿಡೀ ಪೂಜಾ ಕೈಂಕರ್ಯಗಳು ನಡೆದವು.
ಗೂಳೂರಿನ ಶ್ರೀಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠದ್ವಾರ ಹಾಗೂ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು. ಕೊರಟಗೆರೆ ತಾಲೂಕು ಥರಟಿ ಶ್ರೀಲಕ್ಷ್ಮೀರಂಗನಾಥಸ್ವಾಮಿ ಕ್ಷೇತ್ರ, ಮುಕ್ತಿ ನಾಗಮ್ಮದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆದವು.
ಶಿರಾ ತಾಲೂಕು ಸಿದ್ದನಹಳ್ಳಿ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು.
ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ದೇವಾಲಯದಲ್ಲಿ ವೈಕುಂಠ ಏಕಾದಶಿ ನಿಮಿತ್ತ ಸುಪ್ರಭಾತ, ಮೂಲ ವಿಗ್ರಹಕ್ಕೆ ಅಭಿಷೇಕ, ಪ್ರಾಕಾರೋತ್ಸವ, ಅಷ್ಟಾವಧಾನ ಸೇವೆ, ದೇವರ ನಾಮ, ಭಜನೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.