ಸಿದ್ದಗಂಗೆ ಕೃಷಿ-ಕೈಗಾರಿಕಾ ವಸ್ತುಪ್ರದರ್ಶನಕ್ಕೆ ಚಾಲನೆ

DSC_7168
Published on

ತುಮಕೂರು: ಇತಿಹಾಸ ಪ್ರಸಿದ್ದ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಏರ್ಪಡಿಸಲಾಗಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.
ನಗರದ ಸಿದ್ದಗಂಗಾ ಮಠದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರು ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ದೂರದೃಷ್ಠಿಯ ಯೋಜನೆಯಾಗಿತ್ತು. ಜಾತ್ರೆಗೆ ಬರುವ ರೈತರು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ 59 ವರ್ಷದ ಹಿಂದೆ ಈ ವಸ್ತು ಪ್ರದರ್ಶನ ಮತ್ತು ಜಾತ್ರೆಯನ್ನು ಆರಂಭಿಸಿದರು. ಅದನ್ನು ಪ್ರಸ್ತುತ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಮುಂದುವರೆಸಿಕೊಂಡು ಹೋಗುತ್ತಿದ್ದು, ವಸ್ತುಪ್ರದರ್ಶನ ಅರ್ಥಪೂರ್ಣವಾಗಿದೆ ಎಂದರು.
ಪ್ರತಿ ದಿನ ವಸ್ತು ಪ್ರದರ್ಶನದ ಸಾಂಸ್ಕೃತಿಕ ವೇದಿಕೆಯಲ್ಲಿ ನಾಟಕ, ನೃತ್ಯ, ಸಂಗೀತ, ಹಾಸ್ಯ ಮತ್ತಿತರ ಕಲಾ ಪ್ರದರ್ಶನ ನಡೆಯಲಿದ್ದು, ಜಿಲ್ಲೆ, ರಾಜ್ಯದ ವಿವಿಧೆಡೆ ಕಲಾವಿದರು ಬಂದು ಪ್ರದರ್ಶನ ನೀಡಲು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಪರಮಪೂಜ್ಯರ ಮಾರ್ಗದರ್ಶನದಂತೆ ಶ್ರೀಕ್ಷೇತ್ರದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆ ಮತ್ತು ಕೃಷಿ ಕೈಗಾರಿಕಾ ವಸ್ತುಪ್ರದರ್ಶನ ನಡೆಯುತ್ತಿದೆ. ರೈತರು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸಮಾರಂಭದಲ್ಲಿ ಮೇಯರ್ ಪ್ರಭಾವತಿ ಸುಧೀಶ್ವರ್, ಜಿ.ಪಂ. ಸಿಇ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್, ಎಪಿಎಂಸಿ ಅಧ್ಯಕ್ಷ ಉಮೇಶ್‌ಗೌಡ, ವಸ್ತುಪ್ರದರ್ಶನ ಸಮಿತಿಯ ಕಾರ್ಯದರ್ಶಿ ಗಂಗಾಧರಯ್ಯ, ಶಿವಕುಮಾರಯ್ಯ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net