ಶಿರಾ ಅಚ್ಚರಿ ರಾಜರಾಜೇಶ್ವರಿ ತಳಮಳ: ಯಾವ ಪಕ್ಷದ ನಿರೀಕ್ಷೆ ಎಷ್ಟು?

By election
Published on

ಬೆಂಗಳೂರು: ಸರ್ಕಾರದ ಕಾರ್ಯವೈಖರಿ- ಸಾಮರ್ಥ್ಯ ಬಗ್ಗೆ ಜನರ ಮನಸ್ಸಿನಲ್ಲೇನಿದೆ ಎಂದು ಅರಿಯಬಹುದಾದ ಮತ್ತು ಕಾಂಗ್ರೆಸ್ ತನ್ನ ಭವಿಷ್ಯದ ಗೆಲುವಿನ ಅಭಿಯಾನಕ್ಕೆ ದಿಕ್ಸೂಚಿ ಎಂದು ಭಾವಿಸಿರುವ ಮಿನಿ ಮತಸಮರ ಸಂಪನ್ನಗೊಂಡಿದೆ. ತೀವ್ರ ಪೈಪೋಟಿಯಿಂದ ನಡೆದ ಪ್ರಚಾರಕಾರ್ಯ ಬಳಿಕ ಮತದಾನ ಮಂಗಳವಾರ ಮಂಗಳಕರವಾಗಿ ಮುಕ್ತಾಯವಾಗಿದ್ದು, ನ.10ರಂದು ಮತ ಎಣಿಕೆ ನಡೆಯಲಿದೆ.

ಶಿರಾ ಮತ್ತು ರಾಜರಾಜೇಶ್ವರಿ ನಗರದಲ್ಲಿ ಮೂರೂ ಪಕ್ಷದ ಅಭ್ಯರ್ಥಿಗಳಿಗೆ ಜನರ ಅಭಿಪ್ರಾಯ ಏನೆಂಬುದು ದಿನದ ಮಟ್ಟಿಗೆ ಸ್ಪಷ್ಟವಾಗಿ ತಿಳಿಯದಾಯಿತು. ಹೀಗಾಗಿ ಅವರಲ್ಲಿ ದುಗುಡ ಆವರಿಸಿದೆ. ಶಿರಾದಲ್ಲಿನ ರಾಜಕೀಯ ಏರುಪೇರನ್ನು ಕಾಂಗ್ರೆಸ್ ಗ್ರಹಿಸಿದ್ದರೆ, ಆರ್​ಆರ್ ನಗರದಲ್ಲಿ ಮತದಾರ ಮತದಾನಕ್ಕೆ ಆಸಕ್ತಿ ತೋರಿಸದೆ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ತಳಮಳಕ್ಕೆ ಸಿಲುಕುವಂತಾಗಿದೆ.

ಶಿರಾದಲ್ಲಿ ಹೆಚ್ಚು ಮತವಾದರೆ ಬಿಜೆಪಿಗೆ ಸಲೀಸು, ರಾಜರಾಜೇಶ್ವರಿಯಲ್ಲಿ ಹೆಚ್ಚು ಮತದಾನವಾದರೆ ಕಾಂಗ್ರೆಸ್​ಗೆ ಅನುಕೂಲ ಎಂಬ ರಾಜಕೀಯ ಮಾತುಗಳು ಮತದಾನ ಆರಂಭಕ್ಕೆ ಮುನ್ನ ಕೇಳಿಬಂದಿತ್ತು. ಮತದಾನದ ದಿನ ಮಧ್ಯಾಹ್ನದ ಬಳಿಕ ಮೂರೂ ಪಕ್ಷಗಳು ಲೆಕ್ಕಾಚಾರ ಆರಂಭಿಸಿದವು. ತಮ್ಮ ನೆಟ್​ವರ್ಕ್​ನಲ್ಲಿ ಮತದಾನ ಹೇಗೆ ನಡೆಯುತ್ತಿದೆ, ಯಾವ ಯಾವ ಬೂತ್​ಗಳಲ್ಲಿ ಯಾರ ಪರ ವಾತಾವರಣ ಇದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದವು. ಎಲ್ಲ ಬೂತ್​ಗಳಿಂದಲೂ ಮಾಹಿತಿ ಬರುತ್ತಿದ್ದಂತೆ ಕೆಲವರ ಮುಖದಲ್ಲಿ ಮಂದಹಾಸ ಮೂಡಿದರೆ, ಮತ್ತೆ ಕೆಲವರ ಮೊಗದಲ್ಲಿ ಕಳವಳ ಕಾಣಿಸಿದೆ.

ಮೂರು ಪಕ್ಷದ ಪ್ರಮುಖರನ್ನು ವಿಜಯವಾಣಿ ಮಾತಿಗೆಳೆದಾಗ, ತಮ್ಮ ಲೆಕ್ಕಾಚಾರವನ್ನು ಮುಂದಿಟ್ಟರು. ಶಿರಾದಲ್ಲಿ ಪೈಪೋಟಿ ಇದ್ದರೂ ನಮ್ಮದೇ ಅಭ್ಯರ್ಥಿ 5-10 ಸಾವಿರದಿಂದ ಗೆಲ್ಲುತ್ತಾರೆಂದು ಕಾಂಗ್ರೆಸ್ ಭಾವಿಸಿದೆ. ಅದೇ ರೀತಿ ಬಿಜೆಪಿ ಹೆಚ್ಚಿನ ಉತ್ಸಾಹ ತೋರಿಸಿದ್ದು, ಗೆಲುವಿನ ಅಂತರ 20 ಸಾವಿರ ಮುಟ್ಟಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರದ ವಿಚಾರದಲ್ಲಿ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಲ್ಲಿ ಸ್ಪಷ್ಟತೆ ಇಲ್ಲ. ಗೆದ್ದರೂ ಗೆಲ್ಲಬಹುದೆಂದು ಎರಡೂ ಕಡೆಯಿಂದ ಅಭಿಪ್ರಾಯ ಬಂದಿದೆ.

ಬಿಜೆಪಿ ಹೇಳೋದೇನು?

1. ಶಿರಾದಲ್ಲಿ ಕನಿಷ್ಠ 20 ಸಾವಿರ ಮತಕ್ಕಿಂತ ಹೆಚ್ಚಿನ ಅಂತರದಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಜನತೆ ಬದಲಾವಣೆ ಬಯಸಿದ್ದು, ಪಕ್ಷದ ಬೇರು ಮಟ್ಟದ ಕೆಲಸ ಫಲಿತಾಂಶ ಬದಲಿಸಿದೆ.

2. ಆರ್​ಆರ್ ನಗರದಲ್ಲಿ ಕೊಂಚ ಕಷ್ಟವಾಗಬಹುದು. ಫೋಟೋ ಫಿನಿಶ್ ರಿಸಲ್ಟ್. ಗೆದ್ದರೆ 5-10 ಸಾವಿರ ಅಂತರ.

ಕಾಂಗ್ರೆಸ್ ನಿರೀಕ್ಷೆಗಳು ಏನು?

1. ಶಿರಾದಲ್ಲಿ ಬಿಜೆಪಿ ನಿರೀಕ್ಷೆ ಮೀರಿ ಮತ ಗಳಿಸಿದೆ. ಹೀಗಾಗಿ ಚಿತ್ರಣ ಬದಲಾಗಿದೆ. ಜೆಡಿಎಸ್ ಅಭ್ಯರ್ಥಿ ಎಷ್ಟು ಮತ ಪಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರ.

2. ರಾಜರಾಜೇಶ್ವರಿ ನಗರದಲ್ಲಿ ನೇರಾನೇರ ಪೈಪೋಟಿ ಇದೆ. ಮತದಾನ ಹೆಚ್ಚಾಗಿದ್ದರೆ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಒಕ್ಕಲಿಗ ಮತಗಳ ಗೌಪ್ಯತೆ ಗೊತ್ತಾಗುತ್ತಿಲ್ಲ.

ಜೆಡಿಎಸ್ ಲೆಕ್ಕಾಚಾರವೇನು?

1. ಶಿರಾದಲ್ಲಿ ತಕ್ಕಮಟ್ಟಿಗೆ ಅನುಕಂಪ ಕೆಲಸ ಮಾಡಿದೆ. ತ್ರಿಕೋನ ಸ್ಪರ್ಧೆ ನಡೆದು ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್​ನ ಮತ ಹೆಚ್ಚು ಸೆಳೆದಿದ್ದರೆ ತಮ್ಮ ಅಭ್ಯರ್ಥಿ ಗೆಲ್ಲಬಹುದು. ಸ್ಪಷ್ಟತೆ ಕಾಣಿಸಿಲ್ಲ.

2. ರಾಜರಾಜೇಶ್ವರಿ ನಗರದಲ್ಲಿ ರೇಸ್​ನಿಂದ ಹೊರಗೆ. ಕಳೆದ ಬಾರಿ ಪಡೆದ ಅರ್ಧದಷ್ಟು ಮತ ಬಂದರೂ ಸಾಧನೆಯೇ.

ಶಿರಾದಲ್ಲಿ ಕಮಲ ಅರಳೋದು ನಿಶ್ಚಿತ ತುಮಕೂರು: ಯಾವ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಗೆ ಶಕ್ತಿ ಇರಲಿಲ್ಲವೋ ಅಲ್ಲಿ ಗೆಲ್ಲುವ ಸವಾಲು ನಮ್ಮ ಮುಂದಿತ್ತು, ನಮ್ಮೆಲ್ಲ ಮುಖಂಡರು, ಕಾರ್ಯಕರ್ತರ ನೆರವಿನಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುವ ಮೂಲಕ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಿರಾ ಕ್ಷೇತ್ರದಲ್ಲಿ ಫಲಿತಾಂಶಕ್ಕೆ ಮೊದಲೇ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ನಮ್ಮೆಲ್ಲ ಮುಖಂಡರ ಒಗ್ಗಟ್ಟಿನ ಫಲವಾಗಿ ಶಿರಾದಲ್ಲಿ ಗೆಲುವು ನಿಶ್ಚಿತವಾಗಿದ್ದು, ಸಂತೃಪ್ತಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದೇವೆ, ಶೇ.80ಕ್ಕೂ ಹೆಚ್ಚು ಮತದಾನ ಮಾಡಿರುವ ಶಿರಾ ಮತದಾರರು ಹಾಗೂ ನಮ್ಮ ಮುಖಂಡರು, ಕಾರ್ಯಕರ್ತರನ್ನು ಅಭಿನಂದಿಸುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾಂಗ್ರೆಸ್, ಜೆಡಿಎಸ್ ಚುನಾವಣೆಗೂ ಪೂರ್ವದಲ್ಲಿ ಗೆಲುವಿನ ಕನಸು ಕಂಡಿದ್ದವು, ಬಿಜೆಪಿ ಯನ್ನು ಲೆಕ್ಕಕ್ಕೆ ಇಟ್ಟುಕೊಂಡಿರಲಿಲ್ಲ, ವಾರದಿಂದ ಶಿರಾ ರಾಜಕೀಯ ಚಿತ್ರಣವೇ ಬದಲಾಗಿದ್ದು, ಫಲಿತಾಂಶ ಬಿಜೆಪಿ ಪರವಾಗಿರಲಿದೆ ಎಂದರು.

ಮತದಾನ ಆರಂಭವಾದ ಕೂಡಲೇ ಕಾಂಗ್ರೆಸ್ ಅಭ್ಯರ್ಥಿ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದಾಗಲೇ ಅವರಿಗೆ ಗೆಲುವಿನ ವಿಶ್ವಾಸವಿಲ್ಲ ಎಂಬುದು ಖಾತ್ರಿಯಾಯಿತು, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 20 ಸಾವಿರ ಮತಗಳ ಅಂತರಗಳಿಂದ ಗೆಲುವು ಸಾಧಿಸಲಿದ್ದಾರೆ. ಯಡಿಯೂರಪ್ಪ ಮಾತು ಕೊಟ್ಟಂತೆ ಶಿರಾ ತಾಲೂಕಿನ ಕೆರೆಗಳಿಗೆ ಹೇಮಾವತಿಯಿಂದಲೇ ನೀರು ಹರಿಸಲಾಗುವುದು. | ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ

ಸಿಎಂ ಎಂದಿನಂತೆ ಕಾರ್ಯತತ್ಪರ

ಬೆಂಗಳೂರು: ರಾಜರಾಜೇಶ್ವರಿ ನಗರ, ಶಿರಾ ಉಪಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡ ಬಹುತೇಕ ನಾಯಕರು ವಿಶ್ರಾಂತಿಗೆ ಮೊರೆ ಹೋದರೆ, ಸಿಎಂ ಯಡಿಯೂರಪ್ಪ ಮಂಗಳವಾರ ಎಂದಿನಂತೆ ಕಾರ್ಯನಿರ್ವಹಿಸಿದರು. ಅಧಿಕೃತ ‘ಕಾವೇರಿ’ ನಿವಾಸದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಆಡಳಿತಾತ್ಮಕ ವಿಚಾರಗಳ ಬಗ್ಗೆ ರ್ಚಚಿಸಿದರು. ಅಲ್ಲದೆ, ದೈನಂದಿನ ಕಡತಗಳನ್ನು ಪರಿಶೀಲಿಸಿ ಸಲಹೆ-ಸೂಚನೆಗಳನ್ನು ನೀಡಿದರು. ಕರೊನಾ ಭಯ ಬಿಟ್ಟು, ಸುರಕ್ಷತಾ ಕ್ರಮಗಳನ್ನು ಪಾಲಿಸಿ ಹಕ್ಕು ಚಲಾಯಿಸುವಂತೆ ಮತದಾರರಿಗೆ ಮನವಿ ಮಾಡಿಕೊಂಡ ಬಿಎಸ್​ವೈ, ಕಾಲಕಾಲಕ್ಕೆ 2 ಕ್ಷೇತ್ರಗಳ ಮತದಾನ ಪ್ರಮಾಣ ಹಾಗೂ ವಸ್ತುಸ್ಥಿತಿ ಮಾಹಿತಿ ತರಿಸಿಕೊಂಡರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net