ಚಳವಳಿಗೆ ಜನ ಸೆಳೆದ ನಂಜುಂಡಸ್ವಾಮಿ: ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಪ್ರೊ.ಕೇಶವ ಅಭಿಮತ

1
ತುಮಕೂರು ವಿವಿ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ ’ರೈತ ಹೋರಾಟಗಳಲ್ಲಿ ನಂಜುಂಡಸ್ವಾಮಿ ಪಾತ್ರ’ ವಿಷಯ ಕುರಿತ ವಿಶೇಷ ಉಪನ್ಯಾಸಕ್ಕೆ ಪ್ರೊ.ಕೇಶಲ ಚಾಲನೆ ನೀಡಿದರು. ರಾಜು, ಟಿ.ಎಸ್.ಸುನೀಲ್‌ಪ್ರಸಾದ್, ಡಾ.ಮುನಿರಾಜು ಮತ್ತಿತರರು ಇದ್ದರು.
Published on

ತುಮಕೂರು: ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನಿಖರ ಮಾತುಗಳು, ವಿಷಯ ಮಂಡನೆಯಲ್ಲಿರುತ್ತಿದ್ದ ಅಂಕಿ, ಅಂಶಗಳು, ಜನಪರ ನಿಲುವು ಜನರನ್ನು ರೈತ ಚಳವಳಿಗೆ ಸೆಳೆದವು ಎಂದು ಪ್ರಾಧ್ಯಾಪಕ ಪ್ರೊ.ಕೇಶವ ಅಭಿಪ್ರಾಯಪಟ್ಟರು.

ತುಮಕೂರು ವಿವಿ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅಧ್ಯಯನ ಪೀಠ ಮತ್ತು ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ’ರೈತ ಹೋರಾಟಗಳಲ್ಲಿ ನಂಜುಂಡ ಸ್ವಾಮಿ ಪಾತ್ರ’ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶಿಯ ವಸ್ತುಗಳ ಬಳಕೆಯನ್ನು ಹೆಚ್ಚು ಪ್ರೋತ್ಸಾಹಿಸಿದವರು, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರೂ, ಅವರಲ್ಲಿನ ಹೋರಾಟದ ಗುಣ ಅವರನ್ನು ಕರ್ನಾಟಕದ ರೈತ ಪರ ಚಳವಳಿಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿತು. ನಂಜುಂಡ ಸ್ವಾಮಿಯವರು ಪ್ರಧಾನಿಗೆ ಸಿಗುವ ಎಲ್ಲ ಸವಾಲತ್ತುಗಳು ಪ್ರತಿ ನಾಗರೀಕನಿಗೂ ಸಿಗಬೇಕೆಂದು ವಾದಿಸುತ್ತಿದ್ದರು ಎಂದರು.

ಬೆಂಗಳೂರು ಮಹಾರಾಣಿ ವಲಯ ವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಜಿ.ಲಕ್ಷ್ಮೀಪತಿ ಮಾತನಾಡಿ, ಭಯ ಎಂದಿಗೂ ನಂಜುಂಡಸ್ವಾಮಿಯವರ ಹತ್ತಿರ ಸುಳಿದಿರಲಿಲ್ಲ. ಅವರು ಜ್ಞಾನಿಗಳಾಗಿದ್ದರು. ಅವರ ಸಮಕಾಲೀನ ಚಿಂತಕರ ಪೈಕಿ ರೈತ ಚಳವಳಿಯನ್ನು ವಿಭಿನ್ನವಾಗಿ ಗುರುತಿಸಿಕೊಂಡಿದ್ದರು. ರಾಜ್ಯ, ರಾಷ್ಟ್ರ ಹಾಗೂ ವಿಶ್ವದ ಅರ್ಥವ್ಯವಸ್ಥೆಯನ್ನು ಅಧ್ಯಯನ ಮಾಡಿದ್ದರು ಎಂದರು.

ವಿದೇಶದ ಬಹುರಾಷ್ಟ್ರೀಯ ಕಂಪನಿಗಳ ಅಂಗಳದಲ್ಲಿಯೇ ನಿಂತು, ನಮ್ಮ ದೇಶದಲ್ಲಿ ನಿಮ್ಮ ಕಂಪನಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದ ಮಹಾನಾಯಕನ ಆದರ್ಶ ಇಂದಿನ ಸಮಾಜಕ್ಕೆ ಅಗತ್ಯವಿದೆ ಎಂದರು.

ಬಹುರಾಷ್ಟಿಯ ಕಂಪನಿಗಳು ಭಾರತಕ್ಕೆ ಬಂದರೆ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತವೆ ಎಂದು ಭವಿಷ್ಯ ನುಡಿದಿದ್ದ ಅವರು, ಬಂಡವಾಳಶಾಹಿಗಳು ಗ್ರಾಮಕ್ಕೆ ಬರಲು 7 ರೀತಿಯ ಷರತ್ತುಗಳನ್ನು ವಿಧಿಸಿ ಅದನ್ನು ಮೀರಿದಲ್ಲಿ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದಿದ್ದರು ಎಂದರು.

ವಿವಿ ಸಿಂಡಿಕೇಟ್ ಸದಸ್ಯರಾದ ರಾಜು, ಟಿ.ಎಸ್.ಸುನೀಲ್‌ಪ್ರಸಾದ್, ಪ್ರಾಧ್ಯಾಪಕ ಪ್ರೊ.ಜಯಶೀಲ, ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಮುನಿರಾಜು, ಪ್ರೊ.ವಿಲಾಸ್ ಇದ್ದರು.

ಜಗತ್ತಿನ ಯಾವ ಸಿದ್ಧಾಂತಗಳು ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ, ವಿದ್ಯಾರ್ಥಿಗಳು ಅವುಗಳನ್ನು ಸರಿಯಾಗಿ ಅರಿತು, ಮಹನೀಯರ ಆದರ್ಶನ, ಚಿಂತನೆಗಳನ್ನು ಜೀವನದಲ್ಲಿ ಆದರ್ಶವಾಗಿಟ್ಟುಕೊಳ್ಳಬೇಕು, ಸಂದರ್ಭಕ್ಕೆ ಅನುಗುಣವಾಗಿ ಸ್ವಂತ ನಿಲುವು ರೂಢಿಸಿಕೊಳ್ಳಬೇಕು.
ಟಿ.ಎಸ್.ಸುನೀಲ್‌ಪ್ರಸಾದ್ ಸಿಂಡಿಕೇಟ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net