

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 10ನೇ ವಾರ್ಡ್ ಪೂರ್‌ಹೌಸ್ ಕಾಲನಿ (ಪಿಎಚ್)ಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಿ ಕಾಲನಿಗೆ ಸಂಪರ್ಕ ಕಲ್ಪಿಸುವ 15 ರಸ್ತೆ ಬಂದ್ ಮಾಡಲಾಗಿದೆ.
ಗುಜರಾತ್‌ನಿಂದ ಧರ್ಮಬೋಧನೆಗೆಂದು ಮಾ.12ರಂದು ಬಂದಿದ್ದ 32 ವರ್ಷದ ವ್ಯಕ್ತಿ 13ನೇ ಕ್ರಾಸ್‌ನ ನಿಮ್ರಾ ಮಸೀದಿಯಲ್ಲಿ ನೆಲೆಸಿದ್ದ. ಈ ವ್ಯಕ್ತಿಯಲ್ಲಿ ಕರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಾತ್ರೋರಾತ್ರಿ ಸಮರೋಪಾದಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಮುಂದಿನ 28 ದಿನ ಯಾರೂ ಈ ಪ್ರದೇಶಕ್ಕೆ ಪ್ರವೇಶಿಸುವಂತಿಲ್ಲ. ಹಾಗೆಯೇ ಹೊರಗಡೆಯೂ ಬರುವಂತಿಲ್ಲ.
ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್, ಮಹಾನಗರ ಪಾಲಿಕೆ ಅಧಿಕಾರಿಗಳು ನಿಮ್ರಾ ಮಸೀದಿ ಸುತ್ತಲಿನ ಸಂಪರ್ಕ ರಸ್ತೆ ಬಂದ್ ಮಾಡಿದರಲ್ಲದೆ, ಗುರುವಾರ ರಾತ್ರಿ 10ರಿಂದ ಶುಕ್ರವಾರ ಬೆಳಗಿನ ಜಾವ 6 ಗಂಟೆಯೊಳಗೆ ನಿಮ್ರಾ ಮಸೀದಿಯಿಂದ ಸುತ್ತಲಿನ 150 ಮೀಟರ್ ಪ್ರದೇಶ ಸೀಲ್ಡೌನ್ ಮಾಡಿದರು.
ಡ್ರೈಫ್ರೂಟ್ಸ್, ಹಣ್ಣು: ಈ ಪ್ರದೇಶದಲ್ಲಿ ಹೆಚ್ಚು ಮುಸ್ಲಿಮರಿದ್ದು, ಶನಿವಾರದಿಂದ ರಂಜಾನ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಅಕ್ಕಿ, ಗೋಧಿ, ಡ್ರೈಫ್ರೂಟ್ಸ್ ಸೇರಿ ವಿವಿಧ ಹಣ್ಣು ವಿತರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಪ್ರದೇಶ ಹಾಗೂ ಸುತ್ತಮುತ್ತ ಒಟ್ಟು 6 ನ್ಯಾಯಬೆಲೆ ಅಂಗಡಿಗಳಿದ್ದು, ಪಡಿತರ ಚೀಟಿ ಹೊಂದಿರುವವರು ಪಡಿತರ ಪಡೆದುಕೊಂಡಿದ್ದಾರೆ. ತುಮಕೂರು ನಾಗರಿಕ ಸಮಿತಿ ಮನೆ, ಮನೆಗೆ ಆಹಾರ ಪೊಟ್ಟಣ ವಿತರಿಸಿದೆ.
ಡ್ರೋಣ್ ಕ್ಯಾಮರಾ ಕಣ್ಣು: ಸೀಲ್ಡೌನ್ ಪ್ರದೇಶದ ಚಲನವಲನಗಳನ್ನು ಕಮಾಂಡ್ ಸೆಂಟರ್ ಮೂಲಕ ಗಮನಿಸಲು ಎಲ್ಲ ಸಂಪರ್ಕ ರಸ್ತೆಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲು ಹಾಗೂ ಸ್ಮಾರ್ಟ್‌ಸಿಟಿ ಕಂಪನಿ ಮೂಲಕ ಡ್ರೋಣ್ ಕ್ಯಾಮರಾ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಅಲ್ಲದೆ, 16ನೇ ಕ್ರಾಸ್ ಬಳಿಯಿರುವ ಸಿದ್ಧಾರ್ಥ ಹೈಸ್ಕೂಲ್ ಕಟ್ಟಡದಲ್ಲಿ ಕಂಟ್ರೋಲ್ ರೂಂ ತೆರೆಯುವ ಚಿಂತನೆ ನಡೆದಿದೆ.
ಜಿಲ್ಲೆಗೆ ಕಂಟಕವಾದ ಗುಜರಾತಿಗಳು : ಗುಜರಾತ್‌ನಿಂದ ಮಾ.12ರಂದು ಧರ್ಮಬೋಧನೆಗೆಂದು ಬಂದಿದ್ದ 14 ಜನ ಪಿಎಚ್ ಕಾಲನಿಯ ನಿಮ್ರಾ ಮಸೀದಿಯಲ್ಲಿ ಆಶ್ರಯ ಪಡೆದಿದ್ದರು. ಅಷ್ಟೂ ಮಂದಿಗೆ ಲಾಕ್‌ಡೌನ್ ಜಾರಿಯಾದಾಗಿನಿಂದ ನಿರಂತರ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಅವರ‌್ಯಾರಿಗೂ ಸಮಸ್ಯೆ ಕಂಡುಬಂದಿರಲಿಲ್ಲ. ಆದರೆ, ಇತ್ತೀಚೆಗೆ ಒಬ್ಬರಲ್ಲಿ ಜ್ವರ ಕಾಣಿಸಿಕೊಂಡಿದ್ದು, ಅವರ ಗಂಟಲುದ್ರವ, ರಕ್ತ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಕರೊನಾ ಸೋಂಕು ಒಬ್ಬರಿಗೆ ದೃಢಪಟ್ಟಿದೆ. ಮಸೀದಿಯಲ್ಲೇ ಇದ್ದ 13 ಜನರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ 14 ಜನರಿಗೆ ಪ್ರಾಥಮಿಕ ಹಾಗೂ ದ್ವಿತೀಯ ಹಂತದಲ್ಲಿ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗಿದೆ. ಸೋಂಕಿತ ಎಲ್ಲೆಲ್ಲಿ ಸಂಚರಿಸಿದ್ದಾರೆ? ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ.
ಕಂಟೈನ್ಮೆಂಟ್ ಝೋನ್: ಸೀಲ್ಡೌನ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದ್ದು, ಈ ಪ್ರದೇಶದ ಸಮಗ್ರ ನಿರ್ವಹಣೆಗೆ ಇನ್ಸಿಡೆಂಟ್ ಕಮಾಂಡರ್ ನೇಮಿಸಲಾಗಿದೆ. ಈ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಯ ಪರಿಸರ ಇಂಜಿನಿಯರ್ ಮೃತ್ಯುಂಜಯಗೆ ವಹಿಸಲಾಗಿದೆ. ಇಡೀ ಪ್ರದೇಶದಲ್ಲಿ ಗಸ್ತು ನಿರ್ವಹಿಸಲು ಎಎಸ್ಪಿ ಟಿ.ಜೆ.ಉದೇಶ್ ಉಸ್ತುವಾರಿಯಲ್ಲಿ 60 ಪೊಲೀಸರು ಹಾಗೂ ಎರಡು ಸಶಸ್ತ್ರ ಪೊಲೀಸ್ ತುಕಡಿ ನಿಯೋಜಿಸಲಾಗಿದೆ. ಸೀಲ್ಡೌನ್ ಪ್ರದೇಶ ಕಿಷ್ಕಿಂಧೆಯಂತಿದ್ದು, 452 ಮನೆಗಳಿವೆ. 4,000 ಜನಸಂಖ್ಯೆ ಇದೆ, ಶುಕ್ರವಾರ ಬೆಳಗ್ಗೆ ಅಧಿಕಾರಿಗಳು ತುರ್ತಾಗಿ ಮನೆಮನೆ ಸಮೀಕ್ಷೆ ಕೈಗೊಂಡರು. ಆಶಾ ಕಾರ್ಯಕರ್ತೆಯರು ಜ್ವರ, ನೆಗಡಿ, ಕೆಮ್ಮ ಸೇರಿ ಕರೊನಾ ಲಕ್ಷಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಮೇಲಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ.