ತುಮಕೂರು ನಗರ ಪೊಲೀಸ್ ಠಾಣೆ ಸೀಲ್‌ಡೌನ್

4
Published on

ತುಮಕೂರು: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದೆ. ತುಮಕೂರು ನಗರದಲ್ಲಿ ಒಂದೇ ದಿನ 31 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ. ಪ್ರೊಬೆಷನರಿ ಪಿಎಸ್ಸೈ ಸೇರಿ ಐವರು ಪೊಲೀಸರಿಗೆ ಸೋಂಕು ತಗುಲಿದ್ದು, ನಗರ ಠಾಣೆ ಸೀಲ್‌ಡೌನ್ ಮಾಡಲಾಗಿದೆ. ತುಮಕೂರು ತಾಲೂಕು ಒಂದರಲ್ಲೇ ಸೋಂಕಿತರ ಸಂಖ್ಯೆ ದ್ವಿಶತಕ ಮುಟ್ಟಿದೆ. ಕರೊನಾ ಮತ್ತೊಂದು ಬಲಿಪಡೆದಿದ್ದು ಮೃತರ ಸಂಖ್ಯೆಯು 15ಕ್ಕೇರಿದೆ.

ಜಿಲ್ಲೆಯಲ್ಲಿ 513 ಪ್ರಕರಣ: ಸೋಮವಾರ ಹೊಸದಾಗಿ 35 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 513ಕ್ಕೇರಿದೆ. ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಐವರು ಪೊಲೀಸರಿಗೆ ಸೋಂಕು ತಗುಲಿರುವುದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ತುಮಕೂರು 31, ಗುಬ್ಬಿ 2, ಕುಣಿಗಲ್ ಹಾಗೂ ಶಿರಾದಲ್ಲಿ ತಲಾ ಓರ್ವರಿಗೆ ಸೋಂಕು ತಗುಲಿದೆ. 361 ಸಕ್ರಿಯ ಪ್ರಕರಣಗಳಿದ್ದು ಸೋಮವಾರ 3 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಐವರು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭೇದಿ, ಮಧುಮೇಹದಿಂದ ಬಳಲುತ್ತಿದ್ದ ಸದಾಶಿವನಗರದ 58 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮರಣಹೊಂದಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಅವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮೃತ ಮಹಿಳೆಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

ನಗರ ಠಾಣೆ ಸೀಲ್‌ಡೌನ್!: ಪ್ರೊಬೆಷನರಿ ಪಿಎಸ್ಸೈ, ಮಹಿಳಾ ಪೊಲೀಸ್ ಸೇರಿ ಐವರಿಗೆ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಬಾರ್‌ಲೈನ್ ರಸ್ತೆಗೆ ಹೊಂದಿಕೊಂಡಿರುವ ನಗರ ಠಾಣೆಯನ್ನು 3 ದಿನ ಸೀಲ್ ಡೌನ್ ಮಾಡಲಾಗಿದೆ. ಬಾರ್‌ಲೈನ್ ರಸ್ತೆಯ ಪೊಲೀಸ್ ವಸತಿಗೃಹ, ನಗರ ಠಾಣೆ ಸಿಪಿಐ ಕಚೇರಿಯನ್ನು ಸಹ ಸೀಲ್‌ಡೌನ್ ಮಾಡಲಾಗಿದೆ. ನಗರ ಠಾಣೆ ಪಿಎಸ್ಸೈ, ಸಿಪಿಐ ಸೇರಿ ಎಲ್ಲ ಸಿಬ್ಬಂದಿ ಹೋಂಕ್ವಾರಂಟೈನ್‌ಗೊಳಗಾಗಿದ್ದಾರೆ.

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೂ ಕರೊನಾ : ನಗರದ ಸಿದ್ದರಾಮೇಶ್ವರ ಬಡಾವಣೆಯ 25 ವರ್ಷದ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೂ ಕರೊನಾ ಸೋಂಕು ತಗುಲಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು, ಸೋಮವಾರ ಸೋಂಕು ಇರುವುದು ದೃಢಪಟ್ಟಿದೆ. ಗುಬ್ಬಿ ತಾಲೂಕಿನ ಕೆಜಿ ಟೆಂಪಲ್‌ನ 28 ವರ್ಷದ ಯುವಕನಿಗೆ ಕೆಮ್ಮು ಕಾಣಿಸಿಕೊಂಡಿದ್ದು, ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು ಸೋಂಕು ದೃಢಪಟ್ಟಿದೆ. ಮೂವರು ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹಚ್ಚಲಾಗಿದೆ. ತಾಲೂಕಿನ ಚನ್ನೇನಹಳ್ಳಿಯ 36 ವರ್ಷದ ವ್ಯಕ್ತಿಗೆ ಜ್ವರ,ಕೆಮ್ಮು , ಉಸಿರಾಟದ ತೊಂದರೆ ಇದ್ದು ಸೋಂಕು ದೃಢಪಟ್ಟಿದೆ. 8 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹಚ್ಚಲಾಗಿದೆ. ಶಿರಾ ನಗರದ 31 ವರ್ಷದ ವ್ಯಕ್ತಿಯಲ್ಲಿ ಕೆಮ್ಮು ಕಾಣಿಸಿಕೊಂಡಿದ್ದು, ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ ವೇಳೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕು ತಗುಲಿರುವುದು ದೃಢಪಟ್ಟಿದೆ. 7 ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಕುಣಿಗಲ್ ತಾಲೂಕು ಹುಲಿಯೂರುದುರ್ಗದ 16 ವರ್ಷದ ಬಾಲಕನಿ ಜ್ವರ, ಉಸಿರಾಟ ತೊಂದರೆಯಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕು ಇರುವುದು ದೃಢಪಟ್ಟಿದ್ದು, ಐವರು ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ.

ಕೆಎಸ್‌ಆರ್‌ಪಿ ಕರೊನಾತಂಕ ! : ತುಮಕೂರಿನ ಕೆಆರ್ ಬಡಾವಣೆಯ ಬಾರ್‌ಲೈನ್ ರಸ್ತೆಯಲ್ಲಿರುವ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಬೆಂಗಳೂರಿಗೆ ಕರ್ತವ್ಯಕ್ಕೆ ತೆರಳಿ ಹಿಂದಿರುಗಿದ್ದ ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಇದೇ ತುಮಕೂರು ಪೊಲೀಸರಿಗೆ ಕಂಟಕವಾಗಿ ಪರಿಣಮಿಸಿದೆ. 29 ಮಂದಿ ಕೆಎಸ್‌ಆರ್‌ಪಿ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೊಬೆಷನರಿ ಪಿಎಸ್ಸೈ ಮೂಲಕ ಸೊಂಕು ಈಗ ಹರಡಿದೆ. ಗ್ರಾಮಾಂತರ ಠಾಣೆ, ನಗರ ಠಾಣೆ ಪೊಲೀಸರಿಗೆ ಸೋಂಕು ತಗುಲಿದ್ದು ಪೊಲೀಸ್ ವಸತಿಗೃಹದಲ್ಲಿರುವ ಕುಟುಂಬದವರಲ್ಲೂ ಆತಂಕ ಕಾಣಿಸಿಕೊಂಡಿದೆ. ಭಾನುವಾರ ತಾನೇ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸೀಲ್‌ಡೌನ್ ಮಾಡಲಾಗಿತ್ತು.

ಗ್ರಾಮಾಂತರದಲ್ಲಿ 7 ಪ್ರಕರಣ: ಸೋಂಕಿತರ ಸಂಪರ್ಕದಲ್ಲಿದ್ದ ತುಮಕೂರು ತಾಲೂಕಿನ ನೇರಳಾಪುರದ 58 ವರ್ಷದ ಮಹಿಳೆಗೂ ಸೋಂಕು ತಗುಲಿದೆ. ಮೂವರು ಸಂಪರ್ಕಿತರನ್ನು ಪತ್ತೆಹಚ್ಚಲಾಗಿದೆ. ಅಗಳಕೋಟೆಯ ಸಿದ್ದಾರ್ಥ ಮೆಡಿಕಲ್ ಕಾಲೇಜಿನ 24 ವರ್ಷದ ವ್ಯಕ್ತಿಗೆ ಹಾಗೂ 24 ವರ್ಷದ ಮಹಿಳೆಗೆ, ಬೆಳ್ಳಾವಿಯ ಟಿ.ಗೊಲ್ಲಹಳ್ಳಿ 26 ವರ್ಷದ ವ್ಯಕ್ತಿಗೆ, ಊರುಕೆರೆಯ 38 ವರ್ಷದ ಮಹಿಳೆ, ಹೆಗ್ಗೆರೆಯ 58 ವರ್ಷದ ವ್ಯಕ್ತಿ ಹಾಗೂ ಹಿರೇಹಳ್ಳಿಯ 30 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net