ತುಮಕೂರು ಪೆಕ್ಸ್-2020ರಲ್ಲಿ ವಿಶೇಷ ಅಂಚೆ ಲಕೋಟೆಗಳ ಲೋಕಾರ್ಪಣೆ

21Tmk_Postal_Programme
Published on

ತುಮಕೂರು: ಶತಮಾನದ ಸಂತ ಡಾ.ಶಿವಕುಮಾರ ಸ್ವಾಮೀಜಿ, ಚೇಳೂರಿನ ಸಿದ್ದು ಹಲಸು, ತಿಪಟೂರು ತೆಂಗು ಸೇರಿ ವಿಶೇಷ ಅಂಚೆ ಲಕೋಟೆಗಳನ್ನು ಲೋಕಾರ್ಪಣೆ ಮಾಡಲಾಯಿತು.

ನಗರದ ಶ್ರೀ ಸಿದ್ದಿ ವಿನಾಯಕ ಸೇವಾ ಮಂಡಳಿಯಲ್ಲಿ ಫೆ.21ರಿಂದ 23ರವೆರಗೆ ಹಮ್ಮಿಕೊಂಡಿರುವ 3 ದಿನಗಳ ವಿಭಾಗೀಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಮೇಳ ‘ತುಮಕೂರು ಪೆಕ್ಸ್-2020’ರಲ್ಲಿ ಶುಕ್ರವಾರ ವಿಶೇಷ ಅಂಚೆ ಲಕೋಟೆಗಳು, ಅಂಚೆ ಚೀಟಿಗಳನ್ನು ಸಂಸದ ಜಿ.ಎಸ್.ಬಸವರಾಜು ಬಿಡುಗಡೆ ಗೊಳಿಸಿದರು.

ಸ್ಪರ್ಧಾತ್ಮಕ ವ್ಯವಹಾರಿಕ ಅಗತ್ಯಗಳಿಗೆ ಅನುಸಾರವಾಗಿ ಅಂಚೆ ಇಲಾಖೆ ಹೊಂದಿಕೊಳ್ಳಬೇಕು. ಸಂಪರ್ಕ ಕ್ರಾಂತಿಯ  ಯುಗದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಂಚೆ ಇಲಾಖೆ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಜತೆಗೆ ಹೊಸ ಸೇವಾ ಸೌಲಭ್ಯಗಳನ್ನು ನೀಡುವ ಮೂಲಕ ಇಲಾಖೆಯು ಜನಸಂಪರ್ಕವನ್ನು ಹೆಚ್ಚಿಸಿಕೊಳ್ಳಬೇಕು. ಅಂಚೆ ಇಲಾಖೆಯಿಂದ ಸರ್ಕಾರಕ್ಕೆ ನಿರೀಕ್ಷಿತ ಆದಾಯ ಬರುವುದಿಲ್ಲ. ಜನರಿಗೆ ಹೊಸ, ಹೊಸ ಸೇವೆಗಳನ್ನು ಪರಿಚಯಿಸಿ ಆದಾಯ ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಹೊಸತನಕ್ಕೆ ಒಗ್ಗಿಕೊಳ್ಳಬೇಕಿದೆ ಎಂದು ಸಂಸದ ಜಿ.ಎಸ್. ಬಸವರಾಜು ಸಲಹೆ ನೀಡಿದರು

ಇಂದಿನ ಪೀಳಿಗೆಯವರಲ್ಲಿ ಅಂಚೆ ಚೀಟಿ ಸಂಗ್ರಹಣೆ ಹಾಗೂ ಪ್ರದರ್ಶನದ ಮೂಲಕ ಹಲವಾರು ವಿಷಯಗಳ ಬಗ್ಗೆ ಅಧ್ಯಯನ, ತಿಳಿವಳಿಕೆಗೆ ಅನುಕೂಲವಾಗುತ್ತದೆ ಎಂದು ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್.ಮೂರ್ತಿ ಹೇಳಿದರು.

ಶಿವಕುಮಾರ ಶ್ರೀಗಳ ಹೆಸರಿನಲ್ಲಿ ಪೋಸ್ಟ್ ಕವರ್ 2 ಸಲ ಅಂಚೆ ಇಲಾಖೆ ಬಿಡುಗಡೆ ಮಾಡಿದ್ದು ಈಗ ಮುದ್ರೆ (ಸೀಲ್) ಕೂಡ ಬಿಡುಗಡೆ ಮಾಡಿ ಲಿಂಗೈಕ್ಯ ಶ್ರೀಗಳಿಗೆ ಗೌರವ ಸೂಚಿಸುತ್ತಿದೆ ಎಂದು ಅಂಚೆ ಅಧೀಕ್ಷಕ ಕೆ.ವಿ.ಅನಂತ್‌ರಾಮ್ ತಿಳಿಸಿದರು. ಬಾಪೂಜಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎನ್.ಬಸವಯ್ಯ ಉಪಸ್ಥಿತರಿದ್ದರು.

ವಿಶೇಷ ಜಾತಿಯ ಹಲಸು: ಸಿದ್ದು ಹಲಸು ವಿಶೇಷ ಜಾತಿಯ ಹಣ್ಣಾಗಿದ್ದು, ಇದು ಚೇಳೂರಿನ ಎಸ್.ಎಸ್.ಪರಮೇಶ್ ಸಂಶೋಧನೆಯ ಫಲವಾಗಿದೆ. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಸಿಎಚ್‌ಆರ್) ವಿಶೇಷವಾಗಿ ಗುರುತಿಸಿದ್ದು, ಇದು ಪಶ್ಚಿಮ ಘಟ್ಟದ ಬಹು ಉಪಯೋಗಿ ಬೆಳೆಯಾಗಿದೆ. ಈ ವಿಶೇಷ ತಳಿಯನ್ನು ಅಂಚೆ ಇಲಾಖೆ ವಿಶೇಷ ಲಕೋಟೆ ರೂಪದಲ್ಲಿ ಹೊರತಂದಿರುವುದು ಗಮನಾರ್ಹವೆನಿಸಿದೆ. 50 ವರ್ಷ ಪೂರೈಸಿರುವ ಬಾಪೂಜಿ ಶಿಕ್ಷಣ ಸಂಸ್ಥೆಯು ವಿಶೇಷ ಅಂಚೆ ಲಕೋಟೆಯನ್ನು ಸಹ ಬಿಡುಗಡೆ ಮಾಡಲಾಯಿತು.

ಸಿದ್ದು ಹಲಸು ತಳಿ ಅಭಿವೃದ್ಧಿ ಪಡಿಸಿದ ಸಂಶೋಧಕ ರೈತನನ್ನು ಗುರುತಿಸಿದ್ದಲ್ಲದೆ, ಈ ಸಾಧನೆಯನ್ನು ಅಂಚೆ ಇಲಾಖೆಯ ಇತಿಹಾಸದಲ್ಲಿ ದಾಖಲಿಸಿದ್ದಕ್ಕಾಗಿ ನಿಜಕ್ಕೂ ಹರ್ಷ ಎನಿಸಿದೆ. ಪರಮೇಶ್ ಸಿದ್ದು ಹಲಸು ತಳಿ ಪಾಲನಾ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net