

ತುಮಕೂರು: ಮಹಾನಗರ ಪಾಲಿಕೆ 4 ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಫೆ.20ರಂದು ನಡೆಯಲಿದ್ದು, ಹಣಕಾಸು ಸ್ಥಾಯಿಸಮಿತಿಗೆ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್‌ನಲ್ಲಿ ಹಗ್ಗಜಗ್ಗಾಟ ಏರ್ಪಟ್ಟಿದೆ. ಕಾಂಗ್ರೆಸ್‌ನ ಟಿ.ಎಂ.ಮಹೇಶ್ ತೆರಿಗೆ ನಿರ್ಧರಣೆ, ಹಣಕಾಸು ಸ್ಥಾಯಿಸಮಿತಿ ಅಧ್ಯಕ್ಷ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಇನ್ನು ಮೇಯರ್ ಆಯ್ಕೆ ವೇಳೆ ಬಹಿರಂಗವಾಗಿ ಅಪಸ್ವರ ಎತ್ತಿದ್ದ ಕಾಂಗ್ರೆಸ್‌ನ ಹಿರಿಯ ಸದಸ್ಯ ಸೈಯದ್ ನಯಾಜ್ ಅವರನ್ನು ಅಧಿಕಾರದಿಂದ ದೂರವಿಡಲಾಗಿದೆ.
ಮೇಯರ್-ಉಪಮೇಯರ್ ಆಯ್ಕೆ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದು, ಬಿಜೆಪಿಗೆ 2 ಸ್ಥಾಯಿಸಮಿತಿ ಬಿಟ್ಟುಕೊಡಲು ಒಪ್ಪಿಕೊಂಡಿವೆ. ಪ್ರಮುಖ ಹಣಕಾಸು ಸಮಿತಿಯನ್ನು ಕಾಂಗ್ರೆಸ್ ತನ್ನಲ್ಲೇ ಇಟ್ಟುಕೊಂಡು, ಆರೋಗ್ಯ ಸ್ಥಾಯಿಸಮಿತಿಯನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಪಟ್ಟಣ ಯೋಜನೆ ಹಾಗೂ ಲೆಕ್ಕಪತ್ರ ಸ್ಥಾಯಿಸಮಿತಿ ಬಿಜೆಪಿ ಪಾಲಾಗಲಿದೆ.
ಹಣಕಾಸು ಮಹೇಶ್: ಕಾಂಗ್ರೆಸ್‌ನ ಫರಿದಾಬೇಗಂ ಮೇಯರ್ ಆಗಿದ್ದು ಕಾಂಗ್ರೆಸ್-ಜೆಡಿಎಸ್ ಈಗ ಹಣಕಾಸು ಸ್ಥಾಯಿಸಮಿತಿಗಾಗಿ ಪೈಪೋಟಿ ನಡೆಸಿವೆ. ಆದರೂ, ಕಾಂಗ್ರೆಸ್‌ನ ಮಹೇಶ್ ಅಂತಿಮವಾಗಿ ಹಣಕಾಸು ಸ್ಥಾಯಿಸಮಿತಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಅಧಿಕಾರ ಹಂಚಿಕೆಯಂತೆ ಪಕ್ಷದ ವರಿಷ್ಠರು ಸಹ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೇಯರ್, ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜತೆ ಕೈಜೋಡಿಸಲು ತುದಿಗಾಲ ಮೇಲೆ ನಿಂತು ಬಂಡಾಯದ ಬಾವುಟ ಹಾರಿಸಿದ್ದ ಜೆಡಿಎಸ್‌ನ ಟಿ.ಕೆ.ನರಸಿಂಹಮೂರ್ತಿಗೆ ಸ್ಥಾಯಿಸಮಿತಿ ಅಧ್ಯಕ್ಷ ಭಾಗ್ಯ ಒದಗಿಬಂದಿದೆ. ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷರಾಗಿ ನರಸಿಂಹಮೂರ್ತಿ ಆಯ್ಕೆ ಹಾದಿ ಸುಗಮವಾಗಿದೆ.
ಬಿಜೆಪಿಗೆ 2 ಸ್ಥಾಯಿಸಮಿತಿ: ಬಿಜೆಪಿಯ ಎಚ್.ಮಲ್ಲಿಕಾರ್ಜುನಯ್ಯ ಪಟ್ಟಣ ಯೋಜನೆ ಹಾಗೂ ಸುಧಾರಣಾ ಸ್ಥಾಯಿಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಚಂದ್ರಕಲಾ ಹೆಸರನ್ನು ವರಿಷ್ಠರು ಅಂತಿಮಗೊಳಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ: ಟಿ.ಎಂ. ಮಹೇಶ್, ಷಕೀಲ್ ಅಹಮದ್ ಷರೀಫ್, ಮುಜಿದಾ ಖಾನಂ, ನೂರು ಉನ್ನೀಸಾ ಬಾನು (ಕಾಂಗ್ರೆಸ್), ಧರಣೇಂದ್ರ ಕುಮಾರ್, ಬಿ.ಎಸ್.ಮಂಜುನಾಥ್ (ಜೆಡಿಎಸ್), ನಳಿನ (ಬಿಜೆಪಿ).
ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಟಿ.ಕೆ.ನರಸಿಂಹಮೂರ್ತಿ, ಲಲಿತಾ, ಎ.ಶ್ರೀನಿವಾಸ್ (ಜೆಡಿಎಸ್), ಸೈಯದ್ ನಯಾಜ್, ಎಂ.ಪ್ರಭಾವತಿ (ಕಾಂಗ್ರೆಸ್), ಎಚ್.ಎಂ.ದೀಪಶ್ರೀ, ಬಿ.ಜಿ.ಕೃಷ್ಣಪ್ಪ (ಬಿಜೆಪಿ).
ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ: ಎಚ್.ಮಲ್ಲಿಕಾರ್ಜುನಯ್ಯ, ವಿ.ಎಸ್.ಗಿರಿಜಾ, ಎಚ್.ಎಸ್.ನಿರ್ಮಲಾ, ಬಿ.ಜಿ.ವೀಣಾ , ಎಂ.ಸಿ.ನವೀನಾ (ಬಿಜೆಪಿ) ನಾಸಿರಾಬಾನು (ಪಕ್ಷೇತರ), ಬಿ.ಎಸ್.ರೂಪಶ್ರೀ (ಕಾಂಗ್ರೆಸ್).
ಲೆಕ್ಕಪತ್ರ ಸ್ಥಾಯಿ ಸಮಿತಿ: ಚಂದ್ರಕಲಾ, ಕೆ.ಎಸ್.ಮಂಜುಳ, ಎಸ್. ಮಂಜುನಾಥ್, ಸಿ.ಎನ್.ರಮೇಶ್, ಇನಾಯತುಲ್ಲಾ ಖಾನ್, ಜೆ.ಕುಮಾರ್, ವಿಷ್ಣುವರ್ಧನ್.
11 ಗಂಟೆಗೆ ಪಾಲಿಕೆ ಸಭಾಂಗಣದಲ್ಲಿ ಸಭೆ: 4 ಸ್ಥಾಯಿಸಮಿತಿಯ ಅಧ್ಯಕ್ಷರ ಆಯ್ಕೆಗೆ ಮೇಯರ್ ಫರಿದಾ ಬೇಗಂ ಅಧ್ಯಕ್ಷತೆಯಲ್ಲಿ ಫೆ.20ರಂದು ಬೆಳಗ್ಗೆ 11 ಗಂಟೆಗೆ ಪಾಲಿಕೆಯ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಆಯುಕ್ತ ಟಿ.ಭೂಬಾಲನ್ ಸಹ ಉಪಸ್ಥಿತರಿರುವರು.