ವಿಡಿಯೋ ಸಭೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ಬಜೆಟ್!

Tmk_Palike1 (1)
Published on

ತುಮಕೂರು: ರಾಜ್ಯದಲ್ಲೇ ಮೊದಲ ಕಾಗದರಹಿತ 'ಇ-ಬಜೆಟ್' ಮಂಡಿಸಿರುವ ಹೆಗ್ಗಳಿಕೆ ಹೊಂದಿರುವ ತುಮಕೂರು ಮಹಾನಗರ ಪಾಲಿಕೆ ಇನ್ನೊಂದು ಹೆಜ್ಜೆ ಮುಂದಿಡಲು ಸಿದ್ಧತೆ ನಡೆಸಿದೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ವಿಡಿಯೋ ಮೂಲಕವೇ ತುರ್ತು ಸಭೆ ನಡೆಸಿ ಪಾಲಿಕೆಯ ಬಜೆಟ್‌ಗೆ ಅನುಮೋದನೆ ನೀಡುವಂತೆ ಆಯುಕ್ತ ಟಿ.ಭೂಬಾಲನ್ ಮನವಿ ಮಾಡಿದ್ದಾರೆ.

ದೇಶವ್ಯಾಪಿ ಲಾಕ್‌ಡೌನ್ ಇರುವುದರಿಂದ ಸಭೆ ನಡೆಸುವುದು ಸಾಧುವಲ್ಲ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿ ಬಜೆಟ್‌ಗೆ ಅನುಮೋದನೆ ನೀಡುವಂತೆ ಮೇಯರ್ ಫರೀದಾಬೇಗಂ ಹಾಗೂ ಹಣಕಾಸು ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್‌ಗೆ ಎರಡು ಬಾರಿ ಆಯುಕ್ತರು ಪತ್ರ ಬರೆದಿದ್ದಾರೆ.

ಆರ್ಥಿಕ ವರ್ಷ ಪ್ರಾರಂಭಕ್ಕೆ ಕನಿಷ್ಠ 3 ವಾರಗಳ ಮುನ್ನ ಬಜೆಟ್ ಅನ್ನು ಕೌನ್ಸಿಲ್ ಸಭೆಯಲ್ಲಿ ಅನುಮೋದಿಸಿ ಅದರ ಒಂದು ಪ್ರತಿಯನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಆದರೆ, ಈವರೆಗೂ ಇದು ಸಾಧ್ಯವಾಗಿಲ್ಲ. ಕರೊನಾ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಕಚೇರಿ ಸಿಬ್ಬಂದಿ ವೇತನ ಹಾಗೂ ತುರ್ತು ಕಾಮಗಾರಿಗಳ ಬಿಲ್‌ಗಳನ್ನು ಪಾವತಿಸಲೂ ಸಹ ಸಾಧ್ಯವಾಗಿಲ್ಲ. ಅಲ್ಲದೆ, ಕರೊನಾ ಸೋಂಕು ಹರಡದಂತೆ ತುರ್ತು ಕ್ರಮಕೈಗೊಳ್ಳಲು ಸಹ ಆರ್ಥಿಕ ವೆಚ್ಚ ಹೊಂದಿಸಿಕೊಳ್ಳಲಾಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ 2019-20ನೇ ಸಾಲಿನ ಪರಿಷ್ಕೃತ ಹಾಗೂ 2020-21 ನೇ ಸಾಲಿನ ಬಜೆಟ್‌ನ ಅಂದಾಜು ಪಟ್ಟಿಯನ್ನು ಸ್ಥಾಯಿ ಸಮಿತಿ ಅನುಮೋದಿಸಿ ಬಳಿಕ ತುರ್ತಾಗಿ ಕೌನ್ಸಿಲ್ ಸಭೆ ಕರೆದು ಬಜೆಟ್ ಮಂಡಿಸುವ ಅನಿವಾರ್ಯತೆಯನ್ನು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಬಜೆಟ್: ಕರೊನಾ ತಡೆಗಟ್ಟಲು ಕೌನ್ಸಿಲ್ ಸಭೆ ನಡೆಸುವುದು ಉಚಿತವಲ್ಲವೆಂದು ಮನಗಂಡು ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಬಜೆಟ್ ಮಂಡಿಸಿ ಅನುಮೋದನೆ ಪಡೆಯುವುದು ಸೂಕ್ತವೆಂಬ ಅಂಶವನ್ನು ಮೇಯರ್ ಹಾಗೂ ಹಣಕಾಸು ಸ್ಥಾಯಿ ಸಮಿತಿಗೆ ಪತ್ರದಲ್ಲೇ ಆಯುಕ್ತ ಭೂಬಾಲನ್ ವಿವರಿಸಿದ್ದಾರೆ.

ಬಜೆಟ್ ಮಂಡನೆಗೆ 2 ಪತ್ರ:  

ಬಜೆಟ್ ಮಂಡನೆ ಕುರಿತು 2 ಬಾರಿ ಆಯುಕ್ತರು ಪತ್ರ ಬರೆದಿದ್ದಾರೆ. ಇದನ್ನು ಮೇಯರ್ ಆಗಲಿ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. ಈ ಪತ್ರ ಬರೆಯುವ ವಾರದ ಮೊದಲೇ ಭೂಬಾಲನ್ ಅವರು ಮೇಯರ್ ಫರೀದಾಬೇಗಂ ಹಾಗೂ ಹಣಕಾಸು ಸ್ಥಾಯಿಸಮಿತಿ ಅಧ್ಯಕ್ಷ ಮಹೇಶ್‌ಗೆ ಪತ್ರಬರೆದು ವಸ್ತುಸ್ಥಿತಿ ವಿವರಿಸಿ ತುರ್ತಾಗಿ ಸಭೆ ಕರೆದು ಬಜೆಟ್ ಅನುಮೋದಿಸುವಂತೆ ಕೋರಿದ್ದಾರೆ ಎನ್ನಲಾಗಿದೆ.

ಕಾರ್ಪೋರೇಟರ್‌ಗಳ ಬಳಿ ಲ್ಯಾಪ್‌ಟಾಪ್ !: ತುಮಕೂರು ಪಾಲಿಕೆಯ 35 ಚುನಾಯಿತ ಸದಸ್ಯರಲ್ಲೂ ಲ್ಯಾಪ್‌ಟ್ಯಾಪ್ ಇದೆ. ಆದ್ದರಿಂದ ವಿಡಿಯೋ ಸಭೆ ಮೂಲಕವೇ ಬಜೆಟ್ ಮಂಡಿಸಿ ಅನುಮೋದನೆ ಪಡೆಯಬಹುದಾಗಿದೆ. ಈ ಪ್ರಯೋಗವನ್ನು ಬಿಬಿಎಂಪಿ ಮಾಡಿ ಯಶಸ್ವಿ ಕೂಡ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net