

ತುಮಕೂರು: ನಗರಕ್ಕೆ ಧರ್ಮ ಪ್ರಚಾರಕ್ಕೆಂದು ಬಂದಿದ್ದ ಕರೊನಾ ಸೋಂಕಿತನ ಟ್ರ್ಯಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ, ಆತ ಸಂಚರಿಸಿರುವ ನಗರದ ಮರಳೂರುದಿಣ್ಣೆ ಹಾಗೂ ಮಂಡಿಪೇಟೆಯನ್ನು ಜಿಲ್ಲಾಡಳಿತ ‘ಬಫರ್ ರೆನ್’ ಎಂದು ಘೋಷಿಸಿದೆ.!
ಈ ಎರಡೂ ಪ್ರದೇಶಗಳ ಜತೆಗೆ ಸೀಲ್‌ಡೌನ್ ಮಾಡಲಾಗಿರುವ ಪೂರ್‌ಹೌಸ್ ಕಾಲನಿ (ಪಿಎಚ್ ಕಾಲನಿ) ಸುತ್ತಮುತ್ತ 1 ಕಿ.ಮೀ., ಪ್ರದೇಶವನ್ನು ಇಂಟೆನ್ಸಿವ್ ಬಫರ್ ರೆನ್ ಎಂದು ಗುರುತಿಸಲಾಗಿದೆ.
ಮಾ.12ಕ್ಕೆ ಆಗಮಿಸಿದ್ದ ಗುಜರಾತ್ ಮೂಲದ 32 ವರ್ಷದ ವ್ಯಕ್ತಿ ಪೂರ್‌ಹೌಸ್ ಕಾಲನಿಯ ನಿಮ್ರಾ ಮಸೀದಿಯಲ್ಲಿ ನೆಲೆಸಿದ್ದು ಲಾಕ್‌ಡೌನ್ ಹಿನ್ನೆಲೆಯಲ್ಲಿ ಗುಜರಾತ್‌ಗೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ಅಂದಿನಿಂದ ಮಸೀದಿಯಲ್ಲೇ ಇದ್ದ ಈ ವ್ಯಕ್ತಿಗೆ ಏ.24ರಂದು ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹಾಗಾಗಿ, ಈತನ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚಲಾಗಿದೆ. ಜತೆಗೆ ಆತ ನಗರದಲ್ಲಿ ಎಲ್ಲೆಲ್ಲಿ ಓಡಾಡಿದ್ದ ಎಂಬ ಮಾಹಿತಿ ಕಲೆಹಾಕಲಾಗಿದ್ದು ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ.
ಟ್ರಾವೆಲ್ ಹಿಸ್ಟರಿ: ಮಾ.10 ರಂದು ಗುಜರಾತ್‌ನ ಸೂರತ್‌ನಿಂದ ಗಾಂಧಿಧಾಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟಿದ್ದ ಈತ ಮಾ.12 ರಂದು ಮಧ್ಯಾಹ್ನ 1ಕ್ಕೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಇಳಿದು, ಆಟೋ ಹಿಡಿದು ಮಂಡಿಪೇಟೆಯ ಜಾಮೀಯಾ ಮಸೀದಿ ತಲುಪಿದ್ದಾರೆ. ಮಾ.12 ರಿಂದ 15 ರವರೆಗೆ 3 ದಿನ ಮಸೀದಿಯಲ್ಲಿ ನೆಲೆಸಿದ್ದ, ನಂತರ ಮಾ.15ರಿಂದ 23ರ ವರೆಗೆ ಮರಳೂರು ದಿಣ್ಣೆಯ ಮಸ್ಜೀದ್ ಖುಬಾ ಸೇರಿಕೊಂಡಿದ್ದು ಧರ್ಮಬೋಧನೆ ಮಾಡಿದ್ದಾರೆ. ಮತ್ತೆ ಮಂಡಿಪೇಟೆ ಜಾಮೀಯಾ ಮಸೀದಿಯಲ್ಲಿ 1 ದಿನ ತಂಗಿದ್ದಾರೆ. ಎಲ್ಲ ಕಡೆಗೆ ಸೋಂಕಿತ ವ್ಯಕ್ತಿಯು ಆಟೋದಲ್ಲಿ ಪಯಣಿಸಿದ್ದಾರೆ.
ನಿಮ್ರಾ ಮಸೀದಿಯಲ್ಲಿ 1 ತಿಂಗಳು!: ಪೂರ್‌ಹೌಸ್ ಕಾಲನಿ ನಿಮ್ರಾ ಮಸೀದಿಗೆ ಮಾ.23ರಂದು ತಲುಪಿದ್ದು ಈ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾದ ಕಾರಣ ಏ.18ರವರೆಗೆ ಅಲ್ಲೇ ಆಶ್ರಯ ಪಡೆಯುವಂತಾಗಿದೆ. ಹೊರರಾಜ್ಯ, ಜಿಲ್ಲೆಯವರನ್ನು ರ‌್ಯಾಂಡಮ್ ಪರೀಕ್ಷೆಗೊಳಪಡಿಸುವ ಸಂದರ್ಭದಲ್ಲಿ ಏ.19ರಂದು ಜಿಲ್ಲಾ ಕರೊನಾ ಆಸ್ಪತ್ರೆಗೆ ಕರೆತಂದು ಗಂಟಲುದ್ರವ, ರಕ್ತ ಮಾದರಿ ಸಂಗ್ರಹಿಸಿ ಮತ್ತೆ ನಿಮ್ರಾ ಮಸೀದಿಯಲ್ಲೇ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿತ್ತು. 24 ರಂದು ಸೋಂಕು ದೃಢಪಟ್ಟಿದ್ದು ತಕ್ಷಣವೇ ಜಿಲ್ಲಾ ಕರೊನಾ ಆಸ್ಪತ್ರೆಗೆ ದಾಖಲಿಸಿ ಐಸೋಲೇಷನ್ ವಾರ್ಡ್‌ನಲ್ಲಿರಿಸಲಾಗಿದೆ.
ಸೋಂಕಿತನ ಸಂಪರ್ಕದಲ್ಲಿ 124 ಮಂದಿ! :ಗುಜರಾತ್ ಮೂಲದ 32 ವರ್ಷದ ಕರೊನಾ ಸೋಂಕಿತನ ಜತೆ ಪ್ರಾಥಮಿಕ ಸಂಪರ್ಕದಲ್ಲಿ 37 ಮಂದಿಯಿದ್ದು ಅವರನ್ನು ಕೋವಿಡ್ ಸೆಂಟರ್‌ನಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ದ್ವಿತೀಯ ಹಂತದಲ್ಲಿ ಸಂಪರ್ಕದಲ್ಲಿದ್ದ 87 ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ತುಮಕೂರಿಗೆ ಬಂದಿದ್ದ ವೇಳೆ ಆತ ಬಹುತೇಕ ಕಡೆ ಸಂಚರಿಸಲು ಆಟೋ ಬಳಸಿದ್ದು ಈಗ ಆಟೋ ಚಾಲಕರನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.
ಸೀಲ್ ಡೌನ್ ಪ್ರದೇಶದಲ್ಲಿ 452 ಮನೆಗಳಿದ್ದು 1900ಕ್ಕೂ ಹೆಚ್ಚು ಜನರಿದ್ದಾರೆ. ರಂಜಾನ್ ತಿಂಗಳಾಗಿರುವುದರಿಂದ 15 ಸ್ವಯಂ ಸೇವಕರನ್ನು ನೇಮಿಸಿ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ಮೇ 3ರವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ