

ತುಮಕೂರು: ಕಾಂಗ್ರೆಸ್ ಭವನ ನಿರ್ಮಿಸಲು ಪಾಲಿಕೆ ಒಡೆತನದ ವಿವಾದಿತ 2 ಎಕರೆ ಜಮೀನನ್ನು ನೋಂದಣಿ ಮಾಡಿಕೊಟ್ಟಿದ್ದ ಹಾಗೂ ಇ-ಖಾತೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದ ಕಂದಾಯ ಉಪ ಆಯುಕ್ತ ಬಿ.ಕೆ.ರುದ್ರಮುನಿಯನ್ನು ಕೊನೆಗೂ ಎತ್ತಂಗಡಿ ಮಾಡಲಾಗಿದೆ.
ಇ-ಖಾತೆಗಾಗಿ ಸಾರ್ವಜನಿಕರನ್ನು ಅಲೆದಾಡಿಸುತ್ತಿದ್ದ ಹಾಗೂ ದಲ್ಲಾಳಿಗಳ ಕೆಲಸಗಳನ್ನು ಬೇಗ ಮಾಡಿಕೊಡುತ್ತಿದ್ದ ಬಗ್ಗೆ ಜನರ ದೂರಿನ ಹಿನ್ನೆಲೆ ಕಂದಾಯ ಉಪ ಆಯುಕ್ತರ ವಿರುದ್ಧ ಸೂಕ್ತ ಶಿಸ್ತುಕ್ರಮಕ್ಕೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಪತ್ರ ಬರೆದಿದ್ದು ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಬುಧವಾರ ಉಪ ಆಯುಕ್ತರ ಹುದ್ದೆಯ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪದೇಪದೇ ಗೈರು: ಬಿ.ಕೆ.ರುದ್ರಮುನಿ ವಿರುದ್ಧ ಕರ್ತವ್ಯದಲ್ಲಿ ತೋರುತ್ತಿದ್ದ ಉದಾಸೀನತೆ, ಪಕ್ಷಪಾತಧೋರಣೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದೂರುಗಳು ಸ್ವೀಕೃತವಾಗಿದ್ದವು. ಅಲ್ಲದೆ, ಸಾಂದರ್ಭಿಕ ರಜೆಗಳು ಇಲ್ಲದೇ ಇದ್ದರು ಕಚೇರಿ ಮುಖ್ಯಸ್ಥರ ಪೂರ್ವಾನುಮತಿ ಪಡೆಯದೇ ಕಚೇರಿಗೆ ಪದೇಪದೇ ಗೈರಾಗಿ ಕೇಂದ್ರ ಸ್ಥಾನ ಬಿಟ್ಟು ತೆರಳುತ್ತಿದ್ದರಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆಯಾಗುತ್ತಿತ್ತು. ಜವಾಬ್ದಾರಿ, ಹೊಣೆಕಾರಿಕೆಗಳನ್ನು ಮುತುವರ್ಜಿವಹಿಸಿ ನಿಭಾಯಿಸದೇ ಪಾಲಿಕೆ ದೈನಂದಿನ ಕಾರ್ಯಗಳಿಗೆ ತೊಂದರೆಯಾಗಿದ್ದು ಇವರ ಸೇವೆ ಈ ಕಚೇರಿಗೆ ಅಗತ್ಯವಿರುವುದಿಲ್ಲ ಎಂದು ಆಯುಕ್ತರ ಪತ್ರದಲ್ಲಿ ಖಾರವಾಗಿ ತಿಳಿಸಿದ್ದಾರೆ.
ಕೈ ಭವನ ನೋಂದಣಿ ಎಡವಟ್ಟ !
ಮರಳೂರು ಗ್ರಾಮದ ಸರ್ವೆ ನಂಬರ್ 87/2ರ ಎರಡು ಎಕರೆ ಜಮೀನು ಸಂಬಂಧಿಸಿದಂತೆ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯದಲ್ಲಿ ಭೂ ಒಡೆತನ ಸಂಬಂಧಿಸಿದ ವ್ಯಾಜ್ಯಗಳು ನಡೆಯುತ್ತಿದ್ದರೂ ಸಂಪುಟ ಸಭೆಯ ತೀಮಾರ್ನದಂತೆ ಕಾಂಗ್ರೆಸ್ ಭವನಕ್ಕೆ ಕಾನೂನು ಉಲ್ಲಂಘಿಸಿ ಕಂದಾಯ ಉಪ ಆಯುಕ್ತ ರುದ್ರಮುನಿ ನೋಂದಣಿ ಮಾಡಿಕೊಟ್ಟಿದ್ದರು. ಇದು ಬಿಜೆಪಿ&ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿಗು ಕಾರಣವಾಗಿತ್ತು. ಅಲ್ಲದೆ, ಅಕ್ರಮವಾಗಿ ಭೂ ಪರಭಾರೆ ಮಾಡಿಕೊಟ್ಟಿದ್ದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಾಲಿಕೆ ಕಚೇರಿಯಲ್ಲೇ ರುದ್ರಮುನಿ ಅವರನ್ನು "ಸನ್ಮಾನಿಸಲು' ಮುಂದಾಗಿದ್ದರು.