

ತುಮಕೂರು: ಸರ್ಕಾರದಿಂದ ನಾಮನಿರ್ದೇಶನ ಮಾಡಿ ತುಮುಲ್ ಅಧ್ಯಕ್ಷ ಸ್ಥಾನಕ್ಕೆ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಅವರನ್ನು ಕೂರಿಸಬೇಕು ಎಂದು ಜಿಲ್ಲೆಯ ನಾಲ್ಕು ಜನ ಕಾಂಗ್ರೆಸ್ ಶಾಸಕರ ಸಹಿಯಿದ್ದ ಶಿಫಾರಸು ಪತ್ರಗಳನ್ನು ನೀಡಿದ ನಂತರ ಕಾರ್ಯತಂತ್ರ ಬದಲಿಸಿಕೊಂಡ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಪಾವಗಡ ಶಾಸಕ ಎಚ್.ವಿ.ವೆಂಕಟೇಶ್ ಹೆಸರನ್ನು ಮುನ್ನೆಲೆ ತಂದು ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಟಾಂಗ್ ನೀಡಿದ್ದಾರೆ ಎಂಬ ಗುಸುಗುಸು ಕಾಂಗ್ರೆಸ್ ಪಾಳಯದಲ್ಲಿಯೇ ಕೇಳಿಬಂದಿದೆ.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ರಾಜಕೀಯ ವಿಷಯದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯವಿರುವುದು ರಾಜಕೀಯ ವಲಯದ ಬಹಿರಂಗ ಸತ್ಯ. ರಂಗನಾಥ್ ಅವರನ್ನು ತುಮುಲ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಬಲ ಹೆಚ್ಚಿಸಿಕೊಳ್ಳಲು ಮಾಸ್ಟರ್ಪ್ಲಾನ್ ರೂಪಿಸಿದ್ದು ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆಶಿ ಬಣಕ್ಕೆ ಸಹಕಾರ ಕ್ಷೇತ್ರದ ಆಲದಮರ ಎನ್ನಿಸಿಕೊಂಡಿರುವ ಕೆ.ಎನ್.ರಾಜಣ್ಣ ಮಾಸ್ಟರ್ಸ್ಟ್ರೊಕ್ ನೀಡಿದ್ದಾರೆ.
ಎಲ್ಲರ ಸಹಕಾರದಿಂದ ತುಮುಲ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಲು ಉತ್ಪಾದಕರ ಹಿತ ಕಾಯುವ ನಿಟ್ಟಿನಲ್ಲಿ, ಸಂಸ್ಥೆಯ ಬೆಳವಣಿಗೆಗೆ ಶ್ರಮಿಸುತ್ತೇನೆ.
ಎಚ್.ವಿ.ವೆಂಕಟೇಶ್
ತುಮುಲ್ ಅಧ್ಯಕ್ಷ