ಶಾಸಕ ಎಚ್​.ವಿ.ವೆಂಕಟೇಶ್​ ತುಮುಲ್​ ನೂತನ ಅಧ್ಯಕ್ಷ

Tumul
Published on

*ಎಸ್​.ಆರ್​.ಗೌಡ ವಿರುದ್ಧ ಗೆಲುವು * ಕಾಂಗ್ರೆಸ್​ನಿಂದಲೂ ಒಂದು ಅಡ್ಡ ಮತ *ಸಹಕಾರ ಸಚಿವ ಕೆಎನ್​ಆರ್​ ಮೇಲುಗೈ

ತುಮಕೂರು: ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ(ತುಮುಲ್​) ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಶಾಸಕ ಎಚ್​.ವಿ.ವೆಂಕಟೇಶ್​ ನಿರೀಕ್ಷೆಯಂತೆಯೇ ಆಯ್ಕೆಯಾದರು. ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಇತಿಹಾಸ ಬರೆದರು.

ಮಲ್ಲಸಂದ್ರದ ತುಮುಲ್​ ಕಚೇರಿಯಲ್ಲಿ ನಡೆದು ಚುನಾವಣೆಯಲ್ಲಿ ಕಾಂಗ್ರೆಸ್​ ಬೆಂಬಲಿತ ಎಚ್​.ವಿ.ವೆಂಕಟೇಶ್​ ಹಾಗೂ ಎನ್​ಡಿಎ ಬೆಂಬಲಿತ ಎಸ್​.ಆರ್​.ಗೌಡ ನಾಮಪತ್ರ ಸಲ್ಲಿಸಿದ್ದರು. ನಿಗದಿತ ಸಮಯವಾದರೂ ಯಾರೊಬ್ಬರೂ ನಾಮಪತ್ರ ವಾಪಸ್​ ಪಡೆಯದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಗೌರವ್​ ಕುಮಾರ್​ ಶೆಟ್ಟಿ ಚುನಾವಣೆ ಪ್ರಕ್ರಿಯೆ ಮುಂದುವರೆಸಿದರು, ನಂತರ ಗೌಪ್ಯ ಮತದಾನ ನಡೆಯಿತು.

ಎಚ್​.ವಿ.ವೆಂಕಟೇಶ್​ ಪರವಾಗಿ 9 ಹಾಗೂ ಎಸ್​.ಆರ್​.ಗೌಡ ಪರವಾಗಿ 5 ಮತಗಳು ಚಲಾವಣೆಗೊಂಡ ಹಿನ್ನೆಲೆಯಲ್ಲಿ ವೆಂಕಟೇಶ್​ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ನಾಮನಿರ್ದೇಶಿತ ಸದಸ್ಯರೊಬ್ಬರು ತುಮುಲ್​ಗೆ ಅಧ್ಯಕ್ಷರಾದ ಮೊದಲಿಗರೆನ್ನಿಸಿಕೊಂಡರು. ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 10 ನಿರ್ದೇಶಕರ ಜತೆಗೆ ಪದನಿಮಿತ್ತ 5 ಸದಸ್ಯರು ಸೇರಿ 15 ಸದಸ್ಯರಿಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು.

ಎನ್​ಡಿಡಿಬಿ ಪ್ರತಿನಿಧಿ ಗೈರಾದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ 14 ಮತಗಳು ಚಲಾವಣೆಯಾಗಿದ್ದು 9 - 5ಅಂತರದಲ್ಲಿ ಕಾಂಗ್ರೆಸ್​ ಬೆಂಬಲ ವೆಂಕಟೇಶ್​ಗೆ ಅಧ್ಯಕ್ಷ ಸ್ಥಾನ ನಿರಾಯಾಸವಾಗಿ ಒಲಿದು ಬಂದಿತು. ಎನ್​ಡಿಎ 3 ಸದಸ್ಯರನ್ನು ಹೊಂದಿದ್ದು ಎಸ್​.ಆರ್​.ಗೌಡ ಪಡೆದಿರುವ 5 ಮತಗಳು ಗೌಪ್ಯವಾಗಿದ್ದ ಮತದಾನದಲ್ಲಿ ಹೆಚ್ಚುವರಿ ಎರಡು ಮತಗಳನ್ನು ಯಾರು ಚಲಾಯಿಸಿರಬಹುದು ಎಂಬ ಬಗ್ಗೆಯೂ ಕುತೂಹಲ ಸೃಷ್ಠಿಯಾಯಿತು.

ಎಚ್​.ವಿ.ವೆಂಕಟೇಶ್​ ಆಯ್ಕೆ ಅನಿರೀಕ್ಷಿತ ಎನ್ನಿಸಿದ್ದು ಈ ಆಯ್ಕೆಯ ಹಿಂದೆ ರಾಜ್ಯ ರಾಜಕಾರಣದ ಜತೆಗೂ ನಂಟಿದೆ ಎಂಬ ಮಾತಿದೆ, ಕುಣಿಗಲ್​ ಶಾಸಕರಿಗೆ ಅಧಿಕಾರ ತಪ್ಪಿಸಲು ಪಾವಗಡ ಶಾಸಕರ ಹೆಸರನ್ನು ತೆಗೆದುಕೊಂಡು ಸಹಕಾರ ಸಚಿವ ಕೆ.ಎನ್​.ರಾಜಣ್ಣ ನಡೆಸಿರುವ ರಾಜಕೀಯ ತಂತ್ರಗಾರಿಕೆ ಜಿಲ್ಲಾ ಕಾಂಗ್ರೆಸ್​ನಲ್ಲಿಯೇ ಎರಡು ಬಣ ಸೃಷ್ಠಿಸಿರುವುದನ್ನು ತಳ್ಳಿಹಾಕಲಾಗದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net