ತುಮಕೂರು ಮಿನಿ ಪಾದರಾಯನಪುರ!

09TMK_Self_reporting_Centre 2
Published on

ತುಮಕೂರು: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮೌನವಾಗಿದ್ದ ಕರೊನಾ ಮಹಾಮಾರಿ ಮತ್ತೆ ಗರ್ಜಿಸಲಾರಂಭಿಸಿದೆ.

ಶನಿವಾರ ಒಂದೇ ದಿನ ಜಿಲ್ಲೆಯಲ್ಲಿ ನಾಲ್ಕು ಹೊಸ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 11ಕ್ಕೇರಿದೆ.

ಬೆಂಗಳೂರಿನ ವಾರ್ಡ್ 135 ಕಂಟೇನ್ಮೆಂಟ್ ವಲಯದಿಂದ ಮೇ 4ರಂದು ಶಿರಾಗೆ ಆಗಮಿಸಿದ್ದ 45 ವರ್ಷದ ವ್ಯಕ್ತಿ ಪಿ764 ಹಾಗೂ ಗುಜರಾತ್‌ನ ಅಹಮದಾಬಾದ್‌ನಿಂದ ಆಗಮಿಸಿದ್ದ ಪಾವಗಡ ಕುರಬರಹಳ್ಳಿ ಗೇಟ್‌ಗೆ ಬಂದಿದ್ದ ಮೂವರು ತಬ್ಲಿಘಿಗಳಲ್ಲಿ ಸೋಂಕು ಶನಿವಾರ ದೃಢವಾಗಿದೆ. ಕರೊನಾ ಪ್ರಕರಣ 11ಕ್ಕೆ ತಲುಪಿರುವುದರಿಂದ ಜಿಲ್ಲೆ ಕೆಂಪು ವಲಯಕ್ಕೆ ಜಾರುವ ಎಲ್ಲ ಸಾಧ್ಯತೆಯೂ ಇದೆ. ತಬ್ಲಿಘಿಗಳಿಗೆ ಪಿ-792, ಪಿ-793, ಪಿ-794 ಎಂದು ಗುರುತಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಲೆನೋವಾಗಿರುವ ಪಿ-764: ಬೆಂಗಳೂರಿನ ಪಾದರಾಯನಪುದ ಹೋಟೆಲ್‌ನಲ್ಲಿ ಕೆಲಸಕ್ಕಿದ್ದ ಶಿರಾದ ವ್ಯಕ್ತಿಯನ್ನು ಅವರ ಮಗ ಮೇ 4ರಂದು ಸಂಜೆ ಖಾಸಗಿ ವಾಹನದಲ್ಲಿ ಪೊಲೀಸರ ಕಣ್ತಪ್ಪಿಸಿ ಶಿರಾ ನಗರಕ್ಕೆ ಕರೆತಂದಿದ್ದ. ಈ ಹಿನ್ನೆಲೆಯಲ್ಲಿ ಅವರನ್ನು ಹೇಗೆ ಕರೆತಂದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಮೇ 5ರ ಬೆಳಗ್ಗೆಯೇ ಅವರನ್ನು ಹಾಸ್ಟೆಲ್‌ನಲ್ಲಿ ಐಸೋಲೇಟ್ ಮಾಡಲಾಗಿದ್ದು ಅವರ ಮನೆಯವರನ್ನು ಬಿಟ್ಟು ಹೊರಗಿನವರ ಸಂಪರ್ಕ ಮಾಡಿರುವುದು ಕಡಿಮೆ. ಆದರೆ, ಮನೆಯವರೊಂದಿಗೆ ಪ್ರಾಥಮಿಕ ಸಂಪರ್ಕ ಸಾಧಿಸಿದ್ದು, ಅವರೆಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ರೋಗಿಯನ್ನು ಪಿ-764 ಎಂದು ಗುರುತಿಸಲಾಗಿದ್ದು ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವ್ಯಕ್ತಿ ವಾಸವಾಗಿದ್ದ ಏರಿಯಾದ 100ಮೀ ವ್ಯಾಪ್ತಿಯನ್ನು ಕಂಟೇನ್ಮೆಂಟ್ ವಲಯ ಎಂದು ಗುರುತಿಸಿದ್ದು ಜನರ ಓಡಾಟ ನಿರ್ಬಂಧಿಸಲಾಗಿದೆ.

ವೈದ್ಯಕೀಯ ವರದಿ ಮೇಲೆ ಅನುಮಾನ!: ಗುಜರಾತ್‌ನಿಂದ ರಾಜ್ಯಕ್ಕೆ ಒಂದೇ ಬಸ್‌ನಲ್ಲಿ ಬಂದಿಳಿದಿದ್ದ 33 ಜನರ ಕೋವಿಡ್-19 ಪರೀಕ್ಷಾ ವರದಿಯ ಸತ್ಯಾಸತ್ಯತೆ ಬಗ್ಗೆ ಉನ್ನತ ಮಟ್ಟದ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರಯಾಣ ಆರಂಭಿಸುವ ಮೊದಲು ಪರೀಕ್ಷೆ ನಡೆದಿದ್ದು, ನೆಗೆಟಿವ್ ಬಂದಿದೆ ಎಂದು ದಾಖಲೆ ಸೃಷ್ಟಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಗುಜರಾತ್ ಪೊಲೀಸ್ ಮುಖ್ಯಸ್ಥರ ಜತೆಗೂ ಜಿಲ್ಲಾ ಪೊಲೀಸ್ ಇಲಾಖೆ ಸಂಪರ್ಕದಲ್ಲಿದೆ. ಪಾವಗಡದಲ್ಲಿ ಕ್ವಾರೆಂಟೈನ್ ಆಗಿದ್ದ 13 ತಬ್ಲಿಘಿಗಳಿಗೆ ಗುಜರಾತ್‌ನಲ್ಲಿ ನಡೆಸಿದ್ದಾರೆ ಎನ್ನಲಾದ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಆದರೆ, ರಾಜ್ಯಕ್ಕೆ ಬಂದ ಮೊದಲ ದಿನವೇ ಮಾದರಿ ಸಂಗ್ರಹಿಸಿದ ವರದಿ ಪಾಸಿಟಿವ್ ಬಂದಿರುವುದು ಜಿಲ್ಲಾಡಳಿತದ ನಿದ್ದೆಕೆಡಿಸಿದೆ.

ಕ್ವಾರಂಟೈನ್ ಮಾಡಿದ್ದಕ್ಕೆ ಆಕ್ಷೇಪ : ಕುರುಬರಹಳ್ಳಿ ಗೇಟ್ ಬಳಿಯ ಬಿಸಿಎಂ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್‌ನಲ್ಲಿದ್ದ ವೈ.ಎನ್.ಹೊಸಕೋಟೆಯ 13 ತಬ್ಲಿಘಿಗಳಲ್ಲಿ ಮೂವರಿಗೆ ಸೋಂಕು ದೃಢವಾಗಿದೆ. ಇದೇ ಕಾರಣಕ್ಕೆ ಇಲ್ಲಿ ಕ್ವಾರಂಟೈನ್‌ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ವಸತಿನಿಲಯದ ಸುತ್ತಲೂ ಕ್ರಿಮಿನಾಶಕ, ಸ್ಯಾನಿಟೈಸರ್‌ನಿಂದ ಶುಚಿಗೊಳಿಸುವ ಕೆಲಸ ಸಾಗಿದೆ, ಶನಿವಾರ ಉಪವಿಭಾಗಾಧಿಕಾರಿ ಡಾ.ನಂದಿನಿದೇವಿ, ಡಿವೈಎಸ್‌ಪಿ ಪ್ರವೀಣ್ ಕುಮಾರ್ ವಸತಿನಿಲಯಕ್ಕೆ ಭೇಟಿ ನೀಡಿದ್ದರು.

ಹೊರ ಜಿಲ್ಲೆ, ರಾಜ್ಯಗಳಿಂದ ಸಾಕಷ್ಟು ಜನರು ಜಿಲ್ಲೆಗೆ ಆಗಮಿಸಿತ್ತಿದ್ದಾರೆ, ಇವರ ಬಗ್ಗೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಸಾಕಷ್ಟು ಜನರು ಪೊಲೀಸರ ಕಣ್ತಪ್ಪಿಸಿ ಬಂದಿದ್ದು, ಅವರೆಲ್ಲರೂ ಪರೀಕ್ಷೆಗೆ ಒಳಗಾಗಿ ಮಹಾಮಾರಿ ನಿಯಂತ್ರಣಕ್ಕೆ ಸಹಕಾರ ನೀಡಬೇಕು. ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net