ಬೇಡುವ ಕೈಗಳಿಗಿಂತ ಕೊಡುವ ಕೈಗಳು ಮುಂದೆ!

food
Published on

ತುಮಕೂರು: ಮಹಾಮಾರಿ ಕರೊನಾ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಒಪ್ಪೊತ್ತಿನ ಊಟ ಸಿಗದೆ ಜಿಲ್ಲೆಯೆಲ್ಲೆಡೆ ಪರದಾಡುತ್ತಿರುವ ಸಾವಿರಾರು ಜೀವಗಳಿಗೆ ನೆರವಾಗುವ ಕೈಗಳು ಮುಂದೆ ಚಾಚಿವೆ.

ಅನ್ನವಿಲ್ಲದೆ ಪರದಾಡುವವರ ಪಾಲಿಗೆ ದಾಸೋಹದ ಮಹಾಮನೆ ಶ್ರೀ ಸಿದ್ಧಗಂಗಾ ಮಠ ಆರಂಭದಿಂದಲೂ ಸ್ಪಂದಿಸುತ್ತಿದೆ. ಮಠದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲವಾದರೂ ಆಹಾರ ಬಯಸುವವರಿಗೆ ಊಟ ತಲುಪಿಸುವ ಕೈಂಕರ್ಯ ನಡೆಯುತ್ತಿದೆ. ಮಠದಲ್ಲಿ ಸಾವಿರಾರು ಮಕ್ಕಳು ಆಶ್ರಯ ಪಡೆದಿದ್ದು ಅವರೊಂದಿಗೆ ಸಮಾಜದಲ್ಲಿ ಕೂಲಿ ಇಲ್ಲದೆ ಅನ್ನಕ್ಕಾಗಿ ಪರದಾಡುವವರಿಗೆ ಶ್ರೀಮಠ ಮೊದಲಿನಿಂದಲೂ ಆಶ್ರಯ ನೀಡುತ್ತಲೇ ಬಂದಿದೆ.

ಸಿದ್ಧಗಂಗಾ ಮಠದ ಜತೆಯಲ್ಲಿ ತುಮಕೂರು ನಗರದಲ್ಲಿ ಅನ್ನಕ್ಕಾಗಿ ಪರದಾಡುವ ಮಂದಿಗೆ ರೋಟರಿ ತುಮಕೂರು, ಸಿದ್ಧಗಂಗಾ ಆಸ್ಪತ್ರೆ ಕ್ಯಾಂಟೀನ್, ಆರ್‌ಆರ್ ಅಭಿಮಾನಿ ಬಳಗ, ಮಾಜಿ ಶಾಸಕ ಡಾ.ರಫೀಕ್‌ಅಹ್ಮದ್ ಅವರ ಪತ್ನಿ ನೇತೃತ್ವದ ತಂಡ ಹೀಗೆ ಹತ್ತಾರು ಸಂಘ, ಸಂಸ್ಥೆಗಳು ನೆರವಿನ ಹಸ್ತ ಚಾಚಿರುವುದು ಸಮಾಜದಲ್ಲಿ ಮಾನವೀಯತೆಯ ಜೀವಂತಿಕೆಗೆ ಸಾಕ್ಷಿಯಾಗಿದೆ. ಇದರ ಜತೆಯಲ್ಲಿ ನಿರ್ಗತಿಕರು, ಕೂಲಿಕಾರ್ಮಿಕರಿಗೆ ಮಹಾನಗರ ಪಾಲಿಕೆ ವತಿಯಿಂದ ಅನ್ನ, ನೀರು ಹಾಗೂ ಅಗತ್ಯ ಔಷಧಗಳನ್ನು ನೀಡಲಾಗುತ್ತಿದೆ. ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್ ಕೂಡ ವಾಹನಗಳಲ್ಲಿ ಆಹಾರ ಸರಬರಾಜು ಮಾಡಲು ಮುಂದಾಗಿದ್ದಾರೆ. ಕರೊನಾ ವೈರಸ್ ಪೀಡಿತರ ಚಿಕಿತ್ಸೆಗೆ ಹಾಗೂ ವೈದ್ಯಕೀಯ ಸೇವೆಗೆ ಅಗತ್ಯವಿದ್ದರೆ ತಮ್ಮ ಒಡೆತನದ ಸಿಐಟಿ ಕಾಲೇಜು ಕಟ್ಟಡವನ್ನು ಬಳಸಿಕೊಳ್ಳಲು ಅನುಮತಿ ಕೂಡ ನೀಡಿದ್ದಾರೆ.

ನಗರದ ವಿವಿಧ ಸಂಘ, ಸಂಸ್ಥೆಗಳು ಅಗತ್ಯವಿರುವವರಿಗೆ ಸ್ಯಾನಿಟೈಸರ್, ಮಾಸ್ಕ್, ಅಗತ್ಯ ಔಷಧಗಳನ್ನು ಪೂರೈಸಲು ಮುಂದೆಬಂದಿವೆೆ. ಬಡಾವಣೆಗಳಲ್ಲಿ ಮನೆಯವರು ಕೂಡ ತಮ್ಮ ಕಣ್ಣಿಗೆ ಕಾಣುವ ಅಶಕ್ತರಿಗೆ ಊಟ ನೀಡುವ ಕಾಯಕ ಮಾಡುತ್ತಿದ್ದಾರೆ. ಸಂಘ, ಸಂಸ್ಥೆಗಳ ಜತೆ ಪೊಲೀಸರು ಕೈಜೋಡಿಸಿದ್ದು ಯಾರಿಗೂ ಅನ್ನ ಸಿಗದಂತಾಗದ ಸ್ಥಿತಿಯನ್ನು ಕಾಪಾಡಿಕೊಳ್ಳಲಾಗಿದೆ.

ತುಮಕೂರು ನಗರದಲ್ಲಿಷ್ಟೇ ಅಲ್ಲದೇ ತಾಲೂಕು ಕೇಂದ್ರದಲ್ಲಿಯೂ ಬೇಡುವ ಕೈಗಳನ್ನು ಹುಡುಕಿ ನೆರವಾಗುವ ಕೈಗಳ ಸಂಖ್ಯೆಗೇನೂ ಕಡಿಮೆ ಇಲ್ಲ. ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ತಾತಯ್ಯನ ಘೋರಿಯಲ್ಲಿ ಆಶ್ರಯ ಪಡೆದಿದ್ದ ಜನರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಲು ಅಗತ್ಯವಾದ ಸ್ಯಾನಿಟೈಸರ್, ಸೋಪು, ಮಾಸ್ಕ್ ಮತ್ತಿತರ ವಸ್ತುಗಳನ್ನು ಸಾಕಷ್ಟು ಜನರು ಉಚಿತವಾಗಿ ನೀಡುತ್ತಿದ್ದು ಸಾಕಷ್ಟು ದಾನಿಗಳು ತಮ್ಮ ಹೆಸರನ್ನು ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ.

ಗಡಿಭಾಗದಲ್ಲಿ ಕಟ್ಟೆಚ್ಚರ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸ್ ಠಾಣೆ ಪಿಎಸ್‌ಐ ರಮೇಶ್ ಕಾರ್ಯವೈಖರಿ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. ಶಿರಾ ಪಟ್ಟಣದಲ್ಲಿ ಕರೊನಾ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಆ ಭಾಗದಿಂದ ಹುಳಿಯಾರು ಕಡೆಗೆ ಯಾರೂ ಬರದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಹುಳಿಯಾರು, ಚಿಕ್ಕನಾಯಕನಹಳ್ಳಿ ಠಾಣೆಗಳ ಹೊಣೆ ಹೊತ್ತಿರುವ ರಮೇಶ್ ಗ್ರಾಮಗಳಲ್ಲಿ ಕರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು ಜನಮೆಚ್ಚುಗೆ ಪಡೆದಿದ್ದಾರೆ. ಆದರೆ, ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಪಿಎಸ್‌ಐ ಹುದ್ದೆ ಖಾಲಿ ಇರುವುದು ತೊಂದರೆಯಾಗಿ ಪರಿಣಮಿಸಿದೆ.

ನಗರದಲ್ಲಿ ಹೆಲ್ಪ್ ಲೈನ್: ಶಾಸಕ ಜಿ.ಬಿ.ಜ್ಯೋತಿಗಣೇಶ್ ತುಮಕೂರು ನಗರ ವ್ಯಾಪ್ತಿಯಲ್ಲಿರುವ ಕೂಲಿ ಕಾರ್ಮಿಕರು, ದಿನಗೂಲಿ ನೌಕರರು ಊಟದ ಅವಶ್ಯಕತೆ ಇರುವವರಿಗಾಗಿ ನೆರವಾಗಲು ತಮ್ಮ ಕಚೇರಿಯಲ್ಲಿ ಹೆಲ್ಪ್‌ಲೈನ್ ಆರಂಭಿಸಿದ್ದಾರೆ. ಸೇವೆಯ ಅಗತ್ಯವಿರುವವರು ರಮೇಶ್ ಮೊ.819799702 ಹಾಗೂ ಶಂಭುಲಿಂಗಸ್ವಾಮಿ ಮೊ.9844771701 ಸಂಪರ್ಕಿಸಲು ಕೋರಿದ್ದಾರೆ.

ನಿರಾಶ್ರಿತರು, ದಿನಗೂಲಿ ನೌಕರರು ಯಾವುದೇ ತೊಂದರೆಯಾದರೂ ನಮ್ಮ ಕಚೇರಿ ಸಂಪರ್ಕಿಸಿ ನೆರವು ಪಡೆಯಬಹುದು. ನಮ್ಮ ಕಚೇರಿಯಲ್ಲಿ ಇದಕ್ಕಾಗಿಯೇ ಸಿಬ್ಬಂದಿ ನೇಮಿಸಲಾಗಿದ್ದು ಅಗತ್ಯವಿರುವೆಡೆ ಬಂದು ನೆರವಾಗುತ್ತಾರೆ. ಜಿ.ಬಿ.ಜ್ಯೋತಿಗಣೇಶ್ ಶಾಸಕ, ತುಮಕೂರು ನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net