ತುಮಕೂರು: ಮುಂದಿನ ವರ್ಷ ಜಿಲ್ಲೆಗೆ ಎತ್ತಿನಹೊಳೆ ನೀರು

2
Published on

ಸಚಿವ ಪರಮೇಶ್ವರ ವಿಶ್ವಾಸ | ಶೇ.64ರಷ್ಟು ಕಾಮಗಾರಿ ಪೂರ್ಣ | ಶೇ.20ರಷ್ಟು ಭೂ ಪರಿಹಾರ ಬಾಕಿ

ವಿಜಯವಾಣಿ ಸುದ್ದಿಜಾಲ ತುಮಕೂರು
ಬಯಲುಸೀಮೆಯ ಜಿಲ್ಲೆಗಳಿಗೆ ನೀರುಣಿಸುವ ರಾಜ್ಯ ಸರ್ಕಾರದ ಮಹತ್ವಕಾಂ "ಎತ್ತಿನಹೊಳೆ' ನೀರಾವರಿ ಯೋಜನೆ ಮೊದಲ ಹಂತ ಸೆ.6ರಂದು ಉದ್ಘಾಟನೆಯಾಗಲಿದ್ದು, ತುಮಕೂರು ಜಿಲ್ಲೆಗೆ ಮುಂದಿನ ವರ್ಷ ನೀರು ಹರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಜಿಲ್ಲೆಯವರೇ ಆದ ಡಾ.ಜಿ.ಎಸ್​.ಪರಮಶಿವಯ್ಯ ಅವರ ಕನಸಿನ "ನೇತ್ರಾವತಿ ತಿರುವು' ಯೋಜನೆಯ ಹೆಸರು ಬದಲಾಯಿಸಿ ಕೋಲಾರ, ಚಿಕ್ಕಬಳ್ಳಾಪುರ ಜತೆಗೆ ತುಮಕೂರು, ಹಾಸನ, ಚಿಕ್ಕಮಗಳೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ 24ಟಿಎಂಸಿ ನೀರು ಹರಿಸಲು ಕಾಂಗ್ರೆಸ್​ ಸರ್ಕಾರ ರೂಪಿಸಿದ್ದ ಯೋಜನೆ ಅಂತಿಮ ಹಂತಕ್ಕೆ ತಲುಪಿರುವುದು ಹೆಮ್ಮೆಯ ವಿಷಯ ಎಂದರು.


ಒಣ ಪ್ರದೇಶಕ್ಕೆ ನೀರುಣಿಸುವ ಬಯಕೆಯಿಂದ "ನೇತ್ರಾವತಿ ತಿರುವು' ಯೋಜನೆ ಹೆಸರು ಬದಲಾಯಿಸಿ ನೀರಾವರಿ ತಜ್ಞರು ಮಳೆಗಾಲದಲ್ಲಿ ನೀರು ಪಡೆಯಲು ಸಾಧ್ಯವಾಗುವ "ಎತ್ತಿನಹೊಳೆ' ಯೋಜನೆ ರೂಪಿಸಿದ್ದಾರೆ. ಘಟ್ಟದಿಂದ ಮೇಲ್ಭಾಗದಲ್ಲಿರುವ ಎತ್ತಿನಹೊಳೆ, ಹೊಂಗನಹೊಳ್ಳ, ಕೇರಿ ಹಳ್ಳ ಕಡೆಗಳಿಂದ 24 ಟಿಎಂಸಿ ನೀರು ಶೇಖರಿಸಿ ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸಲು ರೂಪಿಸಿರುವ ಮಹತ್ವಕಾಂಕ್ಷಿ ಯೋಜನೆಯ ಮೊದಲ ಹಂತ ಈಗ ಸಾಕಾರವಾಗಿದ್ದು, ಹಾಸನ ಜಿಲ್ಲೆಯ ಅರಸೀಕೆರೆಯವರೆಗೂ ನೀರು ಹರಿಯಲಿದೆ. ಅಲ್ಲಿಂದ ಹಿರಿಯೂರು ತಾಲೂಕು ವಾಣಿವಿಲಾಸ ಸಾಗರಕ್ಕೆ ನೀರು ಗುರುತ್ವಾಕರ್ಷಣೆ ಮೂಲಕ ಸಾಗಲಿದೆ ಎಂದರು.


ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಮೊದಲ ಅವಧಿಯಲ್ಲಿ 2014ರಲ್ಲಿ 12912 ಕೋಟಿ ರೂ. ಮಂಜೂರು ಮಾಡಿ ಆಡಳಿತಾತ್ಮಕ ಅನುಮೋದನೆ ನೀಡಿದ್ದರು. ತುಮಕೂರು ಜಿಲ್ಲೆಯಲ್ಲಿ 5.740 ಟಿಎಂಸಿ ನೀರಿನ ಹಂಚಿಕೆಯಾಗಿದೆ, 2.94ಟಿಎಂಸಿ ಕುಡಿಯುವ ನೀರು, 3.446 ಟಿಎಂಸಿ ಸಣ್ಣ ನೀರಾವರಿ ಇಲಾಖೆಯ 113 ಕೆರೆಗಳಿಗೆ ಮೀಸಲಿಡಲಾಗಿದೆ ಎಂದರು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಜತೆಗೆ ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಸೇರಿಸಿ ಪ್ರಸ್ತುತ 23,251 ಕೋಟಿ ರೂ. ಯೋಜನಾ ವೆಚ್ಚವಾಗಿದೆ. 2027ರ ಮಾರ್ಚ್​ 31ಕ್ಕೆ ಸಂಪೂರ್ಣ ಯೋಜನೆ ಮುಗಿಯಬೇಕು, 2025 ಜುಲೈಗೆ ತುಮಕೂರು ಜಿಲ್ಲೆಯಲ್ಲಿ ಕಾಮಗಾರಿ ಪೂರ್ಣವಾಗಲಿದ್ದು, 5 ಟಿಎಂಸಿ ನೀರು ಹರಿಯುವ ವಿಸ್ವಾಸವಿದೆ ಎಂದರು.


ಜಿಲ್ಲೆಯಲ್ಲಿ 3117.26 ಎಕರೆ ಭೂಮಿ 2012 ಎಕರೆಗೆ ಅವಾರ್ಡ್​ ಆಗಿದೆ, ಶೇ.80 ಭೂಮಿ 1200 ಕೋಟಿ ರೂ. ಪರಿಹಾರ ನೀಡಲಾಗಿದೆ. 448 ಕೋಟಿ ರೂ. ಮಾತ್ರ ರೈತರಿಗೆ ತಲುಪಿದೆ, ಭೂಸ್ವಾಧಿನಾಧಿಕಾರಿ ಖಾತೆಯಲ್ಲಿಯೇ 430 ಕೋಟಿ ರೂ. ಇದೆ. ರೈತರು ದಾಖಲೆಗಳನ್ನು ನೀಡಿ ಪರಿಹಾರ ಪಡೆಯಬಹುದಾಗಿದೆ. ಇನ್ನೂ 397 ಕೋಟಿ ರೂ.ಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ ಎಂದರು. ತುಮಕೂರು ಜಿಲ್ಲೆಯಲ್ಲಿ 150 ಕಿಮೀ ಮುಖ್ಯನಾಲೆ ಹಾದುಹೋಗಲಿದ್ದು, ಈ ಪೈಕಿ 102.37ಕಿಮೀ ಕಾಮಗಾರಿ ಅಂದರೆ ಶೇ.62, ಈಗಾಗಲೇ ಪೂರ್ಣವಾಗಿದೆ ಪೀಡರ್​ ಪೈಕಿ 106ಕಿಮೀ ಪೂರ್ಣವಾಗಿದೆ ಎಂದರು. ಡಿಸಿ ಶುಭಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ, ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ.ಅಶೋಕ್​ ಮತ್ತಿತರರು ಇದ್ದರು.

ಕೆನಾಲ್​ ಕೆಲಸಕ್ಕೆ ವೇಗ
ಎತ್ತಿನಹೊಳೆ ಯೋಜನೆಯ ಕೆನಾಲ್​ ದಾರಿ ತಿಪಟೂರು 43 ಕಿ.ಮೀ, ಚಿಕ್ಕನಾಯಕನಹಳ್ಳಿ 12 ಕಿ.ಮೀ, ತುರುವೆಕೆರೆ 1 ಕಿ.ಮೀ, ಗುಬ್ಬಿ 41 ಕಿ.ಮೀ, ತುಮಕೂರು ಗ್ರಾ 31, ಕೊರಟಗೆರೆ 19, ಮಧುಗಿರಿ (ಫೀಡರ್​ ಕೆನಾಲ್​) 40 ಕಿ.ಮೀ, ಪಾವಗಡ 42 ಕಿ.ಮೀ. ಕೆನಾಲ್​ ಹಾದುಹೋಗಲಿದೆ. ಜಿಲ್ಲೆಯಲ್ಲಿ ಶೇ. 64ರಷ್ಟು ಮುಖ್ಯ ಕೆನಾಲ್​ ಪೂರ್ಣಗೊಂಡಿದೆ ಎನ್ನಲಾಗಿದೆ.

ಬೈರಗೊಂಡ್ಲು ಬಫರ್​ ಜೋನ್​ ಇಲ್ಲ
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಸಲು ರೂಪಿಸಿದ್ದ ಯೋಜನೆಯಲ್ಲಿ ನೀರು ಸಂಗ್ರಹಿಸಲು ಕೊರಟಗೆರೆ ತಾಲೂಕು ಬೈರಗೊಂಡ್ಲು ಬಳಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಜಲಾಶಯದ ಪ್ರಸ್ತಾಪವನ್ನು ತಜ್ಞರ ಅಭಿಪ್ರಾಯದ ಮೇರೆಗೆ ಕೈಬಿಡಲಾಗಿದೆ. ಇಲ್ಲಿ ಜಲಾಶಯ ನಿರ್ಮಿಸಲು 2500 ಎಕರೆ ಮೀಸಲಿಡಲಾಗಿತ್ತು ಎಂದು ಡಾ.ಜಿ.ಪರಮೇಶ್ವರ ತಿಳಿಸಿದರು. ಆದರೆ, ರೈತರು ಭೂಮಿ ಕೊಡಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಭೂಸ್ವಾಧಿನ ಪ್ರಕ್ರಿಯೆ ಕೈಬಿಟ್ಟು ನೀರು ಸಂಗ್ರಹಿಸಲು ವಿವಿಧೆಡೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಾಣಿವಿಲಾಸ ಸಾಗರದಲ್ಲಿಯೇ 1500 ಕ್ಯೂಸೆಕ್​ ನೀರು ಹೋಗಲಿದೆ ಎಂದರು. ಯೋಜನೆಯಿಂದ ತುಮಕೂರು ತಾಲೂಕಿನ 6, ಕೊರಟಗೆರೆ 39, ಮಧುಗಿರಿ 45, ಪಾವಗಡ 23 ಕೆರೆಗಳು ಸೇರಿ ಒಟ್ಟು 113 ಕೆರೆಗಳಿಗೆ ನೀರು ಬರಲಿದೆ. ಕುಡಿಯುವ ನೀರಿನ ಉದ್ದೇಶಕ್ಕೆ ಶಿರಾಲೂಕಿನ 0.14ಟಿಎಂಸಿ, ಚಿ.ನಾ.ಹಳ್ಳಿ 0.347, ಗುಬ್ಬಿ 0.770, ತಿಪಟೂರು 0.301 ಹಾಗೂ ವಸಂತನರಸಾಪುರಕ್ಕೆ 0.20ಟಿಎಂಸಿ ನೀರು ಸಿಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net