

ವಿಜಯವಾಣಿ ಸುದ್ದಿಜಾಲ ತುಮಕೂರು
ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅ.11 ಮತ್ತು 12ರಂದು ಆಚರಿಸಲಿರುವ ತುಮಕೂರು ದಸರಾ ಉತ್ಸವವನ್ನು "ಮಿನಿ ಮೈಸೂರು ದಸರಾ' ಉತ್ಸವವನ್ನಾಗಿ ಆಚರಿಸುವ ಮೂಲಕ ಇತಿಹಾಸ ನಿರ್ಮಾಣಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈ ಮಧ್ಯೆ ಪ್ರತ್ಯೇಕವಾಗಿ ಸಂಪ್ರದಾಯಬದ್ಧ ದಸರಾ ಅಚರಿಸಲು ತುಮಕೂರು ದಸರಾ ಸಮಿತಿ ನಿರ್ಧರಿಸಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ತುಮಕೂರು ದಸರಾ ಪ್ರಧಾನ ಸಮಿತಿ ಸಭೆ ನಡೆಯಿತು. ಈ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಮೈಸೂರು ದಸರಾ ಮಾದರಿಯಲ್ಲಿ ತುಮಕೂರು ದಸರಾ ಉತ್ಸವವನ್ನು ಧಾರ್ಮಿಕ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಲು ಈಗಾಗಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ಸಮಿತಿ, ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಸಾಂಪ್ರದಾಯಿಕ ಫ್ಯಾಷನ್ ಶೋ: ಪವರ್ ಪಾಯಿಂಟ್ ಪ್ರದರ್ಶನವನ್ನು ವೀಕ್ಷಿಸಿ ಮಕ್ಕಳ ದಸರಾ ಅಂಗವಾಗಿ ಏರ್ಪಡಿಸಲಾಗುವ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಮಕ್ಕಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಭಾಗವಹಿಸಬೇಕು. ಮಹಿಳಾ ದಸರಾ ಕಾರ್ಯಕ್ರಮದಲ್ಲಿ ನಗರದ ವಿವಿಧ ವಾರ್ಡ್ಗಳಲ್ಲಿ ರಂಗೋಲಿ ಸ್ಪರ್ಧೆ, ದಸರಾ ಗೊಂಬೆ ಪ್ರದರ್ಶನ ಸ್ಪರ್ಧೆ ಏರ್ಪಡಿಸಲು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಅವರಿಗೆ ನಿರ್ದೇಶನ ನೀಡಿದರು. ಎಚ್ಎಎಲ್, ಇಸ್ರೋ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅತ್ಯಾಧುನಿಕ ಹಾಗೂ ಆಕರ್ಷಕವಾದ ವಸ್ತುಪ್ರದರ್ಶನಗಳನ್ನು ಏರ್ಪಡಿಸಬೇಕು. ಭವಿಷ್ಯದ ಭಾರತ, ವಿವಿಧತೆಯಲ್ಲಿ ಏಕತೆಯ ಭಾರತ, ನಾಡು ನುಡಿ ಸಂಸತಿ ಒಳಗೊಳ್ಳುವ ವಿಷಯ ಕುರಿತ ಕವಿಗೋಷ್ಠಿ ನಡೆಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಪಂ ಸಿಇಒ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಮುಜರಾಯಿ ಇಲಾಖೆ ತಹಸೀಲ್ದಾರ್ ಸವಿತಾ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಮಿರ್ಜಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಲೋಗೋ ಅನಾವರಣ: ತುಮಕೂರು ದಸರಾ ಉತ್ಸವದ ಲೋಗೋ ಅನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಹಾಗೂ ತುಮಕೂರು ದಸರಾ ಪ್ರಧಾನ ಸಮಿತಿ ಸಹ ಅಧ್ಯಕ್ಷ ವಿ.ಸೋಮಣ್ಣ ಅನಾವರಣಗೊಳಿಸಿದರು. ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದಿಂದ ಆಯೋಜಿಸುತ್ತಿರುವ ತುಮಕೂರು ದಸರಾ ಕಾರ್ಯಕ್ರಮ ಮುಂದಿನ ಪೀಳಿಗೆ ನೆನಪಿಟ್ಟುಕೊಳ್ಳುವಂತಾಗಬೇಕು. ನಮ್ಮ ಪರಂಪರೆ, ಸಂಪ್ರದಾಯ ಉಳಿಸಿ ಬೆಳೆಸಲು ಇಂತಹ ಹಬ್ಬಗಳ ಸಾಮೂಹಿಕ ಆಚರಣೆ ಅಗತ್ಯವಿದೆ. ಮೊದಲ ಬಾರಿಗೆ ದಸರಾ ಆಚರಿಸುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ನಗರದ ಪ್ರಮುಖ ಬೀದಿ ಮತ್ತು ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವಂತೆ ಸೋಮಣ್ಣ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಮಾಹಿತಿ: ಕಾರ್ಯಕ್ರಮದ ಯಶಸ್ಸಿಗಾಗಿ ರೂಪಿಸಿರುವ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪವರ್ ಪಾಯಿಂಟ್ ಪ್ರದರ್ಶನದ ಮೂಲಕ ಸಭೆಗೆ ಮಾಹಿತಿ ನೀಡಿ, 2 ದಿನಗಳ ಕಾಲ ನಡೆಯುವ ದಸರಾ ಉತ್ಸವದಲ್ಲಿ ರಾಜ್ಯದ ಪ್ರಸಿದ್ಧ ಗಾಯಕರಿಂದ ಗೀತಗಾಯನ, ಮಕ್ಕಳಿಂದ ಶಾಸ್ತ್ರೀಯ ಸಂಗೀತ ಕಚೇರಿ, ಸ್ಥಳಿಯ ಕಲೆಗಳ ಪ್ರದರ್ಶನ, ಮ್ಯಾರಥಾನ್ ಸ್ಪರ್ಧೆ, ಕ್ರೀಡಾ ಸ್ಪರ್ಧೆ ಆಯೋಜಿಸಲು ಅಧಿಕಾರಿಗಳ ತಂಡ ಅಣಿಯಾಗಿದೆ. ಉತ್ಸವದ 2ನೇ ದಿನ ಅಂತಿಮವಾಗಿ ಬಾಣ-ಬಿರುಸುಗಳ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು. ಮೆರವಣಿಗೆಯಲ್ಲಿ 3 ಆನೆಗಳು, ಹಳ್ಳಿಕಾರ್ ಎತ್ತು, ಕುದುರೆ, ವಿಂಟೇಜ್ ಕಾರು, ಜಿಲ್ಲೆಯ 70ಕ್ಕೂ ಹೆಚ್ಚು ದೇವರ ಉತ್ಸವ ಮೂರ್ತಿಗಳು ಸೇರಿದಂತೆ 15 ಕಲಾ ತಂಡಗಳು ಭಾಗವಹಿಸಲಿವೆ ಎಂದು ಡಿಎ್ಒ ಅನುಪಮಾ ಮಾಹಿತಿ ನೀಡಿದರು.
ಜಿಲ್ಲೆಯ ಗೌರವ ಹೆಚ್ಚಿಸಿ
ಮೊದಲ ಬಾರಿಗೆ ದಸರಾ ಉತ್ಸವವನ್ನು ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗುತ್ತಿದ್ದು, ಉತ್ಸವವನ್ನು ವ್ಯವಸ್ಥಿತವಾಗಿ ರೂಪಿಸಲು ರಚಿಸಿರುವ ಸ್ವಾಗತ, ಆಹಾರ, ಸಾಂಸತಿಕ, ಮೆರವಣಿಗೆ, ರೈತ ದಸರಾ ಮತ್ತು ವಸ್ತು ಪ್ರದರ್ಶನ, ಕವಿಗೋಷ್ಠಿ, ಮಕ್ಕಳ ದಸರಾ, ಮಹಿಳಾ ದಸರಾ, ಯುವ ದಸರಾ, ದೀಪಾಲಂಕಾರ, ಕ್ರೀಡೆ, ವೇದಿಕೆ ನಿಮಾರ್ಣ ಸಮಿತಿ ಸೇರಿದಂತೆ ಎಲ್ಲ ಸಮಿತಿಗಳಿಗೂ ಸ್ಥಳಿಯ ಜನಪ್ರತಿನಿಧಿ, ದೇವಸ್ಥಾನದ ಅರ್ಚಕರು, ನಾಗರಿಕರು, ಪತ್ರಕರ್ತರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮಗಳ ರೂಪು-ರೇಷೆ ತಯಾರಿಸುವಂತೆ ನಿರ್ದೇಶಿಸಿದರಲ್ಲದೆ, ಯಾವುದೇ ಜಾತಿ, ಮತ, ಧರ್ಮ, ವೈಯಕ್ತಿಕ ಪ್ರತಿಷ್ಠೆಗಳಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಉತ್ಸವದಲ್ಲಿ ಪಾಲ್ಗೊಂಡು ಜಿಲ್ಲೆಯ ಖ್ಯಾತಿ, ಗೌರವವನ್ನು ಹೆಚ್ಚಿಸುವಂತೆ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಪರ್ಯಾಯ ದಸರಾ ಅಲ್ಲ: ಕಳೆದ 33 ವರ್ಷಗಳಿಂದ ತುಮಕೂರು ದಸರಾ ಸಮಿತಿ ಸಾಂಪ್ರದಾಯಿಕ, ಧಾರ್ಮಿಕ ಹಿನ್ನೆಲೆಯ ದಸರಾ ಆಚರಿಸಿಕೊಂಡು ಬರುತ್ತಿದ್ದು, ಈ ಸಮಿತಿಯನ್ನು ಜಿಲ್ಲಾಡಳಿತ ಸಂಪೂರ್ಣ ಕಡೆಗಣಿಸಿದೆ. ಈ ಹಿನ್ನೆಲೆಯಲ್ಲಿ ಸಂಪ್ರದಾಯಬದ್ಧ ದಸರಾ ಉತ್ಸವವನ್ನು ನಗರದ ರಾಮಮಂದಿರ ಆವರಣದಲ್ಲಿ ಶರನ್ನನವರಾತ್ರಿ, ವಿಜಯದಶಮಿ 10 ದಿನಗಳ ಕಾಲ ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ. ನವರಾತ್ರಿಯ 9 ದಿನಗಳು ಪ್ರತಿನಿತ್ಯ ಒಂದೊಂದು ವಿಶೇಷ ಪೂಜೆ, 10ನೇ ದಿನವಾದ ವಿಜಯದಶಮಿಯಂದು ಶಮೀಪೂಜೆ, ನಗರದ ದೇವತೆಗಳ ವಿಶೇಷ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಇಷ್ಟು ವರ್ಷ ಆಚರಿಸಿಕೊಂಡು ಬಂದಿರುವ ದಸರಾ ಆಚರಣೆಗಳನ್ನು ಮುಂದುವರೆಸಲು ನಿರ್ಧರಿಸಿದೆ. ಇದು ಜಿಲ್ಲಾಡಳಿತ ಆಯೋಜಿಸುತ್ತಿರುವ ತುಮಕೂರು ದಸರಾಕ್ಕೆ ಪರ್ಯಾಯವಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.
ಜಿಲ್ಲಾಡಳಿತ ತುಮಕೂರು ದಸರಾ ಉತ್ಸವ ಆಚರಿಸುತ್ತಿದ್ದು, ಈವರೆಗೆ ತುಮಕೂರು ದಸರಾ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಯಾವುದೇ ಸಭೆಗೂ ನಮ್ಮನ್ನು ಆಹ್ವಾನಿಸಿಲ್ಲ. 33 ವರ್ಷಗಳಿಂದ ತುಮಕೂರು ದಸರಾ ಉತ್ಸವವನ್ನು ಸಂಪ್ರದಾಯಕ್ಕೆ ಕಿಂಚಿತ್ತು ಚ್ಯುತಿಬಾರದಂತೆ ನಾಡಹಬ್ಬದಂತೆ ಆಚರಿಸಿಕೊಂಡು ಬಂದಿದ್ದೇವೆ. ಜಿಲ್ಲಾಡಳಿತದ ಅಜೆಂಡಾ ಏನಿದೆಯೋ ಗೊತ್ತಿಲ್ಲ. ಧಾರ್ಮಿಕ ಆಚರಣೆ, ವಿಧಿವಿಧಾನಗಳಂತೆ ದಸರಾ ಆಚರಿಸುವ ವಿಶ್ವಾಸ ನಮಗಿಲ್ಲ. ಹಾಗಾಗಿ, ನಾವು ರಾಮಮಂದಿರದಲ್ಲಿ ಸಂಪ್ರದಾಯಬದ್ಧ ದಸರಾ ಉತ್ಸವ ಆಚರಿಸುತ್ತೇವೆ.| ಜಿ.ಎಸ್.ಬಸವರಾಜು, ಖಜಾಂಚಿ, ದಸರಾ ಸಮಿತಿ