ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಇನ್ನು ಕೋವಿಡ್-19 ಆಸ್ಪತ್ರೆ

26Tmk_Covid_Hospital_01
Published on

ತುಮಕೂರು: ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಕರೊನಾ ಸೋಂಕು ಹರಡದಂತೆ ತಡೆಗಟ್ಟಲು ಸಮರ ಸಾರಿರುವ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ 400 ಹಾಸಿಗೆಯುಳ್ಳ ಆಸ್ಪತ್ರೆಯನ್ನೇ ಪರಿವರ್ತಿಸಲು ಮುಂದಾಗಿದೆ. ಇಲ್ಲಿರುವ ಒಳರೋಗಿಗಳನ್ನು ಶ್ರೀದೇವಿ ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ರಾಷ್ಟ್ರೀಯ ಗುಣಮಟ್ಟ ಖಾತ್ರಿ ಯೋಜನೆ (ಎನ್‌ಕ್ಯುಎಎಸ್) ಅಡಿ ‘ಗುಣಮಟ್ಟ ಪ್ರಮಾಣಪತ್ರ’ (ಕ್ವಾಲಿಟಿ ಸರ್ಟಿಫಿಕೇಷನ್ ) ಪಡೆದಿರುವ ಜಿಲ್ಲಾ ಆಸ್ಪತ್ರೆ ಈಗ ಕರೊನಾ ಸಂಬಂಧಿಸಿದ ಚಿಕಿತ್ಸೆಗೆ ಸಂಪೂರ್ಣವಾಗಿ ಸಜ್ಜಾಗಿದೆ.

168 ಒಳರೋಗಿಗಳ ಶಿಫ್ಟ್ : ಜಿಲ್ಲಾ ಆಸ್ಪತ್ರೆಯಲ್ಲಿ 168 ಒಳರೋಗಿಗಳಿದ್ದು ಅದರಲ್ಲಿ ಕೆಲವರನ್ನು ಡಿಸ್‌ಚಾರ್ಜ್ ಮಾಡಲಾಗುವುದು. ಇತ್ತೀಚೆಗೆ 48 ಹೆರಿಗೆಗಳಾಗಿದ್ದು ಆರೋಗ್ಯವಂತ ತಾಯಂದಿರು, ನವಜಾತ ಶಿಶುಗಳನ್ನು ಮನೆಗೆ ಕಳುಹಿಸಿಕೊಡಲಾಗುತ್ತಿದೆ. ಇನ್ನೂ 2-3 ದಿನ ಆಸ್ಪತ್ರೆಯಲ್ಲೇ ಉಳಿಯಬೇಕೆನ್ನುವವರನ್ನು ಉಳಿಸಿಕೊಳ್ಳಲಾಗುತ್ತಿದೆ. ಈ ಒಳರೋಗಿಗಳನ್ನು ಶ್ರೀದೇವಿ ವೈದ್ಯಕೀಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುವುದು.

ಒಪಿಡಿ, ತುರ್ತುಚಿಕಿತ್ಸೆ ಬಂದ್: ಕೋವಿಡ್- 19 ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡುವ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿಗಳ ಚಿಕಿತ್ಸೆ ಹಾಗೂ ತುರ್ತು ಚಿಕಿತ್ಸಾ ಘಟಕವನ್ನು ಬಂದ್ ಮಾಡಲಾಗುವುದು. ಇನ್ಮುಂದೆ ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುತ್ತಿದ್ದ್ದ ಚಿಕಿತ್ಸೆಗಳು ಸಿಗಲಿವೆ. ಕರೊನಾ ಸಂಬಂಧಿಸಿದ ಚಿಕಿತ್ಸೆಗೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ.

10 ಹಾಸಿಗೆಗಳ ಐಸೋಲೇಷನ್ ವಾರ್ಡ್: ಜಿಲ್ಲಾ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಐಸೋಲೇಷನ್ ವಾರ್ಡ್ ನಿರ್ಮಿಸಿದ್ದು ಇದರಲ್ಲಿ 8 ಶಂಕಿತರನ್ನು ತೀವ್ರ ನಿಗಾವಣೆಯಲ್ಲಿಟ್ಟಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೊನಾ ವಿರುದ್ಧದ ಸಮರಕ್ಕೆ ಜಿಲ್ಲಾಸ್ಪತ್ರೆ ಸಿಬ್ಬಂದಿ: ಪ್ರತಿನಿತ್ಯ 900-1000 ಹೊರರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು ತಜ್ಞ ವೈದ್ಯರ, ಸಿಬ್ಬಂದಿ ಕೊರತೆ ಇಲ್ಲ. 43 ವೈದ್ಯರು, 68 ಸ್ಟ್ಾ ನರ್ಸ್‌ಗಳು, 6 ಎಎನ್‌ಎಂ, 46 ಡಿ ಗ್ರೂಪ್ ನೌಕರರು, 6 ಟೆಕ್ನಿಷಿಯನ್‌ಗಳು, 6 ಫಾರ್ಮಸಿಸ್ಟ್ ಗಳು, 36 ಸ್ವಚ್ಛತಾ ಸಿಬ್ಬಂದಿ ಇದ್ದು ಕರೊನಾ ವಿರುದ್ಧದ ಸಮರಕ್ಕೆ ಬಳಸಿಕೊಳ್ಳಲು ಜಿಲ್ಲಾ ಆರೋಗ್ಯ ಇಲಾಖೆ ಈಗಾಗಲೇ ಅಗತ್ಯ ತರಬೇತಿ ನೀಡಿದೆ.

ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ರೂಪಿಸಲು ಹೆಜ್ಜೆ ಇಡಲಾಗಿದೆ. ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ 168 ಒಳರೋಗಿಗಳನ್ನು ಶ್ರೀದೇವಿ ವೈದ್ಯಕೀಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುವುದು. ಕೆಲವರನ್ನು ಡಿಸ್‌ಚಾರ್ಜ್ ಸಹ ಮಾಡಲಾಗುವುದು. ಕೋವಿಡ್-19 ಆಸ್ಪತ್ರೆ ನಿರ್ವಹಣೆಗೆ ಅಗತ್ಯ ವೈದ್ಯರು, ಸಿಬ್ಬಂದಿ ಇದ್ದಾರೆ. ತಂಡಗಳನ್ನು ಮಾಡಿ ಅವರನ್ನು ಶಿಫ್ಟ್‌ಗಳ ಮೇಲೆ ನಿಯೋಜಿಸಲಾಗುವುದು. ಶ್ರೀದೇವಿ ಆಸ್ಪತ್ರೆಯವರು ಪ್ರಸೂತಿ ತಜ್ಞೆ ವೈದ್ಯರು, ಸ್ಟ್‌ಟಾ ನರ್ಸ್‌ಗಳನ್ನು ನೀಡುವಂತೆ ಕೋರಿದ್ದಾರೆ. ಡಾ.ಟಿ.ಎ.ವೀರಭದ್ರಯ್ಯ ಜಿಲ್ಲಾ ಶಸ್ತ್ರಚಿಕಿತ್ಸಕ ಕರೊನಾ ಸಂಬಂಧಿಸಿದಂತೆ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ತೆರೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಯನ್ನೇ ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿದ್ದ ಒಳರೋಗಿಗಳನ್ನು ಶ್ರೀದೇವಿ ವೈದ್ಯಕೀಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುವುದು. ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net