

ತುಮಕೂರು: ಗ್ರಾಮೀಣ ಅರ್ಹರು ಸಾಮಾಜಿಕ ಭದ್ರತಾ ಯೋಜನೆಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿರುವ ಮಹತ್ವಾಕಾಂಕ್ಷಿ ‘ಪಿಂಚಣಿ ಅದಾಲತ್’ ಜಿಲ್ಲೆಯಲ್ಲಿ ಹಳ್ಳಹಿಡಿದಿದೆ.
ಕಂದಾಯ ಇಲಾಖೆ ಮೇಲುಸ್ತುವಾರಿಯಲ್ಲಿ ಪ್ರತೀ ಹೋಬಳಿ ಕೇಂದ್ರದಲ್ಲಿ ಅದಾಲತ್ ನಡೆಸಬೇಕು ಎಂಬ ಸೂಚನೆಯನ್ನು ಗಾಳಿಗೆ ತೂರಲಾಗಿದ್ದು, ಕಳೆದ ವರ್ಷ ಜಿಲ್ಲೆಯಲ್ಲಿ ಕೇವಲ 159 ಪಿಂಚಣಿ ಅದಾಲತ್ ನಡೆಸಲಾಗಿದೆ.
ಸಾಮಾಜಿಕ ಭದ್ರತಾ ಯೋಜನೆಗಳು ನೈಜ ಫಲಾನುಭವಿಗಳಿಗೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ದೊರೆಯಬೇಕು ಎಂಬ ಉದ್ದೇಶದಿಂದ ಆಯಾ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಹಸೀಲ್ದಾರ್ ಸಹಿತ ಎಲ್ಲ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಹಾಜರಿದ್ದು
ಕೆಲಸ ಮಾಡುವ ಅದಾಲತ್‌ಗೆ ನಿರುತ್ಸಾಹ ತೋರಿಸಿದ್ದರೂ ಜಿಲ್ಲಾಡಳಿತ ಜಾಣಮೌನದಲ್ಲಿದೆ.
ಜಿಲ್ಲೆಯ 10 ತಾಲೂಕುಗಳಲ್ಲಿ ಕಳೆದೊಂದು ವರ್ಷದಲ್ಲಿ 159 ಪಿಂಚಣಿ ಅದಾಲತ್ ಮಾಡಲು ಸಾಧ್ಯವಾಗಿರುವ ಜಿಲ್ಲಾಡಳಿತ ಅದಾಲತ್‌ನಲ್ಲಿ ಸ್ವೀಕರಿಸಿರುವ 4727 ಅರ್ಜಿಗಳನ್ನು ವಿಲೇವಾರಿ ಮಾಡಿ ತನ್ನ ಬೆನ್ನು ತಾನೇ ತಟ್ಟಿಕೊಂಡಿದೆ.
ಪಡಿತರ ಚೀಟಿ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಹಾಗೂ ವಸತಿ ಸೌಕರ್ಯಗಳ ನೈಜ ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ಮನೆಯ ಬಾಗಿಲಿನಲ್ಲಿಯೇ ದೊರೆಯಬೇಕು ಎಂಬ ಸರ್ಕಾರದ ಉದ್ದೇಶ ಅಧಿಕಾರಿಗಳ ನಿರುತ್ಸಾಹದಿಂದ ಮಣ್ಣುಪಾಲಾಗಿದೆ.ಎಲ್ಲ ಉಪವಿಭಾಗಾಧಿಕಾರಿಗಳೇ ಇದರ ನೇತೃತ್ವ ವಹಿಸಬೇಕು ಎಂದು ಪ್ರಗತಿ ಪರಿಶೀಲನಾ ಸಭೆಗಳಲ್ಲಿಯೂ ಸಚಿವರು ಹೇಳಿದ್ದಷ್ಟೇ ಸಾಧನೆಯಾಗಿದ್ದು ಮಧ್ಯವರ್ತಿಗಳ ಹಾವಳಿ ನಿರಂತರವಾಗಿದೆ.
ಅಧಿಕಾರಿಗಳಿಗೇಕೆ ನಿರುತ್ಸಾಹ?:ಆಯಾ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಜರುಗುವ ಪಿಂಚಣಿ ಅದಾಲತ್‌ನಲ್ಲಿ ತಹಸೀಲ್ದಾರ್, ಶಿರಸ್ತೇದಾರರು, ಕಂದಾಯ ನಿರೀಕ್ಷಕ, ಗ್ರಾಮಲೆಕ್ಕಿಗ ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದು ಅರ್ಹರಿಂದ ನೇರವಾಗಿ ಅರ್ಜಿ ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹಾರ ಪಡೆಯುವ ಸೌಲಭ್ಯಕ್ಕೆ ಅಧಿಕಾರಿಗಳು ನಿರುತ್ಸಾಹ ತೋರಿಸುತ್ತಿದ್ದಾರೆ. ಮಧ್ಯವರ್ತಿಗಳ ಮೂಲಕ ಅರ್ಜಿಗಳು ಬಂದರಷ್ಟೇ ತಮಗೆ ಪುಡಿಕಾಸು ಸಿಗಲಿದೆ ಎಂಬ ದುರಾಸೆಯಿಂದ ಕೆಲವು ಅಧಿಕಾರಿಗಳು ಅದಾಲತ್ ಆಯೋಜನೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದ್ದು, ಅವರ ವಾದಕ್ಕೆ ತಲೆಯಾಡಿಸುವ ಜಿಲ್ಲಾಡಳಿತದ ಕಾರ್ಯವೈಖರಿಯಿಂದ ಬಡಜನರಿಗೆ ಅನ್ಯಾಯವಾಗುವಂತಾಗಿದೆ.
ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ 10: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿಯಲ್ಲಿಯೇ ಕಳೆದೊಂದು ವರ್ಷದಲ್ಲಿ ಕೇವಲ 10 ಅದಾಲತ್ ನಡೆಸಲಾಗಿದೆ. ಆದರೆ, 672 ಅರ್ಜಿ ವಿಲೇವಾರಿಯಾಗಿದೆ. ಕುಣಿಗಲ್ ತಾಲೂಕಿನಲ್ಲಿ ಅತೀ ಹೆಚ್ಚು 29 ಅದಾಲತ್ ನಡೆದಿದ್ದು, 206 ಅರ್ಜಿ ಮಾತ್ರ ವಿಲೇವಾರಿಯಾಗಿವೆ. ತುಮಕೂರು ತಾಲೂಕಿನಲ್ಲಿ ಕೇವಲ 71 ಅರ್ಜಿ, ಗುಬ್ಬಿ ತಾಲೂಕಿನಲ್ಲಿ 27 ಅದಾಲತ್ ನಡೆಸಿ ಬರೊಬ್ಬರಿ 955 ಅರ್ಜಿ ವಿಲೇವಾರಿ ಮಾಡಲಾಗಿದೆ. ಅದಾಲತ್‌ಗಳನ್ನು ಹೆಚ್ಚಿಸಿದರಷ್ಟೇ ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯಲು ಸಾಧ್ಯವಿದ್ದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆಯ ಜತೆ ಗುರಿ ನಿಗದಿಪಡಿಸಬೇಕಿದೆ.