31ಜನಕ್ಕೆ ಕರೊನಾ, ಆತಂಕಕ್ಕೆ ಜನ ಹೈರಾಣ

5 kunigal 1
Published on

ತುಮಕೂರು: ಜಿಲ್ಲೆಯಲ್ಲಿ ಭಾನುವಾರ 31 ಜನರಲ್ಲಿ ಕರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 252ಕ್ಕೇರಿದೆ. ತುಮಕೂರು ನಗರದಲ್ಲಿ 12 ಮಂದಿಗೆ ಕಾಣಿಸಿಕೊಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 66ಕ್ಕೇರಿದೆ. ಪಾವಗಡ 5, ಕುಣಿಗಲ್ 5, ಗುಬ್ಬಿ 4, ಮಧುಗಿರಿ 3, ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆಯಲ್ಲಿ ತಲಾ ಒಬ್ಬರಿಗೆ ತಗುಲಿದೆ. 183 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಜಿಲ್ಲೆಯಲ್ಲಿ 8 ಮಂದಿ ಬಲಿಯಾಗಿದ್ದಾರೆ. 61 ಮಂದಿ ಗುಣಮುಖರಾಗಿದ್ದಾರೆ.

ಕಾರಾಗೃಹಕ್ಕೂ ಕಾಲಿಟ್ಟ ಕರೊನಾ: ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದ್ದ 23 ವರ್ಷದ ಆರೋಪಿಗೆ ಸೋಂಕು ದೃಢಪಟ್ಟಿದೆ. ಆತನನ್ನು ಕರೆತಂದಿದ್ದ ಪೊಲೀಸರು ಹಾಗೂ ಕಾರಾಗೃಹ ಸಿಬ್ಬಂದಿಗೂ ಆತಂಕ ಶುರುವಾಗಿದೆ.

ಒಂದೇ ಕುಟುಂಬದ ನಾಲ್ವರಿಗೆ ಸೋಂಕು: ಬೆಂಗಳೂರಿಗೆ ಹೋಗಿ ಬರುತ್ತಿದ್ದ ಮಾರುತಿ ನಗರದ 47 ವರ್ಷದ ವ್ಯಕ್ತಿಯಿಂದ ಮನೆಗೆಲ್ಲ ಸೋಂಕು ಹಬ್ಬಿದೆ. ಆತನ 38 ವರ್ಷದ ಪತ್ನಿ, 10 ವರ್ಷದ ಪುತ್ರ, 3 ವರ್ಷದ ಪುತ್ರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. 4 ಮಂದಿ ಪ್ರಾಥಮಿಕ ಹಾಗೂ 7 ಮಂದಿ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸಪ್ತಗಿರಿ ಬಡಾವಣೆಯ 44 ವರ್ಷದ ವ್ಯಕ್ತಿಗೆ ರೋಗಲಕ್ಷಣವಿಲ್ಲದಿದ್ದರೂ ಸೋಂಕು ದೃಢಪಟ್ಟಿದೆ.

ಬೆಂಗಳೂರು ಪ್ರಯಾಣ ಹಿನ್ನೆಲೆಯುಳ್ಳ ಅಶೋಕ ನಗರದ 28 ವರ್ಷದ ಮಹಿಳೆಗೆ ಜ್ವರ ಕಾಣಿಸಿಕೊಂಡಿದ್ದು, ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಇಬ್ಬರು ಪ್ರಾಥಮಿಕ, 6 ದ್ವಿತೀಯ ಹಂತದ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸಿದ್ದರಾಮೇಶ್ವರ ಬಡಾವಣೆಯ 38 ವರ್ಷದ ವ್ಯಕ್ತಿ ಬೆಂಗಳೂರಿನ ಪಯಣ ಹಿನ್ನೆಲೆ ಹೊಂದಿದ್ದು, ಸೋಂಕಿತನ ಸಂಪರ್ಕ ಹೊಂದಿದ್ದರು. 3 ಪ್ರಾಥಮಿಕ, ಐವರು ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ.

ಸೋಂಕಿತರ ಸಂಪರ್ಕ ಹೊಂದಿದ್ದ ಸಪ್ತಗಿರಿ ಬಡಾವಣೆಯ 38 ವರ್ಷದ ವ್ಯಕ್ತಿಗೂ ಕಂಡುಬಂದಿದೆ. ಐವರು ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆ. ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದ ಬಟವಾಡಿಯ 40 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ವಿನಾಯಕ ನಗರದ 70 ವರ್ಷದ ವೃದ್ಧನಿಗೆ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದು ಚಿಕಿತ್ಸೆ ವೇಳೆ ಪಾಸಿಟಿವ್ ದೃಢಪಟ್ಟಿದೆ. ವಿದ್ಯಾನಗರದ 31 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದ ಮೂವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ತುಮಕೂರು ತಾಲೂಕಿನ ಕಲ್ಕೆರೆಯ 48 ವರ್ಷದ ವ್ಯಕ್ತಿಗೆ ಜ್ವರ ಬಂದಿದ್ದು ಜಿಲ್ಲಾ ಆಸ್ಪತ್ರೆಗೆ ತೆರಳಿದ್ದಾಗ ಕೋವಿಡ್ ಪರೀಕ್ಷೆ ಮಾಡಲಾಗಿದ್ದು ಸೋಂಕು ದೃಢಪಟ್ಟಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಕಾಡೇನಹಳ್ಳಿಯ 8 ವರ್ಷದ ಗಂಡು ಮಗುವಿಗೆ ಸೋಂಕು ತಗುಲಿದೆ. ಜ್ವರ, ಕೆಮ್ಮು, ನೆಗಡಿ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ತೆರಳಿದ್ದಾಗ ಪರೀಕ್ಷೆಗೆ ಕಳುಹಿಸಲಾಗಿತ್ತು. ತುರುವೇಕೆರೆ ತಾಲೂಕಿನ ಮೇಲಿನಹೊರಗೆರೆಹಳ್ಳಿಯ 8 ವರ್ಷದ ಗಂಡು ಮಗುವಿಗೆ ಜ್ವರ, ಕೆಮ್ಮು ಕಾಣಿಸಿಕೊಂಡಿದ್ದು ಸೋಂಕು ಪರೀಕ್ಷೆ ವೇಳೆ ಪತ್ತೆಯಾಗಿದೆ.

ಕುಣಿಗಲ್ ಠಾಣೆ ಮೆಟ್ಟಿಲೇರಿದ ಕರೊನಾ!: ಕುಣಿಗಲ್ ಠಾಣೆಯ 39 ವರ್ಷದ ಪೇದೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಠಾಣೆ ಹಾಗೂ ಅವರ ವಾಸವಿದ್ದ ಪೊಲೀಸ್ ವಸತಿಗೃಹವನ್ನು ತಾಲೂಕು ಆಡಳಿತ ಭಾನುವಾರ ಸೀಲ್‌ಡೌನ್ ಮಾಡಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಜ್ವರ, ಕೆಮ್ಮು, ನೆಗಡಿಗೆ ತುತ್ತಾಗಿದ್ದು, ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಸುದ್ದಿ ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ಪೊಲೀಸ್ ವಸತಿಗೃಹದಲ್ಲಿ ವಾಸವಿದ್ದ ಪೊಲೀಸರ ಕುಟುಂಬಗಳು ಊರುಗಳಿಗೆ ಸ್ಥಳಾಂತರಗೊಂಡಿವೆ. ಸೀಲ್‌ಡೌನ್ ಕಾರಣ ತಾಲೂಕು ಕಚೇರಿ ಆವರಣದಲ್ಲಿರುವ ಕಂದಾಯ ಭವನಕ್ಕೆ ಠಾಣೆ ಸ್ಥಳಾಂತರ ಮಾಡಲಾಗಿದೆ. ಕುಣಿಗಲ್‌ನ 38 ವರ್ಷದ ವ್ಯಕ್ತಿಗೆ ಕೆಮ್ಮು ಕಾಣಿಸಿಕೊಂಡಿದ್ದು ಅವರಿಗೂ ಸೋಂಕು ದೃಢಪಟ್ಟಿದೆ. ಕೆಆರ್‌ಪಿ ಅಗ್ರಹಾರದ 35 ವರ್ಷದ ವ್ಯಕ್ತಿಗೆ ಕೆಮ್ಮು ಕಾಣಿಸಿದ್ದು ಪರೀಕ್ಷೆಗೆ ಒಳಪಡಿಸಿದಾಗ ದೃಢವಾಗಿದೆ. ಸಿರಿವರ ರಸ್ತೆಯ 39 ವರ್ಷದ ವ್ಯಕ್ತಿ ಹಾಗೂ ಹೌಸಿಂಗ್ ಬೋರ್ಡ್ ಕಾಲನಿಯ 43 ವರ್ಷದ ವ್ಯಕ್ತಿಗೆ ಕೆಮ್ಮು ಕಾಣಿಸಿದ್ದು ಇಬ್ಬರಲ್ಲೂ ಸೋಂಕು ಖಚಿತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net