ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಕರೊನಾ ಅಟ್ಟಹಾಸ

3
Published on

ತುಮಕೂರು: ಜಿಲ್ಲೆಯಲ್ಲಿ ಬುಧವಾರವೂ ಕರೊನಾ ಅಟ್ಟಹಾಸ ಮುಂದುವರಿದಿದೆ. 4 ತಿಂಗಳ ಹೆಣ್ಣುಮಗು ಸೇರಿ ಹೊಸದಾಗಿ 26 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 139ಕ್ಕೇರಿದೆ. ಸೋಂಕಿತನ ದ್ವಿತೀಯ ಸಂಪರ್ಕದಲ್ಲಿದ್ದ ಕುಣಿಗಲ್ ತಾಲೂಕಿನ ತಿಮ್ಮೇಗೌಡನಪಾಳ್ಯದ 60 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಮೃತರ ಸಂಖ್ಯೆ 7ಕ್ಕೇರಿದೆ.

ಮಂಗಳವಾರ ಬಿಡುವುಕೊಟ್ಟಿದ್ದ ಕರೊನಾ ಮಹಾಮಾರಿ ಮರುದಿನ ರಣಕಹಳೆ ಊದಿದೆ. ಜಿಲ್ಲೆಯಲ್ಲಿ ಬುಧವಾರ 26 ಪ್ರಕರಣ ಬೆಳಕಿಗೆ ಬಂದಿದ್ದು, ತುಮಕೂರು 8, ಕುಣಿಗಲ್ 6, ಮಧುಗಿರಿ 4, ಪಾವಗಡ 3, ಶಿರಾ 2, ಗುಬ್ಬಿ 2 ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ 1 ಪ್ರಕರಣ ದಾಖಲಾಗಿವೆ. ಹಳ್ಳಿಹಳ್ಳಿಗೂ ಕಾಲಿಡುತ್ತಿರುವ ಮಹಾಮಾರಿ ನಿಯಂತ್ರಣಕ್ಕೆ ಬಾರದಿರುವುದು ಜಿಲ್ಲಾಡಳಿತದ ತಲೆಬಿಸಿ ಮಾಡಿದೆ.

ತುಮಕೂರು 8 ಪ್ರಕರಣ: ತುಮಕೂರಿನಲ್ಲಿ ಹೊಸ ಬಡಾವಣೆಗಳಿಗೆ ಕರೊನಾ ಕಾಲಿಟ್ಟಿದೆ. ಸಿದ್ಧಗಂಗಾ ಬಡಾವಣೆ, ಅಶೋಕನಗರ, ಚಂದ್ರಮೌಳೇಶ್ವರ ಬಡಾವಣೆ ಅಲ್ಲದೆ, ನಗರದ ಹೊರವಲಯಗಳಾದ ಮಂಚಕಲ್‌ಕುಪ್ಪೆ, ಸಿದ್ದಾರ್ಥನಗರ, ಹೆಬ್ಬಾಕದಲ್ಲೂ ಕಾಣಿಸಿಕೊಂಡಿದೆ.

ರಾಯಚೂರಿನಿಂದ ಬಂದಿದ್ದ ಮರಳೂರು ದಿಣ್ಣೆ ನಿವಾಸಿ, 11 ವರ್ಷದ ಬಾಲಕಿಗೆ, ಒಡಿಶಾದಿಂದ ಬಂದಿದ್ದ ಮಂಚಕಲ್ ಕುಪ್ಪೆಯ 39 ಹಾಗೂ ಹೆಬ್ಬಾಕದ 45 ವರ್ಷದ ವ್ಯಕ್ತಿಗೆ ಮತ್ತು ಡಿಎಸ್ ಪಾಳ್ಯದ 60 ವರ್ಷದ ವೃದ್ಧೆಗೂ ಸೋಂಕು ತಗುಲಿದೆ.

ತೀವ್ರ ಉಸಿರಾದ ತೊಂದರೆಯಿಂದ ಬಳಲುತ್ತಿದ್ದ ಸಿದ್ಧಾರ್ಥ ನಗರದ 47 ವರ್ಷದ ಮಹಿಳೆ ಬೆಂಗಳೂರಿನ ಖಾಸಗಿ ಪ್ರಯೋಗಾಲಯದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಶೋಕ ನಗರದ 27 ವರ್ಷದ ಮಹಿಳೆ, ಕ್ಯಾತಸಂದ್ರದ ಚಂದ್ರಮೌಳೇಶ್ವರ ಬಡಾವಣೆಯ 54 ವರ್ಷದ ವ್ಯಕ್ತಿ, ಸಿದ್ಧಗಂಗಾ ಬಡಾವಣೆ ನಿವಾಸಿ 34 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚಲಾಗುತ್ತಿದೆ.

ಗುಬ್ಬಿ ಹೊಸಕೆರೆಯ 25 ವರ್ಷದ ವ್ಯಕ್ತಿ, ಗಂಗಯ್ಯನಪಾಳ್ಯದ 60 ವರ್ಷದ ವೃದ್ಧೆಗೂ ಸೋಂಕು ತಗುಲಿದೆ. ಶಿರಾ ತಾಲೂಕು ಬಿ.ದಾಸರಹಳ್ಳಿಯ 20 ವರ್ಷದ ಯುವತಿ, ದೊಡ್ಡ ಅಗ್ರಹಾರ ಬಳಿಯ ಮಳನಹಳ್ಳಿಯ 24 ವರ್ಷದ ಯುವಕನಿಗೂ ಸೋಂಕು ದೃಢಪಟ್ಟಿದೆ.

ಹಳ್ಳಿಯ 6 ಜನರಿಗೆ ಕರೊನಾ: ಕುಣಿಗಲ್ ತಾಲೂಕಿನ ಹಳ್ಳಿಗಳಿಗೆ ಕರೊನಾ ಎಂಟ್ರಿ ಕೊಟ್ಟಿದ್ದು ಸಂಖ್ಯೆ ಹೆಚ್ಚುತ್ತಿದೆ. ಬುಧವಾರ 6 ಜನರಿಗೆ ತಟ್ಟಿದೆ. ಸೀಗೆಪಾಳ್ಯದ 33 ವರ್ಷದ ಪುರುಷ, ಯಾಚನಹಳ್ಳಿಯ 70 ವರ್ಷದ ಪುರುಷ, 45 ವರ್ಷದ ಮಹಿಳೆ, ಅಮೃತೂರು ಇಂದಿರಾನಗರದ 43 ವರ್ಷದ ಮಹಿಳೆ, ತಾವರೆಕೆರೆಯ 34 ವರ್ಷದ ಪುರುಷ, ತಿಮ್ಮೇಗೌಡನಪಾಳ್ಯದ 60 ವರ್ಷ ಪುರುಷನಿಗೆ ಸೋಂಕು ತಗುಲಿದ್ದು ಇವರೆಲ್ಲರ ಪ್ರಯಾಣದ ಹಿನ್ನೆಲೆ, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಪತ್ತೆ ಮಾಡುವುದೇ ಸವಾಲಾಗಿದೆ.

ಬರಬೇಕಿರುವ ವರದಿ 2526: ಜಿಲ್ಲೆಯಲ್ಲಿ ಈವರೆಗೆ 18461 ಜನರ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 2526 ಜನರ ವರದಿಗಾಗಿ ಜಿಲ್ಲಾಡಳಿತ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಪ್ರಸ್ತುತ 2385 ಜನರು ಕ್ವಾರಂಟೇನ್‌ನಲ್ಲಿದ್ದು 83 ಸಕ್ರಿಯ ಪ್ರಕರಣಗಳಿವೆ.

ಗುಣಮುಖರಾದ 7 ಜನರು ಡಿಸ್ಚಾರ್ಜ್: ಬುಧವಾರ 7 ಜನರು ಗುಣಮುಖರಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆಯೂ ತುಸು ಸಮಾಧಾನ ತಂದಿದೆ. ಪಿ.7272, 8499, 8500, 8795, 8796, 8797 ಹಾಗೂ 9231 ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದರು. ಹೂಗುಚ್ಛ ನೀಡಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಬೀಳ್ಕೋಟ್ಟರು. ಬಿಡುಗಡೆಯಾದವರಲ್ಲಿ ಕೃತಜ್ಞತಾ ಭಾವ ಇತ್ತು.

6 ವರ್ಷದ ಪುಟಾಣಿ ಸೇರಿ ಮೂವರಿಗೆ ಪಾಸಿಟಿವ್! : ಪಾವಗಡ ತಾಲೂಕು ರಾಜವಂತಿ ಹೊಸಕೋಟೆಯಲ್ಲಿ 6 ವರ್ಷದ ಹೆಣ್ಣು ಮಗುವಿಗೆ ಮಹಾಮಾರಿ ವಕ್ಕರಿಸಿದೆ. ಇತ್ತೀಚೆಗೆ ಯಾವುದೇ ಹೊರ ಪ್ರಯಾಣದ ಹಿನ್ನೆಲೆ ಇಲ್ಲದ ಪುಟಾಣಿಗೆ ಸೋಂಕು ತಗುಲಿರುವುದು ಗ್ರಾಮದಲ್ಲಿ ಭಯಕ್ಕೆ ಕಾರಣವಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರನ್ನು ಕ್ವಾರಂಟೈನ್ ಮಾಡಲಾಗಿದೆ. ಹೊಸಹಳ್ಳಿಯ 22 ವರ್ಷದ ಯುವಕ, ಪಾವಗಡ ನಗರದ 39 ವರ್ಷ ಪುರುಷನಿಗೂ ಸೋಂಕು ದೃಢವಾಗಿದ್ದು ಪ್ರಯಾಣದ ಹಿನ್ನೆಲೆ ಮಾತ್ರ ಇಲ್ಲ. ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಹುಡುಗಿ ಕ್ವಾರಂಟೈನ್ ಮಾಡುವುದು ಸಾಹಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net