

ತುಮಕೂರು: ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಮಳೆ ಹಾಗೂ ಹೇಮಾವತಿ ನೀರು ಹರಿದ ಹಿನ್ನೆಲೆಯಲ್ಲಿ ಬಹುತೇಕ ಕೆರೆಗಳು ತುಂಬಿವೆ ಎಂಬ ಕಾರಣಕ್ಕೆ ಮೀನು ಸಾಕಣೆಗೆ ಅನುಮತಿ ನೀಡಿದ್ದೇ ಈಗ ಮುಳುವಾಗಿದೆ.
ಸಾಕಣೆ ನೆಪದಲ್ಲಿ ಅವುಗಳಿಗೆ ಆಹಾರ ಪೂರೈಸುತ್ತೇವೆ ಎಂದು ಕೋಳಿ ಕಸ, ವಿವಿಧ ತ್ಯಾಜ್ಯಗಳನ್ನು ಕೆರೆಗಳಿಗೆ ಸುರಿಯಲಾರಂಭಿಸಿದ್ದು, ಜಿಲ್ಲೆಯ ಬಹುತೇಕ ಕೆರೆಗಳು ದುರ್ವಾಸನೆ ಬೀರುತ್ತಿದ್ದರೆ, ಜನ-ಜಾನುವಾರು, ಕಾಡುಪ್ರಾಣಿ, ಪಕ್ಷಿಗಳು ಕೆರೆ ನೀರು
ಕುಡಿಯಲಾರದ ಸ್ಥಿತಿಗೆ ತಲುಪಿವೆ.
ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆ ವ್ಯಾಪ್ತಿಯ 400, ಗ್ರಾಪಂ ವ್ಯಾಪ್ತಿಯ 1,232 ಕೆರೆಗಳು, ಮಾರ್ಕೋನಹಳ್ಳಿ, ತೀತಾ, ಮಂಗಳಾ ಹಾಗೂ ಬೋರನಕಣಿವೆ ಜಲಾಶಯ ಹಾಗೂ 2 ನದಿ ಭಾಗದ 51,869 ಹೆ. ಜಲ ವಿಸ್ತೀರ್ಣದಲ್ಲಿ ಮೀನು ಸಾಕಣೆ ಮಾಡಲಾಗುತ್ತಿದೆ. ಕಳೆದ ಎರಡು ವರ್ಷದಿಂದ 2.90ಕೋಟಿ ರೂ. ಆದಾಯ ಗಳಿಸಿರುವ ಇಲಾಖೆ ಕೆರೆ ಸಂರಕ್ಷಣೆಯನ್ನು ಸಂಪೂರ್ಣ ಮರೆತಿದೆ. ಪುಡಿಗಾಸಿನ ಆದಾಯವನ್ನೆ ಗುರಿಯಾಗಿಸಿಕೊಂಡು ಕೆರೆ ಕಲುಷಿತವಾಗುತ್ತಿರುವುದನ್ನು ಕಂಡೂ ಕಾಣದಂತಿದೆ.
ಮೀನುಗಾರಿಕೆ ಇಲಾಖೆ ಮತ್ಸೃ ಪಾಲನೆಗೆ 320 ದೊಡ್ಡ ಕೆರೆಗಳಿಗೆ 284 ಲಕ್ಷ ಮೀನು ಮರಿಗಳನ್ನು ಸಾಕಣೆಗೆ ಬಿಡಲಾಗಿದೆ. ಗುತ್ತಿಗೆದಾರರು ಕಡಿಮೆ ಬೆಲೆಗೆ ಹಳ್ಳಿಗಳಲ್ಲಿರುವ ಕೆರೆಗಳನ್ನು ಗುತ್ತಿಗೆ ಪಡೆದು ಕೆರೆಗೆ ವಾರಸುದಾರರಾಗಿದ್ದಾರೆ. ಗ್ರಾಮೀಣ ಜನರು ಕೆರೆಯ ಬಳಿಯೂ ಬರದಂತೆ ತಡೆಯಲು ಪುಡಿರೌಡಿಗಳನ್ನು ಕಾಯಲು ನೇಮಿಸಿಕೊಂಡಿದ್ದಾರೆ. ಈ ಮೀನು ಮರಿಗಳು ಶೀಘ್ರ ಬೆಳೆಯಲು ರಾಸಾಯನಿಕ, ಕೋಳಿ ಕಸವನ್ನು ಕೆರೆಗೆ ಸುರಿಯಲಾಗುತ್ತಿದ್ದರೂ ಸಣ್ಣ ನೀರಾವರಿ ಇಲಾಖೆ, ಜಿಪಂ ಮೌನವಾಗಿವೆ.
ಕೆರೆ ಸುತ್ತ ದುರ್ವಾಸನೆ: ಮೀನು ಸಾಕಣೆ ಮಾಡಿರುವ ಕೆರೆಗಳ ಸುತ್ತಮುತ್ತ ದುರ್ವಾಸನೆ ಬೀರುತ್ತಿದೆ, ನಿತ್ಯ ಮೀನು ಹಿಡಿದು ಅದೇ ಕೆರೆಯಲ್ಲಿ ಶುಚಿ ಗೊಳಿ ಸುವ ಜತೆಗೆ ಮೀನು ತಿನ್ನಲು ಹಾಕಿರುವ ಲೋಡ್‌ಗಟ್ಟಲೆ ಕೋಳಿ ಕಸ ಕೆರೆಯ ಪರಿಸರ ಹಾಳುಗೆಡವಿದೆ.
ನೀರಿನಲ್ಲಿ ಪೋಷಕಾಂಶ ಹೆಚ್ಚಿಸುವ ಸಲುವಾಗಿ ಕೋಳಿ ಮಲವನ್ನು ನೀರಿಗೆ ಸೇರಿಸುತ್ತಾರೆ, ಸ್ವಾಭಾವಿಕವಾಗಿ ಇದರಿಂದ ತೊಂದರೆ ಇಲ್ಲ. ಆದರೆ, ಸದಾ ರಾಸಾಯನಿಕದ ಜತೆಯೇ ಬೆಳೆಯುವ ಕೋಳಿ ಮಲ, ತ್ಯಾಜ್ಯದಲ್ಲಿ ವಿಷ ಪದಾರ್ಥ ಉಳಿದು ನೀರಿಗೆ ಸೇರಿದರೆ ಜಲಚರಗಳಿಗೆ ತೊಂದರೆಯಾಗಬಹುದು. ಬಿ.ವಿ.ಗುಂಡಪ್ಪ ಪರಿಸರ ತಜ್ಞ, ತುಮಕೂರು ಮೀನುಗಳನ್ನು ಸಾಕಲು ಕೋಳಿ ಅಥವಾ ಇನ್ಯಾವುದೇ ಕಸ ಹಾಕಲು ಅವಕಾಶವಿಲ್ಲ. ಆದರೆ, ಜಿಲ್ಲೆಯ ಕೆಲವು ಕೆರೆಗಳಲ್ಲಿ ಕಸ ಹಾಕಲಾಗುತ್ತಿರುವ ಬಗ್ಗೆ ದೂರುಗಳು ಬಂದರೆ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಗುತ್ತಿಗೆ ರದ್ದು ಮಾಡಲಾಗುವುದು. ಎಲ್.ಕುಮಾರ್ ಎಸ್‌ಎಚ್‌ಎ, ಮೀನುಗಾರಿಕೆ ಇಲಾಖೆ ಮೀನು ಸಾಕುವ ನೆಪದಲ್ಲಿ ಅವೈಜ್ಞಾನಿಕವಾಗಿ ಸುರಿದ ಕೋಳಿ ಕಸ ಇಡೀ ಕೆರೆ ನೀರನ್ನು ಹಾಳುಮಾಡಿದೆ. ಜನ, ಜಾನುವಾರು ನೀರನ್ನು ಮುಟ್ಟುವುದಿರಲಿ, ಕೆರೆ ಬಳಿ ಹೋಗಲು ಸಾಧ್ಯವಾಗದಷ್ಟು ದುರ್ವಾಸನೆ ಬೀರುತ್ತಿದೆ. ಎಸ್.ಶಶಿಧರ್ ಸಾರಿಗೆಹಳ್ಳಿ, ತುರುವೇಕೆರೆ