ತುಮಕೂರು ಬೆನ್ನತ್ತಿದೆ ಕರೊನಾ ಸೋಂಕು

web2
Published on

ತುಮಕೂರು: ಜಿಲ್ಲೆಯಲ್ಲಿ ಭಾನುವಾರ 46 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಅಗ್ರಪಟ್ಟ ಕಾಯ್ದುಕೊಂಡಿರುವ ತುಮಕೂರು ನಗರದಲ್ಲಿ 25 ಜನರಲ್ಲಿ ಸೋಂಕು ಕಾಣಿಸಿದೆ.

ಚಿಕ್ಕನಾಯಕನಹಳ್ಳಿ, ಪಾವಗಡದಲ್ಲಿ 4 ಜನರಿಗೆ, ಮಧುಗಿರಿ, ಶಿರಾ ಹಾಗೂ ಕುಣಿಗಲ್ ತಾಲೂಕಿನಲ್ಲಿ ತಲಾ 3, ಕೊರಟಗೆರೆ 2, ತುರುವೇಕೆರೆ ಹಾಗೂ ಗುಬ್ಬಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಪಾವಗಡ ತಾಲೂಕಿನ 60 ವರ್ಷದ ವೃದ್ಧ, ತುಮಕೂರು ತಾಲೂಕು ಭೀಮಸಂದ್ರದ 62 ವರ್ಷದ ವೃದ್ಧ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನ 55 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 23ಕ್ಕೇರಿದೆ.

ಭಾನುವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ 71 ಜನರು ಬಿಡುಗಡೆಯಾಗಿದ್ದು, ಒಟ್ಟು 358 ಜನರ ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. ಸಕ್ರಿಯ ಪ್ರಕರಣ 318 ಆಗಿದ್ದು ಇನ್ನೂ 11 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಆತಂಕ ವೈದ್ಯರಲ್ಲಿದೆ.

ಕರೊನಾ ಕಾಣಿಸಿದ್ದು ಎಲ್ಲೆಲ್ಲಿ?: ಮರಳೂರು ದಿಣ್ಣೆ 2, ನಾಗವಲ್ಲಿ ಕೆರೆ ರಸ್ತೆ, ವಿನಾಯಕ ನಗರ 2, ಗಾಂಧಿನಗರ, ಮಾನಂಗಿ ಮುಖ್ಯರಸ್ತೆ, ಉಪ್ಪಾರಹಳ್ಳಿ, ಹೆಗ್ಗೆರೆ 3, ಜಯನಗರ, ಹನುಮಂತಪುರ, ಟೌನ್ ಪೊಲೀಸ್ ಠಾಣೆ, ಜ್ಯೋತಿಪುರ, ಅಂತರಸನಹಳ್ಳಿ, ಶಾರದದೇವಿ ನಗರ, ಸಿದ್ಧರಾಮೇಶ್ವರ ಬಡಾವಣೆ, ದಿಬ್ಬೂರು, ಬಟವಾಡಿ, ಹಿರೇಹಳ್ಳಿ ನಂದಿಹಳ್ಳಿ 2, ಮೆಳೇಕೋಟೆ, ಎಸ್‌ಐಟಿ, ಶಾಂತಿನಗರ, ತುರುವೇಕೆರೆ ತಾಲೂಕು ದೊಡ್ಡಘಟ್ಟ, ಗುಬ್ಬಿ ತಾಲೂಕು ಅದಲಗೆರೆ, ಕುಣಿಗಲ್ ಮದ್ದೂರು ರಸ್ತೆ, ಕುವೆಂಪು ನಗರ, ಕುಂಬರಬೀದಿ, ಪಾವಗಡ ತಾಲೂಕು ಹೊಸಹಳ್ಳಿ ತಾಂಡ 4, ಕೊರಟಗೆರೆ ತಾಲೂಕು ಬಿಜಿ ನಗರ, ದೊಡಡ್ಪೇಟೆ, ಮಧುಗಿರಿ ನಗರ 2, ಚನ್ನಯ್ಯನಗಿರಿಪಾಳ್ಯ, ಶಿರಾ ತಾಲೂಕು ಬೀಡಿ ಕಾಲನಿ, ಗೋಮಾರದನಹಳ್ಳಿ, ಗುಳಿಗೇನಹಳ್ಳಿ, ಚಿಕ್ಕನಾಯಕನಹಳ್ಳಿ ಕಾಳಮ್ಮನಬೀದಿ, ಕಾಡೇನಹಳ್ಳಿ, ಪೊಲೀಸ್ ಕ್ವಾಟ್ರಸ್ 2 ಪ್ರಕರಣ ಪತ್ತೆಯಾಗಿವೆ.

ಗರ್ಭಿಣಿಯರಿಗೆ ಸೋಂಕು: ಶಿರಾ ತಾಲೂಕಿನ ಇಬ್ಬರು ಹಾಗೂ ಮಧುಗಿರಿ ತಾಲೂಕಿನ ಗರ್ಭಿಣಿಗೆ ಸೋಂಕು ತಗುಲಿದೆ. ಸೌದಿ ಪ್ರಯಾಣ ಹಿನ್ನೆಲೆಯುಳ್ಳ ಶಿರಾ ಬೀಡಿ ಕಾಲನಿಯ 36 ವರ್ಷದ ಗರ್ಭಿಣಿ ಹಾಗೂ ಬೆಂಗಳೂರು ಪ್ರಯಾಣ ಹಿನ್ನೆಲೆಯುಳ್ಳ ತಾಲೂಕಿನ ಗೋಮಾರದನಹಳ್ಳಿಯ 25 ವರ್ಷದ ಗರ್ಭಿಣಿಗೆ ಸೋಂಕು ದೃಢಪಟ್ಟಿದೆ. ಇಬ್ಬರ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆಹಚ್ಚಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಮಧುಗಿರಿ ತಾಲೂಕಿನ ಚನ್ನಯ್ಯಗಿರಿ ಪಾಳ್ಯದ 20 ವರ್ಷದ ಗರ್ಭಿಣಿಗೆ ಸೋಂಕು ದೃಢಪಟ್ಟಿದೆ. ಈಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರನ್ನು ಪತ್ತೆ ಹಚ್ಚಲಾಗಿದೆ. ಮೂವರು ಗರ್ಭಿಣಿಯರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತಿಬ್ಬರು ಪೊಲೀಸರಿಗೆ ಪಾಸಿಟಿವ್‌ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 4 ಪ್ರಕರಣ ವರದಿಯಾಗಿದೆ. ಚಿಕ್ಕನಾಯಕನಹಳ್ಳಿ ಠಾಣೆ ಎಎಸ್‌ಐ ಪ್ರಾಥಮಿಕ ಸಂಪರ್ಕ ಹೊಂದಿದ್ದ 30 ವರ್ಷದ ಪೇದೆ, 20 ವರ್ಷದ ಮಹಿಳಾ ಪೇದೆಗೂ ಸೋಂಕು ತಗಲಿದೆ. ಸೋಂಕಿತರ ಸಂಪರ್ಕ ಹೊಂದಿದ್ದ ಪಟ್ಟಣದ ಕಾಳಮ್ಮನಬೀದಿಯ 52 ವರ್ಷದ ಮಹಿಳೆ, ಕಾಡೇನಹಳ್ಳಿಯ 29 ವರ್ಷದ ವ್ಯಕ್ತಿಗೂ ಸೋಂಕು ದೃಢವಾಗಿದೆ.

ಹೊಸಹಳ್ಳಿ ತಾಂಡಾದಲ್ಲಿ ಕರೊನಾ ತಾಂಡವ: ಪಾವಗಡ ತಾಲೂಕಿನಲ್ಲಿ ಮತ್ತೆ ಕರೊನಾ ತಾಂಡವವಾಡಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು ತಗುಲಿದೆ. ತಾಂಡಾದ 60 ವರ್ಷದ ವೃದ್ಧನನ್ನು ಕರೊನಾ ಬಲಿಪಡೆದಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧನನ್ನು ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಶುಕ್ರವಾರ ಮರಣಹೊಂದಿದ್ದು ಭಾನುವಾರ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದೇ ಕುಟುಂಬದ ಹೊಸಹಳ್ಳಿ ತಾಂಡಾದ 50 ವರ್ಷದ ಮಹಿಳೆ, 21 ವರ್ಷದ ಮಹಿಳೆಗೆ ಹಾಗೂ 3 ವರ್ಷದ ಗಂಡು ಮಗವಿಗೂ ಸೋಂಕು ದೃಢಪಟ್ಟಿದೆ.

ರ‌್ಯಾಪಿಡ್ ಆಂಟಿಜೆನ್ ಟೆಸ್ಟ್ ಎಂಬ ಹೊಸ ಪರೀಕ್ಷೆ ವ್ಯವಸ್ಥೆಯಾಗಿದ್ದು, ಅತ್ಯಂತ ತುರ್ತು ಪ್ರಕರಣ, ರೋಗ ಲಕ್ಷಣ ಹೆಚ್ಚಾಗಿರುವಲ್ಲಿ ಈ ಟೆಸ್ಟ್ ಮಾಡಲಾಗುತ್ತಿದೆ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಈ ಟೆಸ್ಟ್ ವ್ಯವಸ್ಥೆಯಿದ್ದು ಸಾರ್ವಜನಿಕರು ಪ್ರಯೋಜನ ಪಡೆಯಬೇಕು. ಡಾ.ನಾಗೇಂದ್ರಪ್ಪ ಡಿಎಚ್‌ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net