ಗಾಯಾಳು ಛಾಯಾಗ್ರಾಹಕ ಸಾವು, ಪುತ್ರ ಗಂಭೀರ

Heroor accident
Published on

ಬೈಂದೂರು: ತುಮಕೂರು ತಾವರೆಕೆರೆ ಹೆದ್ದಾರಿಯಲ್ಲಿ ಸೋಮವಾರ ನಸುಕಿನ ಹೊತ್ತು ಕಂಟೈನರ್ ಹಿಂಬದಿಗೆ ಕಾರು ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಛಾಯಾಗ್ರಾಹಕ ಹೇರೂರು ಅಶೋಕ ಕುಮಾರ್ ಶೆಟ್ಟಿ (58) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳಿದಿದ್ದಾರೆ. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಅಪಘಾತದ ಬಳಿಕ ಅಶೋಕ ಕುಮಾರ್ ಅವರನ್ನು ತುಮಕೂರು ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ ಬಲವಾದ ಪೆಟ್ಟು ತಗಲಿರುವುದರಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸಿ ಕೊನೆಗೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕಾರು ಚಲಾಯಿಸುತ್ತಿದ್ದ ಅವರ ಪುತ್ರ ಪನ್ನಗ ಶೆಟ್ಟಿ ಬೆನ್ನುಹುರಿ ಘಾಸಿಗೊಂಡಿರುವ ಕಾರಣ ಸೋಮವಾರವೇ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೊಂದಿಗೆ ಪ್ರಯಾಣಿಸುತ್ತಿದ್ದ ಕುಮಾರ ಎಂಬುವವರಿಗೂ ಗಾಯಗಳಾಗಿದ್ದು, ಪ್ರಸ್ತುತ ಸ್ವಲ್ಪ ಮಟ್ಟಿನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ನಾವುಂದ ಮಾನಸ ಸ್ಟುಡಿಯೋ ಮಾಲೀಕ ಅಶೋಕ ಕುಮಾರ್ ವಿವಾಹವೊಂದರ ಛಾಯಾಗ್ರಹಣಕ್ಕೆ ಪುತ್ರ ಮತ್ತು ಕುಮಾರ್ ಎಂಬುವರ ಜತೆ ಹೋಗಿ ಊರಿಗೆ ವಾಪಸ್ ಬರುತ್ತಿದ್ದಾಗ ಸೋಮವಾರ ನಸುಕಿನ ವೇಳೆ ಘಟನೆ ಸಂಭವಿಸಿದೆ. ಅಶೋಕ ಕುಮಾರ್ ಶೆಟ್ಟಿ ಸೌತ್‌ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ಅಧ್ಯಕ್ಷರಾಗಿದ್ದರು. ಕುಂದಾಪುರ ತಾಲೂಕು ಛಾಯಾಗ್ರಾಹಕರ ಸಂಘ ಮತ್ತು ರಾಜ್ಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಹಿಂದಿನ ಅವಧಿಯಲ್ಲಿ ಹೇರೂರು ಗ್ರಾಪಂ ಸದಸ್ಯರಾಗಿದ್ದ ಅವರು ಒಂದು ಅವಧಿಗೆ ಅಧ್ಯಕ್ಷರಾಗಿ ಉತ್ತಮ ಸೇವಾಕಾರ್ಯಗಳನ್ನು ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net