

ತುಮಕೂರು: ರಾಜ್ಯದಲ್ಲಿ ನಾಯಕರ ಆಧಾರಿತ (ಲೀಡರ್ ಬೇಸ್ಡ್) ಜೆಡಿಎಸ್ ಅನ್ನು ಕಾರ್ಯಕರ್ತರ ಆಧಾರಿತ (ಕೇಡರ್ ಬೇಸ್ಡ್ )
ಪಕ್ಷವನ್ನಾಗಿ ಪರಿವರ್ತಿಸಲಾಗುವುದು ಎಂದು ರಾಜ್ಯ ಜೆಡಿಎಸ್ ಯುವ ಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಕೊಲ್ಹಾಪುರದಮ್ಮ ಸಮುದಾಯ ಭವನದಲ್ಲಿ ಶುಕ್ರವಾರ ಜೆಡಿಎಸ್ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಮತ್ತು ಬೂತ್ ಸಮಿತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪಕ್ಷವನ್ನು ಬೇರು ಮಟ್ಟದಿಂದ ಕಟ್ಟುವ ನಿಟ್ಟಿನಲ್ಲಿ ಇಂದೊಂದು ಮಹತ್ವದ ನಿರ್ಧಾರವಾಗಿದೆ. ಪಕ್ಷಕ್ಕೆ ಕಾರ್ಯಕರ್ತರೇ ಶ್ರೀರೆ ಎಂದರು.
1993ರಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಎಚ್.ಡಿ.ದೇವೇಗೌಡ ಅವರ ಕನಸನ್ನು ಈಗ ಕೇಂದ್ರ ಮಂತ್ರಿಯಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ನನಸು ಮಾಡಿದ್ದಾರೆ. ಲೀಡರ್ ಬೇಸ್ಡ್ ಪಾರ್ಟಿಯನ್ನು ಕೇಡರ್ ಬೇಸ್ಡ್ ಪಾರ್ಟಿಯನ್ನಾಗಿ ಮಾಡಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ವಿವಿಧ ಟಕಗಳಲ್ಲಿ ಸಕ್ರಿಯವಾಗಿ ದುಡಿಯುವ ಕಾರ್ಯಕರ್ತರನ್ನು ಗುರುತಿಸಿ, ಅವಕಾಶ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಶಕ್ತಿ ಮೀರಿ ಸದಸ್ಯತ್ವ ನೋಂದಣಿ ಮತ್ತು ಬೂತ್ ಕಮಿಟಿ ನೇಮಕದಲ್ಲಿ ತೊಡಗಿ, ಪಕ್ಷವನ್ನು ಬಲಪಡಿಸುವಂತೆ ಮನವಿ ಮಾಡಿದರು.
ಎಚ್.ಡಿ.ಕುಮಾರಸ್ವಾಮಿ ಕೇಂದ್ರದ ಮಂತ್ರಿಯಾದ ನಂತರ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಕಾಣುತ್ತಿದೆ. ಇದೇ ಹುಮ್ಮಸ್ಸು ಮುಂಬರುವ ಜಿಪಂ, ತಾಪಂ, ನಗರ ಸ್ಥಳಿಯ ಸಂಸ್ಥೆ ಚುನಾವಣೆಗಳಲ್ಲಿ ತೋರಿಸಿದರೆ ಅತಿ ಹೆಚ್ಚು ಸ್ಥಾನ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಬಿಜೆಪಿ-&ಜೆಡಿಎಸ್ ಚುನಾವಣಾ ಹೊಂದಾಣಿಕೆ ಉಭಯ ಪಕ್ಷಗಳ ಮುಖಂಡರ ನಿರ್ಧಾರವಾಗಿರಲಿದೆ. ಪಕ್ಷ ಸಂಘಟನೆ ನಮ್ಮ ಪಕ್ಷದ ಅಂತರಿಕ ವಿಚಾರವಾಗಿದೆ. ಈಗಾಗಲೇ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಹ ಸಂಘಟನೆಯಲ್ಲಿ ತೊಡಗಿಕೊಂಡಿದೆ. ಹಾಗೆಯೇ
ಜೆಡಿಎಸ್ ಕೂಡ ಸಂಘಟನೆಗೆ ಮುನ್ನುಡಿ ಬರೆದಿದ್ದು, ಇಂದಿನಿಂದಲೇ ಪಕ್ಷದ ಕಾರ್ಯಕರ್ತರು ಕೆಲಸ ಆರಂಭಿಸುವಂತೆ ನಿಖಿಲ್ ಕರೆಯಿತ್ತರು.
ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಿರ್ದೇಶನದಂತೆ ಜೆಡಿಎಸ್ ಸದಸ್ಯತ್ವ ನೋಂದಣಿ ಮತ್ತು ಬೂತ್ ಸಮಿತಿಗಳ ಸದಸ್ಯರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಹಿರಿಯರ ಜತೆಗೆ ಸೇರಿ ಯುವ ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಿದೆ. ಎಲ್ಲ ಜಾತಿ, ಜನಾಂಗಗಳನ್ನು ಒಳಗೊಂಡಂತೆ ಒಂದು ಬೂತ್ಗೆ 25 ಜನ ಸದಸ್ಯರನ್ನು ನೇಮಿಸಿ, ಅವರ ಪಟ್ಟಿಯನ್ನು ಮುಂದಿನ ಎಂಟು ವಾರಗಳಲ್ಲಿ ಪಕ್ಷದ ಕಚೇರಿಗೆ ತಲುಪಿಸುವ ಜವಾಬ್ದಾರಿ ಆಯಾ ಜಿಲ್ಲಾಧ್ಯಕ್ಷರು, ಹಾಲಿ ಮತ್ತು ಮಾಜಿ ಶಾಸಕರದ್ದಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶಬಾಬು ಹೇಳಿದರು.
ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಶಾಸಕರಾದ ಎಂ.ವಿ.ವೀರಭದ್ರಯ್ಯ, ಪಿ.ಆರ್.ಸುಧಾಕರಲಾಲ್, ಕೆ.ಎಂ.ತಿಮ್ಮರಾಯಪ್ಪ, ಎಚ್.ನಿಂಗಪ್ಪ, ಮಂಜಣ್ಣ, ಮುಖಂಡರಾದ ಕೆ.ಟಿ.ಶಾಂತಕುಮಾರ್, ನಾಗರಾಜು, ಉಗ್ರೇಶ್, ಎಸ್.ಆರ್.ಗೌಡ, ಜಿಲ್ಲಾಧ್ಯಕ್ಷ ಆರ್.ಸಿ. ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಕುಂಭಯ್ಯ, ವಿಜಯಗೌಡ, ವಿವಿಧ ಘಟಕಗಳ ಅಧ್ಯಕ್ಷರು,
ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚನ್ನಪಟ್ಟಣ ಬೈಎಲೆಕ್ಷನ್ಎನ್ಡಿಎ ಅಭ್ಯರ್ಥಿ ಕಣಕ್ಕೆ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಚರ್ಚೆ ನಡೆಸಿ ತೀಮಾರ್ನ ಕೈಗೊಂಡು ಒಮ್ಮತದ ಎನ್ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಚನ್ನಪಟ್ಟಣ ಒಂದೇ ಕ್ಷೇತ್ರದ ಉಪಚುನಾವಣೆ ನಡೆಯುತ್ತಿಲ್ಲ. ಸಂಡೂರು, ಶಿಗ್ಗಾವಿ ಕ್ಷೇತ್ರಗಳಲ್ಲೂ ಉಪಚುನಾವಣೆ ನಡೆಯಲಿದ್ದು, ಉಭಯ ಪಕ್ಷದ ನಾಯಕರುಗಳು ಕುಳಿತು ಚರ್ಚೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಚನ್ನಪಟ್ಟಣದಲ್ಲಿ ಅಭ್ಯರ್ಥಿ ಯಾರಾಗಬೇಕೆಂಬ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ಕೇಳಿ ಬರುತ್ತಿವೆ. ಈ ಕುರಿತು ಬಿಜೆಪಿ ಕೇಂದ್ರ, ರಾಜ್ಯ ನಾಯಕರು, ಜೆಡಿಎಸ್ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ರಾಜ್ಯದ ಜನತೆ ಜೆಡಿಎಸ್&ಬಿಜೆಪಿಯ ಸಮ್ಮಿಲನವನ್ನು ಒಪ್ಪಿದ್ದಾರೆ. 28 ಲೋಕಸಭಾ ಕ್ಷೇತ್ರಗಳಿಂದ ಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಜನತೆ ಕೊಡುಗೆ ನೀಡಿದ್ದಾರೆ. ಹಾಗೆಯೇ ತುಮಕೂರು ಲೋಕಸಭಾ ಕ್ಷೇತ್ರದಿಂದ ವಿ.ಸೋಮಣ್ಣ ಗೆದ್ದು ಮಂತ್ರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಮೈತ್ರಿಯನ್ನು ಜನತೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಮುಂಬರುವ ಸ್ಥಳಿಯ ಸಂಸ್ಥೆ ಚುನಾವಣೆ, ವಿಧಾನಸಭಾ ಚುನಾವಣೆಗಳನ್ನು ಒಟ್ಟಾಗಿ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಚಿತ್ರನಟ ದರ್ಶನ್ ವಿಚಾರದಲ್ಲಿ ಕಾನೂನಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಲ್ಲರೂ ಕಾನೂನಿಗೆ ತಲೆಬಾಗಬೇಕು. ನಾನು ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ.| ನಿಖಿಲ್ ಕುಮಾರಸ್ವಾಮಿ, ಅಧ್ಯಕ್ಷ, ರಾಜ್ಯ ಜೆಡಿಎಸ್ ಯುವ ಘಟಕ ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಅದ್ವಾನಗಳನ್ನು ಸೃಷ್ಟಿ ಮಾಡಿದೆ. ಹಣಕಾಸ ಸ್ಥಿತಿಯನ್ನು ಸರಿದೂಗಿಸಲಾಗದೆ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ನಿಯಮ ಮೀರಿ ಬಳಕೆ ಮಾಡಿಕೊಂಡಿದೆ. ಇಂತಹ ಸರ್ಕಾರ ತೊಲಗಿ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರ ಬರಬೇಕೆಂದರೆ ನೀವುಗಳ ಇಂದಿನಿಂದಲೇ ತಯಾರಿ ನಡೆಸಬೇಕು. ಸ್ಥಳಿಯವಾಗಿ ಬಲಾಢ್ಯರಾದರೆ ಹೆಚ್ಚು ಶಾಸಕ ಸ್ಥಾನಗಳನ್ನು ಗೆಲ್ಲಲು ಸಾಧ್ಯ.| ಸಿ.ಬಿ.ಸುರೇಶ್ಬಾಬು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ