

ತುಮಕೂರು : ಗೂಳೂರು ಗ್ರಾಮಪಂಚಾಯಿತಿಯು ಅಮೃತ್ ವಸತಿ ಯೋಜನೆಗೆ ಒಳಪಟ್ಟಿದ್ದು, ಪಂಚಾಯಿತಿ ವ್ಯಾಪ್ತಿಯ 600ಕ್ಕೂ ಹೆಚ್ಚು ವಸತಿ ರಹಿತರಿಗೆ ಶೀಘ್ರದಲ್ಲಿಯೇ ಸೂರು ಮಂಜೂರಾಗಲಿವೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.
ಗೂಳೂರು ಗ್ರಾಪಂ ಆವರಣದಲ್ಲಿ ಗುರುವಾರ ಸಂಧ್ಯಾಸುರಕ್ಷ, ಅಂಗವಿಕಲ, ಕರೊನಾ ಪರಿಹಾರ ಸೇರಿ ಸರ್ಕಾರದ ವಿವಿಧ ಮಾಸಾಶನಗಳ ಮಂಜೂರಾತಿ ಪತ್ರವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಇಡೀ ಕ್ಷೇತ್ರದಲ್ಲಿಯೇ ವಸತಿ ಹಂಚಿಕೆಯಲ್ಲಿ ಯಾವುದೇ ತಾರತಮ್ಯಕ್ಕೆ ಆಸ್ಪದ ಕೊಡದೆ ಎಲ್ಲ ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ನಿವೇಶನ ಹಂಚುವ ಕೆಲಸ ಮಾಡಲಾಗುವುದು ಎಂದರು.
11 ಎಕರೆ ಸರ್ಕಾರಿ ಜಾಗ: ಗೂಳೂರಿಗೆ ಸಮೀಪದ ಶೂಲದ ಹನುಮಂತರಾಯ ದೇವಾಲಯದ ಹಿಂಭಾಗದಲ್ಲಿ 11 ಎಕರೆ ಸರ್ಕಾರಿ ಭೂಮಿ ಇದ್ದು, ಕಂದಾಯ ಅಧಿಕಾರಿಗಳು ಹದ್ದಬಸ್ತು ಮಾಡಿಸಿ ನೀಡಿದರೆ ಗ್ರಾಪಂ ವತಿಯಿಂದ ಕಾಂಪೌಂಡ್ ನಿರ್ಮಿಸಿ, ವಸತಿ ರಹಿತರ ಪಟ್ಟಿಯಲ್ಲಿರುವ ಸುಮಾರು 400 ಜನರಿಗೆ ನಿವೇಶನ ನೀಡುವ ಗುರಿ ಇದೆ. ಈ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳು ಚುರುಕಿನಿಂದ ಕಾರ್ಯನಿರ್ವಹಿಸುವಂತೆ ಗೌರಿಶಂಕರ್ ಸೂಚಿಸಿದರು.
ಗ್ರಾಮಾಂತರ ಭಾಗದಲ್ಲಿ ಅತಿ ಹೆಚ್ಚು ರೈತರು ವಾಸವಾಗಿದ್ದು, ತರಕಾರಿ, ಹೂವು, ಹಣ್ಣು ಬೆಳೆದು ಜೀವನ ನಡೆಸುವವರ ಅನುಕೂಲಕ್ಕಾಗಿ ಕ್ಷೇತ್ರದ 27 ಕೆರೆಗಳು ಸೇರಿ ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 87 ಕೆರೆಗಳಿಗೆ 865 ಕೋಟಿ ರೂಪಾಯಿ ವೆಚ್ಚದಲ್ಲಿ ವೃಷಭಾವತಿ ನದಿ ನೀರನ್ನು ಹರಿಸಲು ಸಣ್ಣ ನೀರಾವರಿ ಇಲಾಖೆಯಿಂದ ಡಿಪಿಆರ್ ಸಿದ್ಧಗೊಂಡಿದೆ. ಮುಂದಿನ ಜೂನ್ ವೇಳೆ ಟೆಂಡರ್‌ಮುಗಿದು, ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದರು. ಗೂಳೂರು ಗ್ರಾಪಂ ಅಧ್ಯಕ್ಷ ಕೃಷ್ಣೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ, ಗೂಳೂರು ಭಾಗದ ಅಧ್ಯಕ್ಷ ಪಾಲನೇತ್ರಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ವಿಜಯ ಕುಮಾರ್, ಹಾಲನೂರು ಅನಂತಕುಮಾರ್ ಇದ್ದರು.
ಬಿಜೆಪಿಗೆ ನಷ್ಟ : ಜಿಲ್ಲಾ ಉಸ್ತುವಾರಿಯಿಂದ ಜೆ.ಸಿ.ಮಾಧುಸ್ವಾಮಿ ಅವರನ್ನು ಕೈಬಿಟ್ಟಿರುವುದರಿಂದ ಜಿಲ್ಲೆಯ ಬಿಜೆಪಿಗೆ ಹೆಚ್ಚು ನಷ್ಟ. ಅವರು ಜಿಲ್ಲೆಯ ಅಭಿವೃದ್ಧಿ ವಿಚಾರ, ಅದರಲ್ಲಿಯೂ ನೀರಾವರಿ ಯೋಜನೆಗಳಲ್ಲಿ ಎಂದಿಗೂ ತಾರತಮ್ಯ ಮಾಡಿದವರಲ್ಲ. ಜಿಲ್ಲೆಯ ಪ್ರತಿ ಕೆರೆಗಳ ಹೆಸರು ಹಾಗೂ ಅದರ ವಿಸ್ತೀರ್ಣದ ಬಗ್ಗೆ ಮಾಹಿತಿ ಜೆಸಿಎಂ ಬಳಿಯಿತ್ತು. ಕರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಹಗಲು, ರಾತ್ರಿ ಸರಣಿ ಸಭೆಗಳನ್ನು ನಡೆಸಿ, ದಾನಿಗಳಿಂದ ಆಕ್ಸಿಜನ್ ಸಾಂದ್ರಕಗಳನ್ನು ಪಡೆದು ರೋಗಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಅವರನ್ನು ಕೈಬಿಟ್ಟಿದ್ದು, ಬಿಜೆಪಿಗೆ ನಷ್ಟ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.
ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದರೂ ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್ ಹಂತದ ಅಧಿಕಾರಿಗಳು ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಹೆಬ್ಬೂರು ಠಾಣೆಯ ಒಂದು ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈಗಲಾದರೂ ಭ್ರಷ್ಟರಿಗೆ ಗೃಹ ಸಚಿವರು ಬಿಸಿಮುಟ್ಟಿಸಬೇಕಿದೆ. ಡಿ.ಸಿ.ಗೌರಿಶಂಕರ್ ಗ್ರಾಮಾಂತರ ಶಾಸಕ