ಕಷ್ಟಗಳಿಗೆ ಸ್ಪಂದಿಸಿ ಜನರಿಗೆ ಹತ್ತಿರವಾಗಿ ; ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆ

DSC_3462
Published on

ತುಮಕೂರು : ಜನಪ್ರತಿನಿಧಿಗಳಾಗುವ ಆಸೆ ಇರುವವರು ಮೊದಲಿಗೆ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿ, ಆ ಮೂಲಕ ಅವರ ಹೃದಯ ಗೆಲ್ಲಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಾಡಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ದೇಶದಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿದೆ. ವಿಧಾನಪರಿಷತ್ ಚುನಾವಣೆಯಲ್ಲೂ ಉತ್ತಮ ಫಲಿತಾಂಶ ಲಭಿಸಿದೆ. ಮುಂದಿನ ವಿಧಾನಸಭೆ ಚುನಾವಣೆ ಗೆಲ್ಲಲು ಎಲ್ಲರೂ ಶ್ರಮಿಸಬೇಕು ಎಂದರು.

ಈ ದೇಶದ ಇತಿಹಾಸವೇ ಕಾಂಗ್ರೆಸ್‌ನ ಇತಿಹಾಸ. ಹೋರಾಟಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಮೇಕೆದಾಟು ಯೋಜನೆಗೆ ಆಗ್ರಹಿಸಿ ಹಮ್ಮಿಕೊಂಡಿರುವ ‘ಮೇಕೆದಾಟು ನಮ್ಮ ನೀರು, ನಮ್ಮ ಹಕ್ಕು’ ಹೋರಾಟದಲ್ಲಿ ಎಲ್ಲರೂ ಭಾಗವಹಿಸಬೇಕು. ರಾಜ್ಯದ ಜನರ ಹೋರಾಟದ ಶಕ್ತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಕಾವೇರಿ ನೀರಾವರಿ ವಲಯದ ತುಮಕೂರು ಜಿಲ್ಲೆಯ ಜನರೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಶಾಸಕರು, ಮಾಜಿ ಶಾಸಕರು, ವಿಧಾನಸಭಾ ಚುನಾವಣೆ ಸ್ಫರ್ಧಿಸುವ ಆಕಾಂಕ್ಷಿಗಳು, ಮುಖಂಡರು ಹೋರಾಟದಲ್ಲಿ ಭಾಗವಹಿಸಿ, ತಮ್ಮ ಹೆಸರನ್ನು ಇತಿಹಾಸದ ಪುಟಕ್ಕೆ ದಾಖಲಿಸಿಕೊಳ್ಳಬೇಕು. ಮೇಕೆದಾಟು ಯೋಜನೆ ಕನ್ನಡಿಗರಾದ ನಮ್ಮೆಲ್ಲರ ಕನಸು ಎಂದರು.

ಪಕ್ಷದ ಸದಸ್ಯತ್ವ ಪಡೆಯುವ ಪ್ರತಿಯೊಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ಕಾಂಗ್ರೆಸ್ ಸದಸ್ಯತ್ವ ಪಡೆಯುವುದು ಭಾರತೀಯರಿಗೆ ಗೌರವದ ಸಂಕೇತ. ಎಲ್ಲರ ಮನವೊಲಿಸಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕು. ಆನ್‌ಲೈನ್ ಮೂಲಕವೂ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿ ನಿರ್ಮಿಸಿ : ರಾಜ್ಯದಲ್ಲಿ ಕಾಂಗ್ರೆಸ್ ಸಾಕಷ್ಟು ವರ್ಷ ಅಧಿಕಾರ ಮಾಡಿದೆ. ಆದರೂ ತುಮಕೂರು ನಗರದಲ್ಲಿ ಕಚೇರಿ ಇಲ್ಲ ಎಂಬುದು ಬೇಸರದ ಸಂಗತಿ. ಎಲ್ಲ ಮುಖಂಡರೂ ಒಟ್ಟಾಗಿ ಜಿಲ್ಲಾ ಕೇಂದ್ರದಲ್ಲಿ ಒಂದು ಕಚೇರಿ ನಿರ್ಮಿಸಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ಪ್ರಸ್ತುತ ಬಿ.ಎಚ್.ರಸ್ತೆಯಲ್ಲಿದ್ದ ಕಾಂಗ್ರೆಸ್ ಕಚೇರಿ ಕಟ್ಟಡವನ್ನು ಮಾಲೀಕರು ಹಿಂಪಡೆದಿದ್ದಾರೆ. ಘಟಾನುಘಟಿ ನಾಯಕರ ದೊಡ್ಡ ಪಟ್ಟಿಯೇ ಇದ್ದರೂ ಕಾಂಗ್ರೆಸ್‌ಗೆ ಸದ್ಯ ಕಚೇರಿಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಕಚೇರಿ ತೆರೆಯಲು ಕೆಪಿಸಿಸಿ ಅಧ್ಯಕ್ಷರೇ ಜಿಲ್ಲಾ ಮುಖಂಡರಿಗೆ ಮನವಿ ಮಾಡಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್ ಯಶಸ್ಸಿನಲ್ಲಿ ಮಹಿಳಾ ಕಾರ್ಯಕರ್ತರ ಪಾಲು ದೊಡ್ಡದಿದೆ. ದೇಶದಲ್ಲಿ ಶೇ.50ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳೆಯರು ಪಕ್ಷದ ಚಟುವಟಿಕೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬೇಕು. ಪಕ್ಷದ ಮುಂದಿನ ಸಭೆಗಳಲ್ಲಿ ಶೇ.50 ಮಹಿಳೆಯರು ಇದ್ದರಷ್ಟೇ ಮಾತನಾಡುತ್ತೇನೆ. ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ, ಶಾಸಕ ತುಮಕೂರು, ಮಂಡ್ಯ, ಕೋಲಾರ, ಬೆಂ.ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ತುಮಕೂರಿನಲ್ಲಿ ಕಾಂಗ್ರೆಸ್ ಸೋಲಿಸುವಂತೆ ದೇವೇಗೌಡರು ಕಣ್ಣೀರು ಸುರಿಸಿದರು. ಆದರೂ ಜಿಲ್ಲೆಯ ಮತದಾರ ಅದಕ್ಕೆ ಕರಗಲಿಲ್ಲ, ಮುಂಬರುವ ಚುನಾವಣೆಯಲ್ಲೂ ಇದೇ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net