

ತುಮಕೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾವಗಡ ತಾಲೂಕು ಅರಸೀಕೆರೆ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಜಿ.ಎಚ್.ರೇಣುಕರಾಜು ಆಯ್ಕೆಯಾಗಿದ್ದಾರೆ.
ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಶಾಲೆಯಲ್ಲಿ ವಿಜ್ಞಾನದ ವಾತಾವರಣ ನಿರ್ಮಿಸಿರುವ ಹೆಗ್ಗಳಿಕೆ ರೇಣುಕರಾಜ್ ಅವರಿಗಿದೆ. ಆನ್‌ಲೈನ್ ಮೂಲಕವೂ ಬೇರೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪಾಠ ಮಾಡುವ ಮೂಲಕ ಗ್ರಾಮೀಣ ಭಾಗದ ನೆಚ್ಚಿನ ಶಿಕ್ಷಕ ಎನ್ನಿಸಿದ್ದಾರೆ.
ಹಿರಿಯ ವಿದ್ಯಾರ್ಥಿಗಳು, ದಾನಿಗಳನ್ನು ಬಳಸಿಕೊಂಡು ಶಾಲೆಯಲ್ಲಿ ಮೂಲ ಸೌಕರ್ಯ ಒದಗಿಸಿ ಸಮಾಜಮುಖಿ ಶಿಕ್ಷಕರೆಂದೇ ಜನಪ್ರಿಯರಾಗಿದ್ದಾರೆ.
ಶಾಲಾ ಪ್ರಯೋಗಗಳ ಕಿಟ್ ಮೂಲಕ ವಿಜ್ಞಾನ ಪಠ್ಯಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆ ಪ್ರದರ್ಶಿಸಿ ತರಗತಿಯ ಹೊರಗಡೆಯೂ ಮಕ್ಕಳಿಗೆ ಸುಲಭವಾಗಿ ಕ್ಲಿಷ್ಟ ವಿಷಯಗಳನ್ನು ಮನನ ಮಾಡಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಸ್ಥಾಪಿಸಿ ಅದರಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ 290 ವೀಡಿಯೋ ಹಾಕಿದ್ದಾರೆ.
ಕಳೆದ 18 ವರ್ಷಗಳಿಂದ ಒಂದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿ.ಎಚ್.ರೇಣುಕರಾಜ್, ವಿವಿಧ ತರಬೇತಿ ಮಾದರಿಗಳಲ್ಲಿ ವಿಜ್ಞಾನ ವಿಷಯದ ಕುರಿತು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ್ದಾರೆ.