

ತುಮಕೂರು: ಭಾರತ್ ಮಾಲಾ ಪರಿಯೋಜನಾ ಅಡಿಯಲ್ಲಿ ಅರಸೀಕೆರೆ-ಹುಳಿಯಾರು-ಹಿರಿಯೂರು ಮಾರ್ಗದ ನೂತನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡಿರುವ ರೈತರೊಂದಿಗೆ ಅಧಿಕಾರಿಗಳ ಸಭೆ ನಾಮ್‌ಕೆವಾಸ್ತೆಗೆ ನಡೆಯಿತು.
ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಭೂಮಿ ಕಳೆದುಕೊಂಡಿರುವ ಕಾಮಲಾಪುರ, ದವಣದಹೊಸಹಳ್ಳಿ, ಭೀಮಸಂದ್ರ, ಕಾನ್ಕೆರೆ, ಹುಚ್ಚನಹಳ್ಳಿ, ಸೋರಲಮಾವು, ಲಿಂಗದಹಳ್ಳಿ, ಚೌಳಕಟ್ಟೆ, ಹೊನ್ನಶೆಟ್ಟಿಹಳ್ಳಿ, ಗೋಪಾಲಪುರ, ಲಕ್ಷ್ಮೀಪುರ ಹಾಗೂ ಹುಳಿಯಾರು ಹೋಬಳಿಯ ಸೀಗೆಭಾಗಿ, ಹೊಸಳ್ಳಿ, ತಿಮ್ಮಲಾಪುರ, ಕೆರೆಸೂರಗನಹಳ್ಳಿ, ತಮ್ಮಡಿಹಳ್ಳಿ ಹಾಗೂ ಕೆಂಕೆರೆ ಗ್ರಾಮಗಳ ರೈತರು ಭಾಗವಹಿಸಿದ್ದರು.
ಭೂ ಪರಿಹಾರ ನಿರ್ಧರಿಸುವ ಅಧಿಕಾರವಿರುವ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಗೈರು ಹಾಜರಿಯಲ್ಲಿ ನಡೆದ ಸಭೆಯಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ನಾಗವೇಣಿ, ಭೂಸ್ವಾಧೀನಾಧಿಕಾರಿ ನಟೇಶ್, ಪರಿಸರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.