

ತುಮಕೂರು: ಕಲುಶಿತ ಕುಡಿಯುವ ನೀರು ಸೇವಿಸಿದ ತುಮಕೂರು ತಾಲೂಕಿನ ಶೆಟ್ಟಪ್ಪನಹಳ್ಳಿಯ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಗ್ರಾಮದ ಬೋರಮ್ಮ(68), ಬೈರಪ್ಪ(80), ಗಂಗಮ್ಮ (70), ನಂಜಮ್ಮ(85) ಸೇರಿದಂತೆ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು ಆರು ಜನರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇನ್ನುಳಿದ 22 ಜನರಿಗೆ ಗ್ರಾಮದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
54 ಮನೆಗಳಿರುವ ಶೆಟ್ಟಪ್ಪನಹಳ್ಳಿಯಲ್ಲಿ ಭಾನುವಾರದಿಂದಲೇ ಜನರಲ್ಲಿ ಅನಾರೋಗ್ಯ ಕಾಣಿಸಿಕೊಳ್ಳಲಾರಂಭಿಸಿದ್ದು ಮಂಗಳವಾರದೊಳಗೆ ಊರಿನಲ್ಲಿರುವ ಬಹುತೇಕರಿಗೆ ಅನಾರೋಗ್ಯ ಲಕ್ಷಣ ಕಾಣಿಸಿದ್ದರಿಂದ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಗೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ತಂಡ ಕುಡಿಯುವ ನೀರಿನ ಮಾದರಿ ಸಂಗ್ರಹಿಸಿದ್ದು ಪರೀಕ್ಷೆಗೆ ಕಳುಹಿಸಲಾಗಿದೆ.
ಅಸ್ವಸ್ಥಗೊಂಡವರ ಪೈಕಿ ಬಹುತೇಕರು ಮಳೆಗಾಲದಲ್ಲಿ ಸಿಗುವ ಅಣಬೆ ಸೇವಿಸಿದ್ದರು ಎನ್ನಲಾಗಿದೆ, ಅಣಬೆ ಸೇವಿಸದವರೂ ಅನಾರೋಗ್ಯಕ್ಕೆ ತುತ್ತಾಗಿರುವುದು ಸ್ಥಳೀಯರಲ್ಲಿ ಭಯಕ್ಕೆ ಕಾರಣವಾಗಿದೆ.