

ತುಮಕೂರು: ಭಾರತೀಯ ಚುನಾವಣಾ ಆಯೋಗ ಲೋಕಸಭಾ ಚುನಾವಣೆ ತಯಾರಿ ನಡೆಸುತ್ತಿರುವುದರಿಂದ ಸಧ್ಯಕ್ಕೆ ಜಿಪಂ ಹಾಗೂ ತಾಪಂ ಚುನಾವಣೆ ನಡೆಸುವ ಸಾಧ್ಯತೆಯಿಲ್ಲ ಎಂದು ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಕೆಡಿಪಿ ಸಭೆಯ ನಂತರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಪಂ, ತಾಪಂನಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದಿದ್ದರೂ ಅಧಿಕಾರಿಗಳ ಮೂಲಕ ಕೆಲಸಗಳನ್ನು ಮಾಡಿಸಲಾಗುತ್ತಿದೆ ಎಂದರು.
ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ನಾನೇ ಭೇಟಿ ನೀಡಿ ಬರದ ಸ್ಥಿತಿ-ಗತಿಯನ್ನು ಅರಿತು ಬರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ, ಈಗಾಗಲೇ ಐದು ತಾಲೂಕಿನಲ್ಲಿ ಸಭೆ ನಡೆಸಿದ್ದೇನೆ ಎಂದರು.
ಜಿಲ್ಲೆಯಲ್ಲಿ ತಲೆದೋರಿರುವ ಬರಗಾಲ ನಿರ್ವಹಣೆ ಮಾಡುವ ಸಂದರ್ಭದಲ್ಲಿ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಈಗಾಗಲೇ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದರು.
ಕುಡಿಯುವ ನೀರು, ಜಾನುವಾರುಗಳ ಮೇವು, ಜನ ಗುಳೆ ಹೋಗದ ಹಾಗೆ ಅವರಿಗೆ ಕಾಮಗಾರಿಯನ್ನು ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸಲು ಜಿಲ್ಲಾಡಳಿತದ ಪಿಡಿ ಖಾತೆಯಲ್ಲಿರುವ 33ಕೋಟಿ ರೂ. ಉಪಯೋಗಿಸಿಕೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯ ಶಾಸಕರು ತಮ್ಮ ತಾಲೂಕಿನ ಜನಸಮುದಾಯಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಬರ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆಂದಭಾವಿಸಿದ್ದೇನೆ, ರಾಜ್ಯದ ಬರನಿರ್ವಹಣೆಗೆ ನಿಗಧಿಯಾದ ಕೇಂದ್ರದ ಎನ್‌ಡಿಆರ್‌ಎಫ್ ಹಣ ಇದುವರೆಗೂ ವಿನಿಯೋಗವಾಗಿಲ್ಲ ಹಾಗೂ ಬೆಳೆ ನಷ್ಟದ ಪರಿಹಾರ ನೀಡಲು ರಾಜ್ಯದಿಂದ ಪ್ರಸ್ತಾವನೆ ಸಲ್ಲಿಸಿದ್ದರೂ ಈವರೆಗೂ ಪರಿಹಾರ ನೀಡಲು ಕೇಂದ್ರ ಮುಂದಾಗಿಲ್ಲ ಎಂದರು.