

ತುಮಕೂರು: ಜಿಲ್ಲೆಯ ಕೊರಟಗೆರೆ, ಮಧುಗಿರಿ ಹಾಗೂ ಶಿರಾ ತಾಲೂಕುಗಳ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡದೆದುರು ರೈತರು ತಮ್ಮ ಗೋಳು ತೋಡಿಕೊಂಡರು.
ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಅಶೋಕ್‌ಕುಮಾರ್ ನೇತೃತ್ವದ ಕೇಂದ್ರ ತಂಡ ಎಲ್ಲೆಡೆಯೂ ರೈತರ ಅಳಲನ್ನು ಸಮಾದಾನವಾಗಿ ಆಲಿಸಿದರು.
ಕೇಂದ್ರ ತಂಡ ಕೊರಟಗೆರೆ ತಾಲೂಕು ಬೈರನಹಳ್ಳಿಯ ನಾಗೇಂದ್ರಕುಮಾರ್, ಭಾಗ್ಯಮ್ಮ, ಮಧುಗಿರಿ ತಾಲೂಕು ಪೂಜಾರಹಳ್ಳಿಯ ರೈತ ತಿಪ್ಪೇನರಸಯ್ಯನ ಜಮೀನುಗಳಿಗೆ ಭೇಟಿ ನೀಡಿದಾಗ, ಸುತ್ತಮುತ್ತಲ ಹೊಲಗಳಲ್ಲಿ ಬೆಳೆದು ಹಾಳಾಗಿದ್ದ ರಾಗಿ, ತೆಂಗು, ಅಡಕೆ, ಶೇಂಗಾ ನೋಡಿ ಮುಮ್ಮಲ ಮರುಗಿದರು.
ಕೇಂದ್ರ ತಂಡ ಬರುವ ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ನೈಜ ರೈತರು ಪರಿಹಾರ ಸಿಗಬಹುದೆಂಬ ಆಶಾಭಾವನೆ ಇಟ್ಟುಕೊಂಡು ತಮ್ಮ ಕಷ್ಟವನ್ನೆಲ್ಲಾ ಬಿಚ್ಚಟ್ಟರು. ಈ ಸಂದರ್ಭದಲ್ಲಿ ಅವರಿಗೆ ತಿಳಿಯದಂತೆ ಅವರ ಕಣ್ಣಂಚಿನಲ್ಲಿ ನೀರು ಜಿನುಗುತಿತ್ತು.
ಕೃಷಿ, ತೋಟಗಾರಿಕೆ ಬೆಳೆ ನಷ್ಟ ಹಾಗೂ ಕುಡಿಯುವ ಪೂರೈಕೆಗೆ ಅಗತ್ಯವಿರುವ ಅಂಕಿ-ಅAಶವನ್ನು ಬರ ಅಧ್ಯಯನ ತಂಡಕ್ಕೆ ನೀಡಲಾಯಿತು. ಕುಡಿಯುವ ನೀರಿನ ಕೊರತೆ, ನೆಲಕಚ್ಚಿರುವ ಅಂತರ್ಜಲ, ಮೇವಿನ ಕೊರತೆ, ಮಳೆ ಅಭಾವದಿಂದ ತೆಂಗು, ಅಡಕೆ ನೆಲಕಚ್ಚಿರುವುದು, ಕಡಿಮೆ ಇಳುವರಿ ಬಗ್ಗೆ ಮಾಹಿತಿ ಒದಗಿಸಲಾಯಿತು.