

ತುಮಕೂರು: ಈಗಾಗಲೇ ಚಲಾವಣೆಯಲ್ಲಿರುವ 10ರೂ. ನಾಣ್ಯವನ್ನು ಸ್ವೀಕರಿಸಲು ಕೆಲವು ವ್ಯಾಪಾರಿಗಳು, ಬಸ್ ಕಂಡಕ್ಟರ್‌ಗಳು ನಿರಾಕರಿಸುತ್ತಿರುವ ದೂರುಗಳು ಬಂದಿದ್ದು, ಯಾವುದೇ ಅನುಮಾನವಿಲ್ಲದೇ ದಿನನಿತ್ಯದ ವಹಿವಾಟಿನಲ್ಲಿ ಸ್ವೀಕರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಾಣ್ಯಗಳ ಬಳಕೆ ಕಡಿಮೆಯಾಗಿದ್ದು ವ್ಯವಹಾರಗಳಲ್ಲಿ ಚಿಲ್ಲರೆ ಸಮಸ್ಯೆ ಎದುರಾಗಿದೆ ಎಂದರು.
10ರೂ. ನಾಣ್ಯವನ್ನು ಆರ್‌ಬಿಐ ಹಿಂಪಡೆದಿಲ್ಲ ಎಂದು ಮನವರಿಕೆ ಮಾಡಬೇಕು, ಸುಳ್ಳು ಸುದ್ದಿ, ವದಂತಿಗಳನ್ನು ಸಾರ್ವಜನಿಕರು ನಂಬಬಾರದು ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ಆರ್‌ಬಿಐ 10ರೂ. ನಾಣ್ಯಗಳನ್ನು ಹಿಂಪಡೆದಿಲ್ಲ. ನಾಣ್ಯಗಳು ಶಾಸನಬದ್ದವಾಗಿರುವುದರಿಂದ ಎಲ್ಲರೂ ಅದನ್ನು ಬಳಸಬೇಕಿದ್ದು ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.