

ಚಿತ್ರದುರ್ಗ: ಕಾಲ್ಪನಿಕ ವೇತನ,ನಿಶ್ಚಿತ ಪಿಂಚಣಿ ಯೋಜನೆ ಹಾಗೂ ಆರೋಗ್ಯ ಸಂಜೀವಿನಿ ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರಿನಿಂದ ಬೆಂಗಳೂರುವರೆಗೆ ಕಾಲ್ನಡಿಗೆ ಜಾಥಾ ಹಾಗೂ ಬೆಂಗಳೂರಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆ ಸಲಾಗುವುದು ಎಂದು ಪ್ರಾಚಾರ‌್ಯ ಬಿ.ಪಿ ತಿಪ್ಪೆಸ್ವಾಮಿ ಹೇಳಿದರು.
ನಗರದ ಹೇಮರೆಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಬುಧವಾರ ಸಂಜೆ ಜಿಲ್ಲಾ ಸರ್ಕಾರಿ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಸಭೆಯಲ್ಲಿ ಮಾತನಾಡಿ,ಅಕ್ಟೋಬರ್ 6ರಂದು ತುಮಕೂರಿನ ಸಿದ್ಧಗಂಗಾ ಮಠದಿಂದ, 6 ದಿನಗಳ ಕಾಲ ಜಾಥಾ ನಡೆಯಲಿದೆ. 7ನೇ ದಿನ ಬೆಂಗಳೂರಿನ ಫ್ರೀಡಂ ಪಾ ರ್ಕಿನಲ್ಲಿ ಸಮಾವೇಶದೊಂದಿಗೆ ಅನಿರ್ದಿಷ್ಟ ಸತ್ಯಾಗ್ರಹ ಪ್ರಾರಂಭಿಸಲಾಗುವುದು.
ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಜಾಥಾ ಉದ್ಘಾಟಿಸಲಿದ್ದು,ಅಹಿಂದ ವರ್ಗದ 20 ಮಠಾಧೀಶರ ಸಮ್ಮುಖ ವಹಿಸಲಿದ್ದಾರೆ.
ಆಳುವ ಸರ್ಕಾರಗಳಿಗೆ ನಿವೃತ್ತಿ ನಂತರ ಬೀದಿಪಾಲಾಗುವ ಶಿಕ್ಷಕರ ಜೀವನದ ಬಗ್ಗೆ ನಗಣ್ಯ ಭಾವವಿದೆ. 3,4ತಿಂಗಳು, 5 ವರ್ಷಗಳ ಅನುದಾನ ಪಡೆದು ನಿವೃತ್ತಿಯಾದ ಕೆಲವು ಶಿಕ್ಷಕರು ಮರಣ ಹೊಂದಿದ್ದು,ನೊಂದ ಕುಟುಂಬದವರ ಜೀವನ ಶೋಚನೀಯ ವಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿ,ಮಾಡು ಇಲ್ಲವೇ ಮಡಿ ಎನ್ನುವ ರೀತಿಯಲ್ಲಿ ಹೋರಾಟವನ್ನು ಮಾಡದಿದ್ದರೆ ನಿವೃತ್ತಿ ನಂತರ ಶಿಕ್ಷಕರ ಜೀವನ ದುರಂತಮಯವಾಗಲಿದೆ ಎಂದರು.ಬಿ.ಆರ್.ಮಲ್ಲೇಶ್,ದುರುಗೇಶ್,ನಿಜಲಿಂಗಪ್ಪ,ಜಯ ಲಕ್ಷ್ಮೀ,ಡಾ.ಮಹೇಶ್ ಮತ್ತಿತರರು ಮಾತನಾಡಿದರು.