

ತುಮಕೂರು: ಸಿದ್ಧಗಂಗಾ ಮಠಕ್ಕೆ ನಮ್ಮ ಕುಟುಂಬ ಮೊದಲಿನಿಂದಲೂ ಬರುವ ಅಭ್ಯಾಸವಿದೆ. ಮನಸ್ಸಿಗೆ ಅನಿಸಿದಾಗಲೆಲ್ಲ ಮಠಕ್ಕೆ ಬಂದು ಸ್ವಾಮೀಜಿಗಳ ಆಶೀರ್ವಾದ ಪಡೆಯುತ್ತೇವೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ ಅವರು ಹೇಳಿದರು.
ಸಿದ್ಧಗಂಗಾ ಮಠಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ, ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಯವರು, ಹಿರಿಯ ಸಹೋದರ ಮಠಕ್ಕೆ ಬರುತ್ತಿದ್ದರು. ನಮ್ಮ ಇಡೀ ಕುಟುಂಬ ಮಠದೊಂದಿಗೆ ನಿಕಟ ಸಂಬಂಧ ಹೊಂದಿದೆ. ನಮ್ಮ ತಂದೆಯವರ ಮೂಲ ಮಾಗಡಿ ತಾಲ್ಲೂಕು. ಶ್ರೀಗಳೂ ಮಾಗಡಿ ತಾಲೂಕಿನವರಾಗಿರುವುದರಿಂದ ನಮಗೊಂದು ಒಳ್ಳೆಯ ನಂಟಿದೆ. ಆದರೆ ಅದೊಂದೇ ಕಾರಣವಲ್ಲ, ಮೊದಲಿನಿಂದಲೂ ನಮ್ಮ ಕುಟುಂಬ ಮಠದ ಭಕ್ತರಾಗಿ ನಡೆದುಕೊಳ್ಳುತ್ತಾ ಬಂದಿದೆ ಎಂದರು.
ಎಸ್ ಎಸ್ ಸರ್ಕಲ್ ಯಾವುದೇ ಬದಲಾವಣೆ ಇಲ್ಲ : ತುಮಕೂರಿನ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಅಳವಡಿಸಲಾಗುತ್ತಿರುವ ಎಲ್ಇಡಿ ಪರದೆ ಉದ್ಘಾಟನಾ ದಿನಾಂಕ ಇನ್ನೂ ನಿಗದಿಪಡಿಸಿಲ್ಲ. ಎಲೆಕ್ಟ್ರಾನಿಕ್ ವ್ಯವಸ್ಥೆಯ ಕಾಮಗಾರಿ ಇನ್ನೂ ಪೂರ್ಣಗೊಳ್ಳಬೇಕಿದೆ. ಸದ್ಯಕ್ಕೆ ಕೆಲವು ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರದೆಯಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಂಡಿದ್ದು, ಅವುಗಳನ್ನು ಸರಿಪಡಿಸಿ ವ್ಯವಸ್ಥೆ ಸಂಪೂರ್ಣವಾಗಿ ಸಿದ್ಧವಾದ ಬಳಿಕ ಉದ್ಘಾಟನೆಯ ದಿನಾಂಕ ನಿಗದಿಪಡಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರನ್ನು ಬದಲಾಯಿಸಲಾಗುತ್ತದೆ ಎಂಬ ಗೊಂದಲಕ್ಕೆ ತೆರೆ ಎಳೆದ ಅವರು, ಯಾವುದೇ ಕಾರಣಕ್ಕೂ ವೃತ್ತದ ಹೆಸರನ್ನು ಬದಲಾಯಿಸುವುದಿಲ್ಲ. ಈ ವಿಚಾರದಲ್ಲಿ ಭಕ್ತರು ಯಾವುದೇ ಆತಂಕ ಅಥವಾ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಈಗಾಗಲೇ ಹಲವು ಬಾರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆಯಾಗುವುದಿಲ್ಲ ಎಂದು ಪುನರುಚ್ಚರಿಸಿದರು.
ಆಧುನಿಕ ತಂತ್ರಜ್ಞಾನವನ್ನು ನಮ್ಮ ಜನರಿಗೆ ಪರಿಚಯಿಸುವ ಉದ್ದೇಶದಿಂದ ಇಂತಹ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಬೆಂಗಳೂರಿನಲ್ಲಷ್ಟೇ ಇಂತಹ ತಂತ್ರಜ್ಞಾನ ಸೀಮಿತವಾಗದೆ, ತುಮಕೂರು ಸೇರಿದಂತೆ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿಯೂ ಜನರು ಇಂತಹ ತಂತ್ರಜ್ಞಾನವನ್ನು ನೋಡುವಂತಾಗಬೇಕು. ನಮ್ಮ ಯುವಜನರಿಗೆ ಆಧುನಿಕ ತಂತ್ರಜ್ಞಾನದ ಪರಿಚಯವಾಗಬೇಕು ಎಂಬ ಉದ್ದೇಶವಿದೆ. ಈ ಪ್ರಯತ್ನಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಇದರ ಮೂಲಕ ತುಮಕೂರಿನಲ್ಲಿ ಒಂದು ಪ್ರಮುಖ ಕೇಂದ್ರ ನಿರ್ಮಾಣವಾಗಲಿದೆ. ಎಲ್ಇಡಿ ಪರದೆಯನ್ನು ಜಾಹೀರಾತುಗಳಿಗೆ ಬಳಸಿಕೊಳ್ಳಬಹುದು. ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕೂ ಬಳಸಬಹುದು. ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಕೂಡ ತಮ್ಮ ಜಾಹೀರಾತು ಮತ್ತು ಕಾರ್ಯಕ್ರಮಗಳಿಗಾಗಿ ಬಳಸಿಕೊಳ್ಳಬಹುದು. ಇದಕ್ಕೆ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಉಚಿತವಾಗಿ ಅವಕಾಶ ನೀಡುವುದಿಲ್ಲ. ಇದನ್ನು ಹೊರತುಪಡಿಸಿ ಇದರಲ್ಲಿ ಯಾವುದೇ ರಾಜಕೀಯ, ವ್ಯವಹಾರಿಕ ಅಥವಾ ಧಾರ್ಮಿಕ ಉದ್ದೇಶಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ವೃತ್ತದ ಹೆಸರನ್ನು ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧ ಪ್ರಕ್ರಿಯೆಗಳಿವೆ. ಸರ್ಕಾರದ ಆದೇಶವಾಗಬೇಕು, ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಹೋಗಿ ಅಲ್ಲಿ ನಿರ್ಧಾರವಾಗಬೇಕು. ಸ್ಥಳೀಯ ಸಂಸ್ಥೆಯಾದ ಮಹಾನಗರ ಪಾಲಿಕೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ಇಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಯಾರಾದರೂ ಸುಮ್ಮನೆ ಹೆಸರು ಬದಲಾಯಿಸಿ ಎಂದು ಹೇಳಿದಾಕ್ಷಣ ಹೆಸರು ಬದಲಾಯಿಸಲು ಸಾಧ್ಯವಿಲ್ಲ. ನಾನು ನಾಳೆ ಯಾವುದೋ ಒಂದು ವೃತ್ತಕ್ಕೆ ಹೋಗಿ ನನ್ನ ಹೆಸರಿನ ಫಲಕ ಹಾಕಿಸಿಕೊಳ್ಳಲು ಸಾಧ್ಯವೇ? ಇಂತಹ ವಿಚಾರಗಳಿಗೆ ನಿಗದಿತ ಪ್ರಕ್ರಿಯೆಗಳಿವೆ.
ಡಾ. ಜಿ. ಪರಮೇಶ್ವರ, ಡಿಸಿಎಂ