

ಶಿರಾ: ನಗರದ ಎಲ್.ಜಿ. ಹಾವನೂರು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಪತ್ತಿನ ಸಹಕಾರ ಸಂಘದ 18ನೇ ವರ್ಷದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ವಿಶ್ವನಾಥ್ ಸಂತೆಪೇಟೆ ಅಧ್ಯಕ್ಷತೆಯಲ್ಲಿ ಭಾನುವಾರ ನೆರವೇರಿತು.
ಕಾರ್ಯಕ್ರಮವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಂಗವಾಗಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುನಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ ನಾಯಕ ಸಮಾಜದ ವಿದ್ಯಾರ್ಥಿಗಳಿಗೆ ದಿವಂಗತ ಎಸ್.ಟಿ.ಪ್ರಸನ್ನಕುಮಾರ್ ಅವರ ಸ್ಮರಣಾರ್ಥ "ಏಕಲವ್ಯ ಪ್ರತಿಭಾ ಪುರಸ್ಕಾರ' ನೀಡಿ ಸನ್ಮಾನಿಸಲಾಯಿತು. ನಗರಸಭೆ ಮಾಜಿ ಸದಸ್ಯೆ ಸುಜಾತಾ ಎಸ್.ಟಿ. ಪ್ರಸನ್ನಕುಮಾರ್ ಕುಟುಂಬಸ್ಥರು ಪುರಸ್ಕಾರದ ವ್ಯವಸ್ಥೆ ಮಾಡಿದ್ದರೆ, ತುಮಕೂರು ಜಿಲ್ಲಾ ಸಹಕಾರಿ ಕೇಂದ್ರ (ಡಿಡಿಸಿಸಿ) ಬ್ಯಾಂಕಿನ ವಾಲ್ಮೀಕಿ ನೌಕರರ ಬಳಗದಿಂದ ನಗದು ಬಹುಮಾನ ವಿತರಿಸಲಾಯಿತು.
ಎಲ್.ಜಿ. ಹಾವನೂರು ರಸ್ತೆ ನಾಮಕರಣ:
ಇದೇ ಸಂದರ್ಭದಲ್ಲಿ ಶಿರಾ ನಗರದ ಬುಕ್ಕಾಪಟ್ಟಣ ರಸ್ತೆಗೆ 'ಎಲ್.ಜಿ. ಹಾವನೂರು ರಸ್ತೆ' ಹಾಗೂ ರಿಲಯನ್ಸ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿರುವ ವೃತ್ತಕ್ಕೆ 'ಎಲ್.ಜಿ. ಹಾವನೂರು ವೃತ್ತ' ಎಂದು ನಾಮಕರಣ ಮಾಡಲಾಯಿತು. ನಿರ್ದೇಶಕರಾದ ರಾಕೇಶ್ ಡಿ.ಡಿ.ನಾಯಕ, ಮಂಜುನಾಥ್ ಪಂಜಿಗಾನಹಳ್ಳಿ, ನಟರಾಜ್ ಭೂವನಹಳ್ಳಿ, ಎಸ್.ರಂಗರಾಜು, ಗಂಗಾಧರ್ ಕುಂಬಾರಹಳ್ಳಿ, ಕಾಮಾಕ್ಷಮ್ಮ ಹೊಸಪಾಳ್ಯ, ಗೌರವಾಧ್ಯಕ್ಷ ಬಂಡೆ ರಾಮಕೃಷ್ಣ, ಡಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಜನಾರ್ಧನ್, ಪಾಂಡುರಂಗಪ್ಪ, ಜಯರಾಮಯ್ಯ ತಿಥಿಗಾನಹಳ್ಳಿ ಇದ್ದರು.