ಗೂಳೂರು ಗಣೇಶ ಪ್ರತಿಷ್ಠಾಪನೆ

ಕಾರ್ತೀಕ ಮಾಸದಲ್ಲಿ 1 ತಿಂಗಳು ನಡೆಯಲಿದೆ ಗಣೇಶೋತ್ಸವ
Tumakuru Taluk Historical Ganeshotsava starts in Guluru
ತುಮಕೂರು ತಾಲೂಕು ಗೂಳೂರು ಗಣಪನಿಗೆ ಬಲಿಪಾಡ್ಯಮಿಯಂದು ಕಣ್ಣು, ಕಿರೀಟ ಧಾರಣೆ ಮಾಡಿ ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗಿದೆ.
Published on: 

ತುಮಕೂರು-: ಇತಿಹಾಸ ಪ್ರಸಿದ್ಧ ಗೂಳೂರು ಗಣಪತಿ ಮೂರ್ತಿಗೆ ಕಣ್ಣು, ಕಿರೀಟ ಧಾರಣೆಯನ್ನು ಬಲಿಪಾಡ್ಯಮಿಯ ದಿನವಾದ ಮಂಗಳವಾರ ನೆರವೇರಿಸಲಾಯಿತು. 18 ಕೋಮಿನ ಜನರು ಸೇರಿ ವಿವಿಧ ಧಾರ್ಮಿಕ ವಿಧಿ ವಿಧಾನ ಹಾಗೂ ಸಂಪ್ರದಾಯದೊಂದಿಗೆ ಪೂಜೆ ಸಲ್ಲಿಸುವುದರೊಂದಿಗೆ ಒಂದು ತಿಂಗಳ ಕಾಲ ಭಕ್ತರಿಗೆ ಮಹಾಗಣಪತಿಯ ದರ್ಶನ ಭಾಗ್ಯ ದೊರೆಯಲಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಬಲಿಪಾಡ್ಯಮಿ ದಿನದಂದು ಗಣೇಶಮೂರ್ತಿಗೆ ವಿಶೇಷ ಪೂಜೆಯೊಂದಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಕಣ್ಣು, ಕಿರೀಟಧಾರಣೆ ಮಾಡಿ ಪ್ರತಿಷ್ಠಾಪಿಸಲಾಯಿತು. ಮಂಗಳವಾರದಿಂದ ಆರಂಭವಾಗಿರುವ ಗಣೇಶೋತ್ಸವವು ಹಾಗೂ ವಿಶೇಷ ಪೂಜೆ ಕೈಂಕರ್ಯ ಇನ್ನೂ ಒಂದು ತಿಂಗಳ ಕಾಲ ಪ್ರತಿನಿತ್ಯ ನೆರವೇರಲಿದೆ.

ಈ ಬೃಹತ್​ ಗಣೇಶ ಮೂರ್ತಿಗೆ ವಿಶೇಷ ಐತಿಹ್ಯವಿದ್ದು, 1 ತಿಂಗಳ ಕಾಲ ಗ್ರಾಮದ ಪ್ರತಿಯೊಂದು ಮನೆಯವರು ನಿತ್ಯ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುವರು.

ಪ್ರತಿದಿನ ರಾತ್ರಿ 9 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. 18 ಕೋಮಿನವರು ಗೂಳೂರು ಗಣಪನಿಗೆ ವಿವಿಧ ಸೇವೆ ಸಲ್ಲಿಸಲಿದ್ದಾರೆ.

ಎರಡು ದಿನ ಜಾತ್ರೆ: 1 ತಿಂಗಳ ಗಣೇಶೋತ್ಸವ ಬಳಿಕ ಡಿ.12 ಮತ್ತು 13 ರಂದು ಜಾತ್ರಾ ಮಹೋತ್ಸವ ಹಾಗೂ ಗಣೇಶ ಮೂರ್ತಿ ವಿಸರ್ಜನಾ ಮಹೋತ್ಸವ ನಡೆಯಲಿದೆ. 12 ರಂದು ಗಣೇಶಮೂರ್ತಿಯನ್ನು ದೇವಾಲಯದಿಂದ ಹೊರ ತಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಗುವುದು. 13 ರಂದು ಸಂಜೆ 5 ಗಂಟೆಯ ನಂತರ ಗೂಳೂರು ಕೆರೆಯಲ್ಲಿ ವೈಭವಯುತವಾಗಿ ವಿಸರ್ಜಿಸಲಾಗುವುದು ಎಂದು ಗೂಳೂರು ಶ್ರೀ ಮಹಾಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಜಿ.ಎಸ್​. ಶಿವಕುಮಾರ್​ ಹಾಗೂ ದೇವಾಲಯದ ಅರ್ಚಕ ಶಿವಕುಮಾರ ಶಾಸ್ತ್ರಿಗಳು ತಿಳಿಸಿದರು.