ಅಮಾನಿಕೆರೆಯಲ್ಲಿ ಜಲಕ್ರೀಡೆಗಳ ಕ್ರಾಂತಿ

ಕಯಾಕಿಂಗ್​-ಕನೋಯಿಂಗ್​ ತರಬೇತಿ
Kayaking Kannyoing Training in Tumkur
ಬೆಂಗಳೂರಿನಲ್ಲಿ ನಡೆಯಲಿರುವ ಮಿನಿ ಒಲಿಂಪಿಕ್ಸ್​ನಲ್ಲಿ ಭಾಗವಹಿಸಲು ತುಮಕೂರಿನ ಅಮಾನಿಕೆರೆ ಅಂಗಳದಲ್ಲಿ ತರಬೇತಿ ಪಡೆಯುತ್ತಿರುವ ಸ್ಪರ್ಧಿಗಳು.
Published on: 

ವಿಶೇಷ ವರದಿ

ತುಮಕೂರು: ಸುಮಾರು 8 ಎಕರೆ ವಿಸ್ತೀರ್ಣದ ಅಮಾನಿಕೆರೆಯನ್ನು ಸ್ವಚ್ಛಗೊಳಿಸಿ ಕಯಾಕಿಂಗ್​& ಕನೋಯಿಂಗ್​ ತರಬೇತಿ ಅಕಾಡೆಮಿಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಕಲ್ಪ ಕೈಗೊಂಡಿದೆ. ಪ್ರಸ್ತುತ ಅಮಾನಿಕೆರೆ ಅಂಗಳದಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು ನವೆಂಬರ್​ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಮಿನಿ ಒಲಿಂಪಿಕ್ಸ್​ನಲ್ಲಿ ಭಾಗವಹಿಸಲಿರುವುದು ವಿಶೇಷವೆನಿಸಿದೆ.

ನಗರದ ಅಮಾನಿಕೆರೆಯಲ್ಲಿ ಜಲಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾಡಳಿತವು ಆರಂಭಿಸಿರುವ ಕಯಾಕಿಂಗ್​& ಕನೋಯಿಂಗ್​ ತರಬೇತಿ ಅಕಾಡೆಮಿಯು ಕರ್ನಾಟಕ ಒಲಿಂಪಿಕ್ಸ್​ ಅಸೋಸಿಯೇಷನ್​ (ಕೆಎಒ) ಕಾರ್ಯದರ್ಶಿ ಒತ್ತಾಸೆಯಂತೆ ನಡೆಯುತ್ತಿದ್ದು ತುಮಕೂರು ಜಿಲ್ಲೆಯಿಂದ ಕಯಾಕಿಂಗ್​& ಕನೋಯಿಂಗ್​ ಕ್ರೀಡೆಯಲ್ಲಿ ಉತ್ತಮಸಾಧನೆ ಮಾಡುವ ಸ್ಪರ್ಧಿಗಳ ತಂಡವನ್ನು ರೂಪಿಸುವ ಗುರಿ ಹೊಂದಲಾಗಿದೆ.

ಕ್ರೀಡಾ ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಡಿಸಿಎಂ ಡಾ. ಜಿ. ಪರಮೇಶ್ವರ್​ ಅಮಾನಿಕೆರೆಯನ್ನು ಇತ್ತೀಚೆಗೆ "ಸೆಂಟರ್​ ಆಫ್​ ಎಕ್ಸಲೆನ್ಸ್​' ಎಂದು ಘೋಷಿಸಿರುವುದು ಜಿಲ್ಲೆಯ ಕ್ರೀಡಾ ಅಭಿವೃದ್ಧಿ ಮತ್ತಷ್ಟು ಉತ್ತೇಜನ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಈ ವಿಶಿಷ್ಟ ಜಲಕ್ರೀಡೆಗಳತ್ತ ಸೆಳೆಯಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಇದರ ಫಲವಾಗಿ ಕಳೆದ 15 ದಿನಗಳಿಂದ 10 ರಿಂದ 14 ವರ್ಷದ ಮಕ್ಕಳಿಗೆ ಕಯಾಕಿಂಗ್​-ಕನೋಯಿಂಗ್​ ಕ್ರೀಡೆಯ ತರಬೇತಿ ನೀಡಲಾಗುತ್ತಿದ್ದು ಬೆಂಗಳೂರಿನಿಂದಲೇ ವಿಶೇಷ ತರಬೇತುದಾರರನ್ನು ಕರೆಸಲಾಗಿದೆ.

ಜಿಲ್ಲೆಯಲ್ಲಿ ಕ್ರೀಡಾ ಸಂಸತಿಯನ್ನು ಬೆಳೆಸುವುದು ಮತ್ತು ಯುವ ಜನತೆಯನ್ನು ಕ್ರೀಡೆಗಳತ್ತ ಆಕರ್ಷಿಸುವುದು ಜಿಲ್ಲಾಡಳಿತದ ಉದ್ದೇಶವಾಗಿದೆ. ತುಮಕೂರು ಕೇವಲ ಶೈಕ್ಷಣಿಕ ಜಿಲ್ಲೆಯಾಗಿ ಉಳಿಯದೆ, ಕ್ರೀಡಾ ಕ್ಷೇತ್ರದಲ್ಲಿಯು ರಾಜ್ಯಕ್ಕೆ ಮಾದರಿಯಾಗಬೇಕೆಂಬುದು ಡಿಸಿಎಂ ಜಿ.ಪರಮೇಶ್ವರ್​ ಆಶಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net