ಎಚ್​ಐವಿ ರೋಗಿಗಳು ಸಮಾಜದಲ್ಲಿ ಗೌರವದಿಂದ ಬದುಕುವಂತಾಗಲಿ

ತುಮಕೂರಿನಲ್ಲಿ ಏಡ್ಸ್​ ಜಾಗೃತಿ ಜಾಥಗೆ ನ್ಯಾ.ನೂರುನ್ನೀಸ ಚಾಲನೆ ನೀಡಿದರು. ಡಾ.ಮೋಹನ್​ದಾಸ್​,  ಡಾ.ಚಂದ್ರಶೇಖರ್​,  ಡಾ.ಅಶೋಕ್​ ಮತ್ತಿತರರು ಇದ್ದರು.
ತುಮಕೂರಿನಲ್ಲಿ ಏಡ್ಸ್​ ಜಾಗೃತಿ ಜಾಥಗೆ ನ್ಯಾ.ನೂರುನ್ನೀಸ ಚಾಲನೆ ನೀಡಿದರು. ಡಾ.ಮೋಹನ್​ದಾಸ್​, ಡಾ.ಚಂದ್ರಶೇಖರ್​, ಡಾ.ಅಶೋಕ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಏಡ್ಸ್​ ದಿನ
  • ಜಿಲ್ಲಾ ಏಡ್ಸ್​ ನಿಯಂತ್ರಣ ಘಟಕ
  • ತುಮಕೂರಿನಲ್ಲಿ ಜಾಗೃತಿ ಜಾಥಾ
ತುಮಕೂರು: ಜಿಲ್ಲೆಯಲ್ಲಿ ಎಚ್​ಐವಿ ರೋಗಿಗಳಿಗಾಗಿ ಸೂಕ್ತವಾದ ವಸತಿ ಸೌಲಭ್ಯಗಳ ಕೊರತೆಯಿದ್ದು, ಏಡ್ಸ್​ ರೋಗಿಗಳಿಗೆ ವಸತಿ ಸೇರಿದಂತೆ ಹಲವು ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರೇತರ ಸಂಸ್ಥೆಗಳು ನೆರವಾಗಬೇಕು ಎಂದು ಹಿರಿಯ ಸಿವಿಲ್​ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮನವಿ ಮಾಡಿದರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿಶ್ವ ಏಡ್ಸ್​ ದಿನದ ಅಂಗವಾಗಿ ಜಿಲ್ಲಾ ಏಡ್ಸ್​ ನಿಯಂತ್ರಣ ಘಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಎಚ್​ಐವಿ ರೋಗಿಗಳಿಗೆ ಸರ್ಕಾರದಿಂದಲೇ ಎಲ್ಲಾ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಅನೇಕ ವಿದೇಶಗಳಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸರ್ಕಾರಕ್ಕೆ ಪೂರಕವಾದ ಸೇವೆಗಳನ್ನು ನೀಡುತ್ತಿವೆ. ಅದೇ ರೀತಿ ಜಿಲ್ಲೆಯಲ್ಲಿಯೂ ಏಡ್ಸ್​ ರೋಗಿಗಳ ನೆರವಿಗಾಗಿ ಸರ್ಕಾರೇತರ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.
ಕೋರ ಬಳಿಯಿರುವ ನಿರಾಶ್ರಿತ ಕೇಂದ್ರದಲ್ಲಿ ಏಡ್ಸ್​ ರೋಗಿಯೊಬ್ಬರನ್ನು ದಾಖಲಿಸಲಾಗಿತ್ತು. ಇದು ಅಂಗವಿಕಲರು, ವೃದ್ಧರು ಇರುವ ನಿರಾಶ್ರಿತ ಕೇಂದ್ರವಾಗಿರುವುದರಿಂದ ಏಡ್ಸ್​ ರೋಗಿಯನ್ನು ಇರಿಸಿಕೊಳ್ಳಲು ಆಗುವುದಿಲ್ಲವೆಂದು ಹೊರ ಕಳಿಸಲಾಗಿದೆ ಎಂದು ಬೇಸರಿದರು.
ಏಡ್ಸ್​ ದಿನಚರಣೆ ಕೇವಲ ಆಚರಣೆ ಮಟ್ಟಕ್ಕೆ ಸೀಮಿತವಾಗಬಾರದು. ಎಚ್​ಐವಿ ರೋಗಿಗಳಿಗೂ ಸಮಾಜದಲ್ಲಿ ಗೌರವದಿಂದ ಬದುಕುವ ಹಕ್ಕು ಇದೆ. ಅಧಿಕಾರಿಗಳು, ಆರೋಗ್ಯ ಇಲಾಖೆ ಹಾಗೂ ಸಮಾಜ ಸೇವಾ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ರೋಗಿಗಳಿಗೆ ಬೇಕಾದ ಸಮಯೋಚಿತ ಚಿಕಿತ್ಸೆ ಮತ್ತು ಸೌಲಭ್ಯಗಳು ದೊರಕುತ್ತವೆ ಎಂದರು.
ಎಚ್​ಐವಿ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ವಿವಿಧ ಜಾಗೃತಿ ಕಾರ್ಯಕ್ರಮ, ಶಿಕ್ಷಣ ಕಾರ್ಯಾಗಾರ, ಯುವಕರಿಗೆ ತಿಳುವಳಿಕೆ ನೀಡುವ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಜನರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ನಿವಾರಣೆ ಮಾಡಿದಾಗ ಮಾತ್ರ ರೋಗ ತಡೆಗಟ್ಟುವಿಕೆ ಯಶಸ್ವಿಯಾಗುತ್ತದೆ ಎಂದರು.
ಜಿಲ್ಲಾ ಏಡ್ಸ್​ ನಿಯಂತ್ರಣಾಧಿಕಾರಿ ಡಾ.ಮೋಹನ್​ದಾಸ್​ ಮಾತನಾಡಿ, ಜಿಲ್ಲೆಯಲ್ಲಿ ಏಡ್ಸ್​ ಹರಡುವಿಕೆ ತಡೆಯುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲಾ ತಾಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ಅರಿವು ಕಾರ್ಯಕ್ರಮಗಳು ಹಾಗೂ ಜಾಗೃತಿ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ನಗರದಲ್ಲಿ ಕೃಷಿ ಮಾರುಕಟ್ಟೆ, ಕೆಎಸ್​ಆರ್​ಟಿಸಿ ಮತ್ತು ಖಾಸಗಿ ಬಸ್​ ನಿಲ್ದಾಣಗಳಲ್ಲಿ ಏಡ್ಸ್​ ನಿಯಂತ್ರಣ ಕುರಿತ ಕರಪತ್ರಗಳನ್ನು ಹಂಚಿ, ಜಾನಪದ ಕಲಾ ತಂಡಗಳಿಂದ ಬೀದಿ ನಾಟಕ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
"ಹೆಚ್​ಐವಿ/ಏಡ್ಸ್​ ನಿಯಂತ್ರಣಕ್ಕೆ ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ" ಎಂಬ ಘೋಷವಾಕ್ಯದೊಂದಿಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನಗರದೆಲ್ಲೆಡೆ ಜಾಗೃತಿ ಜಾಥ ನಡೆಸಿದರು.
ಡಿಎಚ್​ಒ ಡಾ.ಚಂದ್ರಶೇಖರ್​, ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಶೋಕ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net