ದೇವರಾಯನದುರ್ಗದಲ್ಲಿ ರೋಪ್​ ವೇ ನಿರ್ಮಾಣ

*ತುಮಕೂರಿನ ದೇವರಾಯನದುರ್ಗ ದೇವಾಲಯದಲ್ಲಿ ಬಿ.ಸುರೇಶಗೌಡ ಪೂಜೆ ಸಲ್ಲಿಸಿದರು.
*ತುಮಕೂರಿನ ದೇವರಾಯನದುರ್ಗ ದೇವಾಲಯದಲ್ಲಿ ಬಿ.ಸುರೇಶಗೌಡ ಪೂಜೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ
  • ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚೆ
  • ಶಾಸಕ ಬಿ.ಸುರೇಶಗೌಡ ಭರವಸೆ
ತುಮಕೂರು: ದೇವರಾಯನದುರ್ಗದಲ್ಲಿ ರೋಪ್​ ವೇ ನಿರ್ಮಿಸುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಬಿ.ಸುರೇಶಗೌಡ ಭರವಸೆ ನೀಡಿದರು.
ಸೋಮವಾರ ದೇವರಾಯನದುರ್ಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಸುರೇಶ್​ಗೌಡ, ಕನಿಷ್ಠ 61 ಕೋಟಿ ರೂ. ನಿಂದ ಗರಿಷ್ಠ 150 ಕೋಟಿ ರೂ. ವೆಚ್ಚದಲ್ಲಿ ರೋಪ್​ ವೇ ನಿರ್ಮಿಸುವ ಕೇಂದ್ರಕ್ಕೆ ಪ್ರಸತಾವನೆ ಸಲ್ಲಿಸಲಾಗುವುದು ಎಂದರು.
ಗಣಿ ಇಲಾಖೆಯಡಿ ಪರಿಸರ ಪುನರ್​ ನಿಮಾರ್ಣಕ್ಕಾಗಿ ಲಭ್ಯವಿರುವ ಅನುದಾನದಲ್ಲಿ ರೋಪ್​ ವೇ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದರ ಜತೆಗೆ ನಾಮದ ಚಿಲುಮೆ ಸುತ್ತಮುತ್ತಲಿನ ಪರಿಸರದಲ್ಲಿ ಪೂರ್ಣ ಪ್ರಮಾಣದ ಪ್ರಾಣಿ ಸಂಗ್ರಹಾಲಯ ಸ್ಥಾಪಿಸಲೂ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು ಎಂದರು.
ದೇವರಾಯನದುರ್ಗ ಸಮುದ್ರ ಮಟ್ಟದಿಂದ 3904 ಅಡಿ ಎತ್ತರದಲ್ಲಿದ್ದು, 4117 ಹೆಕ್ಟೇರ್​ ಪ್ರದೇಶದಲ್ಲಿ ಅರಣ್ಯ ವ್ಯಾಪಿಸಿಕೊಂಡಿದೆ. ಇದೊಂದು ಸುರಕ್ಷಿತ ಅರಣ್ಯ ಪ್ರದೇಶ. ಇಲ್ಲಿ 1200 ಅಡಿ ಎತ್ತರದಲ್ಲಿ ರೋಪ್​ ವೇ ಇರಬೇಕು. ಅದು ಮೋನೋ ಕೇಬಲ್​ ಇರಬೇಕೆ ಅಥವಾ ಎರಡು- ಮೂರು ಕೇಬಲ್​ ಇರಬೇಕೆ ಎಂಬ ಬಗ್ಗೆ ಸಾಧ್ಯಾಸಾಧ್ಯತೆ ನೋಡಿಕೊಂಡು ತೀಮಾರ್ನಿಸಲಾಗುವುದು ಎಂದರು.
ದೇವರಾಯನದುರ್ಗದಲ್ಲಿ ರೋಪ್​ ವೇ ಮತ್ತು ಪ್ರಾಣಿ ಸಂಗ್ರಹಾಲಯ ಸ್ಥಾಪಿಸಿದರೆ ಇದೊಂದು ಅತ್ಯುತ್ತಮ ಆಕರ್ಷಣೀಯ ಪ್ರವಾಸಿ ಕೇಂದ್ರವಾಗದೆ ಎಂದರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರ, ವಲಯ ಅರಣ್ಯಾಧಿಕಾರಿ ನಮಿತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net