ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಚಿವ ಜಿ.ಪರಮೇಶ್ವರ
ಗ್ರಾಪಂ ಅಧಿಕಾರಕ್ಕೆ ಕುತ್ತು
ಮನರೇಗಾ ಹೆಸರು ಬದಲಿಗೆ ಆಕ್ರೋಶ
ತುಮಕೂರು: ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಮನರೇಗಾ ಯೋಜನೆಯಲ್ಲಿನ ಮಹಾತ್ಮಗಾಂಧೀಜಿ ಅವರ ಹೆಸರು ಬದಲಾಯಿಸಲು ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮುಂದಾಗಿರುವುದು ದೇಶದ ಜನರಿಗೆ ತೀವ್ರ ನೋವುಂಟು ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟ್ಯಂತರ ಜನ ನರೇಗಾ ಅಡಿ ಉದ್ಯೋಗ ಪಡೆದಿದ್ದಾರೆ. ದೇಶಕ್ಕೆ ಆಸ್ತಿ ಸೃಜನೆಯಾಗಿದೆ. ಆದರೆ, ಒಕ್ಕೂಟ ವ್ಯವಸ್ಥೆಯಲ್ಲಿ ಅಭಿಪ್ರಾಯ ಪಡೆಯದೆ ಏಕಪಯವಾಗಿ ಹೆಸರು ಬದಲಿಸಲಾಗಿದೆ. ಬಿಜೆಪಿ ಸರ್ಕಾರದ ಇಂತಹ ದ್ವೇಷದ ಧೋರಣೆ ಖಂಡಿಸಿ ಜಿಲ್ಲೆಯೆಲ್ಲೆಡೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮೂಲಸೌಲಭ್ಯಗಳು ಹಕ್ಕುಗಳಾಗಬೇಕು ಎಂದು ಶಿಕ್ಷಣ, ಆಹಾರ, ಅರಣ್ಯ, ಮಾಹಿತಿ ಹಾಗೂ ಉದ್ಯೋಗ ಹಕ್ಕುಗಳನ್ನು ರೂಪಿಸಿದ್ದ ಮನಮೋಹನ್ ಸಿಂಗ್ ಅವರ ದೂರದೃಷ್ಟಿಯ ಯೋಜನೆಗಳಿಗೆ ಎಳ್ಳುನಿರು ಬಿಡಲು ಬಿಜೆಪಿ ಸರ್ಕಾರ ಮುಂದಾಗಿದೆ. ಆರ್ಟಿಕಲ್ 73ಕ್ಕೆ ತಿದ್ದುಪಡಿ ತಂದು ಈ ಯೋಜನೆಯನ್ನು ರೂಪಿಸಲಾಗಿತ್ತು. ದ್ವೇಷದ ಕಾರಣಕ್ಕಾಗಿ ಈ ಮಸೂದೆಯನ್ನು ಬೇರೊಂದು ರೂಪದಲ್ಲಿ ತರಲು ಮೋದಿ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗ್ರಾಮರಾಜ್ಯ ಕನಸು ಕಂಡಿದ್ದ ಮಹಾತ್ಮಗಾಂಧಿ ಅವರ ಹೆಸರು ತೆಗೆದು ಖುಷಿಪಟ್ಟಿರುವ ಬಿಜೆಪಿಯ ನಿಲುವನ್ನು ಇಡೀ ವಿಶ್ವ ಗಮನಿಸಿದೆ. ಭಾರತೀಯರಿಗೂ ಅತಿ ದೊಡ್ಡ ನೋವು ತಂದಿದೆ. ಮನರೇಗಾ ಯೋಜನೆಗೆ ವಿಶ್ವದಲ್ಲಿಯೇ ಮೆಚ್ಚುಗೆ ವ್ಯಕ್ತವಾಗಿದೆ. ಹೆಸರು ಬದಲಿಸಿ ಜನರ ಬದುಕಿಗೆ ಕತ್ತರಿಯಾಕಿದೆ. ವಿಬಿಜಿ ರಾಮ ಜೀ ಎಂದು ಹೆಸರು ಇಡಲಾಗಿದೆ. ರಾಮನ ಬಗ್ಗೆ ನಮಗೂ ಭಕ್ತಿ ಇದೆ. ಆದರೆ, ಮಹಾತ್ಮಗಾಂಧಿ ಹೆಸರು ಬದಲಾಯಿಸಿರುವುದು ಖಂಡನೀಯವಾಗಿದ್ದು ಜನಾಕ್ರೋಶ ವ್ಯಕ್ತವಾಗಿದೆ ಎಂದರು.
2005ರಲ್ಲಿ ಜಾರಿಗೊಳಿಸಿದ್ದ ಮಸೂದೆಯನ್ನು ಬಿಜೆಪಿಯವರು ಅಂದು ವಿರೋಧ ಮಾಡಿದ್ದು ನೆನಪಿಸಿಕೊಳ್ಳಬೇಕು. ಉದ್ಯೋಗ ದಿನದ ಹೆಚ್ಚಳ ಎಂದು ಹೇಳಲಾಗುತ್ತಿದೆ. ಆದರೆ,
ದಲಿತರು, ಮಹಿಳೆಯರು, ಒಬಿಸಿ ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಕ್ರಾಂತಿಕಾರಿ ಯೋಜನೆ ಸ್ವರೂಪ ಬದಲಾಯಿಸಿ ಮನುಸ್ಮ$ತಿ ವರ್ಗೀಕರಣಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಪರಮೇಶ್ವರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಎನ್.ರಾಜಣ್ಣ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕರಾದ ಗಂಗಹನುಮಯ್ಯ, ಡಾ.ಎಸ್.ರಫೀಕ್ ಅಹ್ಮದ್, ಎಸ್.ಷಫೀ ಅಹ್ಮದ್, ಡಿ.ಸಿ.ಗೌರಿಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರ ಗೌಡ ಮತ್ತಿತರರು ಹಾಜರಿದ್ದರು.
ದೇಶದೆಲ್ಲೆಡೆ ಜಾಗೃತಿ ಮೂಡಿಸಲು ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡು ಮನರೇಗಾ ಯೋಜನೆ ಯಥಾವತ್ ಮುಂದುವರಿಸುವ ಮೂಲಕ ಜನರ ಉದ್ಯೋಗ ಹಕ್ಕು ಮರುಸ್ಥಾಪನೆ, ಗ್ರಾಪಂಗಳಿಗೆ ಸ್ವಯಂ ಆಡಳಿತದ ಹಕ್ಕು ರಕ್ಷಣೆ ಜತೆಗೆ ಕನಿಷ್ಟ 400 ರೂ., ಕನಿಷ್ಟ ಕೂಲಿಗೆ ಒತ್ತಾಯಿಸಲಾಗುವುದು.
ಡಾ.ಜಿ.ಪರಮೇಶ್ವರ
ಗೃಹ ಸಚಿವ
ಗ್ರಾಪಂ ಹಾಗೂ ಗ್ರಾಮೀಣಭಾಗದ ಜನರ ಅಧಿಕಾರಗಳನ್ನು ಕಿತ್ತುಕೊಳ್ಳುವ ಹುನ್ನಾರದ ಕರಾಳ ಕಾಯ್ದೆ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕಿದ್ದು ಎಲ್ಲಾ ರಾಜಕೀಯಪಕ್ಷಗಳೂ ವಿರೋಧ ಮಾಡಬೇಕಿರುವ ವಿಷಯವಾಗಿದೆ.