ಲೋಕಾ ಬಲೆಗೆ ತುಮಕೂರು ಡಿಐಸಿ ಜಂಟಿ ನಿರ್ದೇಶಕ

 ಲೋಕಾ ಬಲೆಗೆ ಬಿದ್ದ ಲಿಂಗರಾಜು
ಲೋಕಾ ಬಲೆಗೆ ಬಿದ್ದ ಲಿಂಗರಾಜು
Published on

ಪ್ರಮುಖ ಮುಖ್ಯಾಂಶಗಳು

  • 1.25 ಲಕ್ಷ ರೂ., ಗೆ ಲಂಚಕ್ಕೆ ಬೇಡಿಕೆ
  • ತುಮಕೂರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ
  • ಲಂಚ ಪಡೆಯುವ ವೇಳೆ ಬಲೆಗೆ ಬಿದ್ದ ಸಹಾಯಕ
ತುಮಕೂರು: ಸಣ್ಣ ಉದ್ಯಮಗಳಿಗೆ ನೀಡುವ ಸರ್ಕಾರದ ಸಹಾಯಧನ ಮಂಜೂರು ಮಾಡಲು ಉದ್ಯಮಿಯಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು ಹಾಗೂ ಅವರ ಸಹಾಯಕ ಎನ್​.ಎಸ್​. ಪ್ರಸಾದ್​ ಲಂಚ ಪಡೆಯುವ ಸಿಕ್ಕಿಬಿದ್ದಿದ್ದಾರೆ. ವಿಜಯನಗರದ ಕೈಗಾರಿಕೋದ್ಯಮಿ ಎಂ.ಎಸ್​.ಚನ್ನಬಸವೇಶ್ವರ್​ ಬಳಿ ಗುರುವಾರ ಮಧ್ಯಾಹ್ನ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿಯ ಮುಂಭಾಗ 1.15 ಲಕ್ಷ ರೂ., ಲಂಚವನ್ನು ಸಹಾಯಕ ಪ್ರಸಾದ್​ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ವಸಂತನರಸಾಪುರ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ ಎಲೆಕ್ಟ್ರಿಕಲ್​ ಕಂಟ್ರೋಲ್​ ಪ್ಯಾನಲ್​ ತಯಾರಿಸುವ ಶಿವಲಿಂಗ ಇಂಡಸ್ಟ್ರೀಸ್​ ಕಾರ್ಖಾನೆ ನಡೆಸುತ್ತಿದ್ದ ಚನ್ನಬಸವೇಶ್ವರ್​ ಸುಮಾರು ಒಂದು ವರ್ಷದ ಹಿಂದೆ ಆರಂಭವಾದ ಈ ಉದ್ಯಮಕ್ಕೆ ಸರ್ಕಾರದ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿದ್ದರು. ಸಹಾಯಧನವಾಗಿ 18.75 ಲಕ್ಷ ರೂ., ಮಂಜೂರು ಮಾಡಲು ಜಂಟಿ ನಿರ್ದೇಶಕ ಲಿಂಗರಾಜು 1.25 ಲಕ್ಷ ರೂ., ಲಂಚಕ್ಕೆ ಬೇಡಿಕೆಯಿಟ್ಟಿದ್ದು ಮುಂಗಡವಾಗಿ 10 ಸಾವಿರ ಪಡೆದಿದ್ದರು. ಉಳಿದ ಹಣವನ್ನು ನೀಡಲು ನಿರಾಕರಿಸಿ ಉದ್ಯಮಿ ಚನ್ನಬಸವೇಶ್ವರ್​ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಹಿನ್ನೆಲೆ ಲೋಕಾಯುಕ್ತ ಡಿವೈಎಸ್ಪಿಗಳಾದ ಡಾ. ಕೆ.ಎಂ.ಸಂತೋಷ್​, ಎಂ.ಮಂಜುನಾಥ್​ ನೇತೃತ್ವದಲ್ಲಿ ಈ ದಾಳಿ ನಡೆಸಿದ್ದು ಲಂಚ ಪಡೆಯುವಾಗಿ ಸಹಾಯಕ ಪ್ರಸಾದ್​ ಸಿಕ್ಕಿಬಿದ್ದಿದ್ದ. ಲಂಚ ಬೇಡಿಕೆಯಲ್ಲಿ ಲಿಂಗರಾಜು ಮೊದಲ ಆರೋಪಿಯಾಗಿದ್ದು ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net