ವಿಬಿ ಜಿ ರಾಮ್​ ಜಿ ಮಸೂದೆ ವಾಪಸ್​ ಪಡೆಯಿರಿ

ತುಮಕೂರಿನಲ್ಲಿ ಸಿಪಿಐ ನೇತೃತ್ವದಲ್ಲಿ ಮನರೇಗಾ ಹೆಸರನ್ನು  ಬದಲಿಸಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ವಿಬಿ ಜಿ ರಾಮ್​ ಜಿ ಮಸೂದೆಯನ್ನು ಕೂಡಲೇ ವಾಪಸ್​ ಪಡೆಯುವಂತೆ ಪ್ರತಿಭಟಿಸಲಾಯಿತು. ಗಿರೀಶ್​, ಕಂಬೆಗೌಡ, ಗೋವಿಂದರಾಜು, ಅಶ್ವತ್ಥ್​ ನಾರಾಯಣ, ರಾಜೇಶ್​ ಮತ್ತಿತರರು ಇದ್ದರು.
ತುಮಕೂರಿನಲ್ಲಿ ಸಿಪಿಐ ನೇತೃತ್ವದಲ್ಲಿ ಮನರೇಗಾ ಹೆಸರನ್ನು ಬದಲಿಸಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ವಿಬಿ ಜಿ ರಾಮ್​ ಜಿ ಮಸೂದೆಯನ್ನು ಕೂಡಲೇ ವಾಪಸ್​ ಪಡೆಯುವಂತೆ ಪ್ರತಿಭಟಿಸಲಾಯಿತು. ಗಿರೀಶ್​, ಕಂಬೆಗೌಡ, ಗೋವಿಂದರಾಜು, ಅಶ್ವತ್ಥ್​ ನಾರಾಯಣ, ರಾಜೇಶ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಪಿಐ ಪ್ರತಿಭಟನೆ
  • ಮನರೇಗಾ ಹೆಸರು ಬದಲಾವಣೆಗೆ ತೀವ್ರ ವಿರೋಧ
  • ಮೋದಿ ರಾಜೀನಾಮೆಗೆ ಆಗ್ರಹ
ತುಮಕೂರು: ಗ್ರಾಮೀಣ ಬಡಜನತೆಯ ದುಡಿಯುವ ಹಕ್ಕನ್ನು ಕಸಿಯುವ ವಿಬಿ ಜಿ ರಾಮ್​ ಜಿ ಮಸೂದೆ-2025ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದನ್ನು ವಿರೋಧಿಸಿ ಹಾಗೂ ಈ ಮಸೂದೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್​ ಪಕ್ಷ (ಸಿಪಿಐ) ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟಿಸಲಾಯಿತು.
ನಗರದ ಅಶೋಕ ರಸ್ತೆಯಲ್ಲಿರುವ ಬಿಎಸ್​ಎನ್​ಎಲ್​ ಕಚೇರಿ ಮುಂದೆ ಸೋಮವಾರ ಭಾರತ ಕಮ್ಯುನಿಸ್ಟ್​ ಪಕ್ಷದ ಕಾರ್ಯಕರ್ತರು ಮನರೇಗಾ ಹೆಸರನ್ನು ಸಂಪೂರ್ಣವಾಗಿ ಬದಲಿಸಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ವಿಬಿ ಜಿ ರಾಮ್​ ಜಿ ಮಸೂದೆಯನ್ನು ಕೂಡಲೇ ವಾಪಸ್​ ಪಡೆದು ದೇಶದ ಸುಮಾರು 12 ಕೋಟಿ ನರೇಗಾ ಕಾರ್ಮಿಕರ ಉದ್ಯೋಗವನ್ನು ಕಾಪಾಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್​, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದೇಶದ ಬಡತನ ನಿಮೂರ್ಲನೆ ಮಾಡಲು ಅಂದಿನ ಎಡಪಕ್ಷಗಳು ಹಾಗೂ ಕಾಂಗ್ರೆಸ್​ ನೇತೃತ್ವದ ಕೇಂದ್ರ ಸರ್ಕಾರ ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಯೋಜನೆಯನ್ನು ಪ್ರಾರಂಭ ಮಾಡಿತ್ತು. ಮಹಾತ್ಮ ಗಾಂಧೀಜಿಯವರ ಹೆಸರನ್ನು ಉದ್ಯೋಗ ಖಾತ್ರಿ ಯೋಜನೆಯಿಂದ ತೆಗೆದಿರುವುದು ದೇಶದ ಬಡವರಿಗೆ ಮಾಡಿದ ದ್ರೋಹವಾಗಿದೆ. ಈ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದು ಸರಿಯಲ್ಲ ಎಂದರು.
ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮನರೇಗಾ ಹೆಸರು ಬದಲಿಸಲು ತೀವ್ರ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರೂ ಕೇಂದ್ರ ಸರ್ಕಾರ ವಿಬಿ ಜಿ ರಾಮ್​ ಜಿ ಮಸೂದೆಗೆ ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸಿ ದೇಶದ 140 ಕೋಟಿ ಜನರಿಗೆ ದ್ರೋಹ ಮಾಡಿದೆ. ಈ ಮೂಲಕ ಸುಮಾರು 12 ಕೋಟಿ ಕಾರ್ಮಿಕರ ಬದುಕನ್ನು ಬೀದಿಗೆ ತಳ್ಳುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಾತ್ಮಗಾಂಧೀಜಿ ಹೆಸರನ್ನು ತೆಗೆದಿರುವ ಪ್ರಧಾನಿ ನರೇಂದ್ರ ಮೋದಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕಂಬೇಗೌಡ ಮಾತನಾಡಿ, ಈ ಹಿಂದಿನ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಾತ್ಮಗಾಂಧಿಗೆ ಗೌರವ ಸೂಚಿಸುವಂತಹ ಹೆಸರನ್ನು ಸೂಚಿಸಿತ್ತು. ಆದರೆ, ಪ್ರಸ್ತುತ ಎನ್​ಡಿಎ ನೇತೃತ್ವದ ಕೇಂದ್ರ ಸರ್ಕಾರ ವಿಕಸಿತ ಭಾರತ ವಿಬಿ ಜಿ ರಾಮ್​ ಜಿ ಎಂದು ಉದ್ಯೋಗ ಖಾತ್ರಿಗೆ ಹೆಸರಿಡುವ ಮಸೂದೆಗೆ ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸಿದೆ. ಇದು ಸರಿಯಲ್ಲ ಎಂದರು.
ಕೇಂದ್ರ ಸರ್ಕಾರದ ಈ ಮಸೂದೆಯಲ್ಲಿ 8 ಅಪ್ಪಟ ಸುಳ್ಳುಗಳು ಇರುವುದನ್ನು ಎಲ್ಲರೂ ಗಮನಿಸಬೇಕಾಗಿದೆ. ಬೆಳೆ ನಾಟಿ ಮಾಡುವ ಸಂದರ್ಭದಲ್ಲಿ, ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಕೂಲಿ ಕೊಡುವ ವಿಚಾರ, 120 ದಿನ ಕೆಲಸ ಜಾರಿಗೊಳಿಸುವ ಕ್ರಮ ನಾಚಿಕೆಗೇಡಿನ ವಿಚಾರ. ವಿಕಸಿತ ಭಾರತ ವಿಬಿ ಜಿ ರಾಮ್​ ಜಿ ಹೆಸರಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಇದನ್ನು ಗಮನಿಸಿದರೆ ರಾಷ್ಟ್ರಪತಿಗಳು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ ಎಂದರು.
ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಅಶ್ವತ್ಥ್​ನಾರಾಯಣ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ರಾಜೇಶ್​, ಜಾಫರ್​ ಷರೀಪ್​, ಭೋಜರಾಜು, ಮಂಜುನಾಥ್​, ವೆಂಕಟೇಶ್​, ಎನ್​.ಕೆ. ರಾಜಣ್ಣ, ಸುರೇಶ್​ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net