

ತುಮಕೂರು: ಹಲವು ದಶಕಗಳಿಂದ ತುಮಕೂರು ಪ್ರಮುಖ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಂಡಿದ್ದು ಇಲ್ಲಿನ ವರ್ತಕರು ನಗರದ ಬೆಳವಣಿಗೆ ಹಾಗೂ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ, "ಸಿರಿಧಾನ್ಯ ಸಂಪದ' ಶತಮಾನೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮಂಡಿಪೇಟೆಯಲ್ಲಿ ನಡೆಯುತ್ತಿದ್ದ ವ್ಯಾಪಾರ ಚಟುವಟಿಕೆಗಳು ಹಾಗೂ ಅಲ್ಲಿನ ವರ್ತಕರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ತುಮಕೂರಿನ ಬೆಳವಣಿಗೆಗೆ ಪೂರಕವಾಗಿದ್ದವು ಎಂದರು.
ಎಪಿಎಂಸಿಗಳ ಪಾತ್ರ: ಕೃಷಿ ಉತ್ಪನ್ನಗಳ ಮಾರಾಟದಲ್ಲಿ ರೈತರಿಗೆ ನ್ಯಾಯಯುತ ಬೆಲೆ ದೊರೆಯಬೇಕು ಹಾಗೂ ವ್ಯಾಪಾರಿಗಳಿಗೂ ನ್ಯಾಯಯುತ ವ್ಯಾಪಾರಕ್ಕೆ ಅವಕಾಶ ಇರಬೇಕು ಎಂಬ ಉದ್ದೇಶದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ವ್ಯವಸ್ಥೆಯನ್ನು ರೂಪಿಸಲಾಯಿತು. ರೈತರು ಬೆಳೆದ ಧಾನ್ಯ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುವಾಗ ಅವರ ಹಿತಾಸಕ್ತಿಗಳನ್ನು ರಕ್ಷಿಸುವುದರ ಜತೆಗೆ ವ್ಯಾಪಾರಿಗಳ ಹಿತವನ್ನು ಸಮತೋಲನಗೊಳಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ. ರಾಜ್ಯದಲ್ಲಿ ಹಲವು ಎಪಿಎಂಸಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಮಾರುಕಟ್ಟೆಗಳು ಲಾಭದಲ್ಲಿದ್ದರೆ ಎಂದು ಜಿ. ಪರಮೇಶ್ವರ್ ತಿಳಿಸಿದರು.
ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು, ಶ್ರೀಮಠದ ಪರಮ ಭಕ್ತರಾಗಿ ಪೂಜ್ಯರಿಗೆ ಬೆನ್ನೆಲುಬಾಗಿ ಇಲ್ಲಿನ ವರ್ತಕರು ಸಹಕರಿಸಿದ್ದಾರೆ. ವ್ಯಾಪಾರ ವೃತ್ತಿ ಜತೆಗೆ ಸಮಾಜಸೇವೆಯನ್ನೂ ಮಾಡಿಕೊಂಡು ಬರುತ್ತಿರುವ ಧಾನ್ಯ ವ್ಯಾಪಾರಿಗಳ ಸಂಘದವರು ತುಮಕೂರಿನ ಬೆಳವಣಿಗೆಗೂ ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.
ಸಿಂಹಗದ್ದೆ ಬಸ್ತಿಮಠದ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಧಾನ್ಯಗಳನ್ನು ಸಂಗ್ರಹಿಸಿ ನಾಡಿಗೆ ನೀಡುತ್ತಿರುವ ವರ್ತಕರು ಆಹಾರ ಭದ್ರತೆಗೂ ನೆರವಾಗಿದ್ದಾರೆ. ಬರಗಾಲದಲ್ಲಿ ಬಡವರಿಗೆ ಸಹಾಯ ಮಾಡಿ ಸಮಾಜಕ್ಕೆ ನೆರವಾಗಿದ್ದಾರೆ ಎಂದರು.
ತುಮಕೂರು ನಗರದ ಅಭಿವೃದ್ಧಿಗೆ ವರ್ತಕರ ಸಂಘದ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ. ಈಗ ಬದಲಾಗುತ್ತಿರುವ ವಾಣಿಜ್ಯ ವ್ಯವಹಾರದಲ್ಲಿ ವರ್ತಕರೂ ತಮ್ಮ ವ್ಯವಹಾರ ಪದ್ದತಿಯನ್ನು ಆಧುನೀಕರಣಗೊಳಿಸಿಕೊಳ್ಳಬೇಕು. ಮಾರುಕಟ್ಟೆ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ತಿಳಿದು ಆಧುನಿಕ ವ್ಯಾಪಾರ ಪದ್ದತಿ ಬಗ್ಗೆ ಮುಂದಿನ ಪೀಳಿಗೆ ಮಾರ್ಗದರ್ಶನ ನೀಡಲು ಸಂಘ ಕಾರ್ಯಕ್ರಮ ರೂಪಿಸಬೇಕು ಎಂದು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಲಹೆಯಿತ್ತರು.
ಸಂಘದ ಶತಮಾನೋತ್ಸವ ಸಮಾರಂಭದ ಅಂಗವಾಗಿ 70 ವರ್ಷ ಮೀರಿದ ಸದಸ್ಯರು ಹಾಗೂ ಸಂಘದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಬಿ.ಎಲ್. ಚಂದ್ರರ್ಕಿತಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಸಿ.ಎಸ್. ನಂಜುಂಡಪ್ಪ, ಟಿಜಿಎಂಸಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ದಿವ್ಯಾನಂದಮೂರ್ತಿ, ಜಿಎಂಎ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ರವಿಕುಮಾರ್, ಗ್ರೆೃನ್ ಮರ್ಚೆಂಟ್ಸ್ ಛಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ. ಬಾಲಾಜಿ, ಪಶುಪತಿನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಜೆ. ರುದ್ರಪ್ರಕಾಶ್ ಉಪಸ್ಥಿತರಿದ್ದರು.
20 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್ !
ತುಮಕೂರನ್ನು ಪ್ರಮುಖ ಕೈಗಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸುಮಾರು 20 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಇದು ಏಷ್ಯಾದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗುವ ಸಾಮರ್ಥ್ಯ ಹೊಂದಿದೆ ಎಂದು ಜಿ.ಪರಮೇಶ್ವರ ತಿಳಿಸಿದರು.
ಈಗಾಗಲೇ ಹಲವು ಕೈಗಾರಿಕೋದ್ಯಮಿಗಳು ತುಮಕೂರಿನಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಕೆಲವರು 500 ರಿಂದ 1000 ಎಕರೆವರೆಗೆ ಭೂಮಿ ಒದಗಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇತ್ತೀಚೆಗೆ ಉದ್ಯಮಿಯೊಬ್ಬರು ಗ್ರೀನ್ ಹೈಡೋಜನ್ ಘಟಕ ಹಾಗೂ ಡೇಟಾ ಸೆಂಟರ್ ಸ್ಥಾಪಿಸಲು ಸುಮಾರು 80,000 ಕೋಟಿ ರೂ. ಹೂಡಿಕೆ ಮಾಡುವ ಉದ್ದೇಶದೊಂದಿಗೆ 2,000 ಎಕರೆ ಭೂಮಿ ಒದಗಿಸುವಂತೆ ಪ್ರಸ್ತಾಪವನ್ನಿಟ್ಟಿದ್ದಾರೆ ಎಂದರು.
ಅಧಿಕಾರ ಶಾಶ್ವತವಲ್ಲ
ರಾಜಕೀಯ ಕ್ಷೇತ್ರಕ್ಕೆ ನಾನು ಬಂದಿದ್ದು ಆಕಸ್ಮಿಕ. ಶ್ರೀಮಠದೊಂದಿಗೆ ಬಾಲ್ಯದಿಂದಲೇ ಒಡನಾಟವಿದ್ದು ನಮ್ಮ ತಂದೆಯವರು ಶ್ರೀಮಠಕ್ಕೆ ಕರೆದುಕೊಂಡು ಹೋಗಿ ಪೂಜ್ಯ ಶಿವಕುಮಾರ ಶ್ರೀಗಳ ಆಶೀರ್ವಾದ ಕೊಡಿಸುತ್ತಿದ್ದರು. ಅಂದು ಪಡೆದ ಶ್ರೀಗಳ ಆಶೀರ್ವಾದವು ನನ್ನ ಜೀವನದ ಬೆಳವಣಿಗೆಗೆ ಪ್ರೇರಣೆಯಾಗಿದೆ. ಪೂಜ್ಯರ ಆಶೀರ್ವಾದದಿಂದಲೇ ಇಂದು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜನರ ಮುಂದೆ ನಿಲ್ಲಲು ಸಾಧ್ಯವಾಗಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರದಲ್ಲಿರುವ ಸಂದರ್ಭದಲ್ಲಿ ಜನರಿಗೆ ಮತ್ತು ನಾಡಿಗೆ ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ಡಿಸಿಎಂ ಜಿ.ಪರಮೇಶ್ವರ್ ಹೇಳಿದರು.
ತುಮಕೂರನ್ನು ರಾಜ್ಯದ ಪ್ರತಿಷ್ಠಿತ ಜಿಲ್ಲೆಗಳಲ್ಲಿ ಒಂದಾಗಿ ಬೆಳೆಸಬೇಕು ಎಂಬುದು ತಮ್ಮ ಆಶಯವಾಗಿದೆ. ತುಮಕೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೂ ತಮ್ಮಿಂದಾದ ಕೊಡುಗೆ ನೀಡಲು ಪ್ರಯತ್ನಿಸಿದ್ದು ತಾವು ಉನ್ನತ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿರುವುದನ್ನು ಸ್ಮರಿಸಿದರು.
ಒಂದು ಸಂಸ್ಥೆ ಶತಮಾನ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರ ವಿಶ್ವಾಸ ಗಳಿಸುವುದು ಸಾಮಾನ್ಯ ಸಂಗತಿಯಲ್ಲ. 1926ರಲ್ಲಿ ಪ್ರಾರಂಭವಾದ ಧಾನ್ಯ ವ್ಯಾಪಾರಿಗಳ ಸಂಘವು ನೂರು ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿರುವುದು ಹೆಮ್ಮೆಯ ಸಂಗತಿ. ಸರ್ಕಾರದ ವತಿಯಿಂದ ಅಗತ್ಯವಿರುವ ಸಹಾಯ, ಸಹಕಾರ ನೀಡುವೆ. 1965-&66ರಲ್ಲಿ ದೇಶ ತೀವ್ರ ಬರಗಾಲಕ್ಕೆ ತುತ್ತಾಗಿದ್ದಾಗ ಧಾನ್ಯ ವ್ಯಾಪಾರಿಗಳ ಸಂಘವು ಬಡವರಿಗೆ ನೆರವಾಗಿ ಮಾನವೀಯ ಕಾರ್ಯ ಕೈಗೊಂಡಿತ್ತು.
ಡಾ.ಜಿ.ಪರಮೇಶ್ವರ
ಡಿಸಿಎಂ
ರೈತರು ಮತ್ತು ಗ್ರಾಹಕರ ನಡುವೆ ಸೇತುವೆಯಾಗಿ ವರ್ತಕರು ಕಾರ್ಯನಿರ್ವಹಿಸುತ್ತಿದ್ದಾರೆ. ವ್ಯಾಪಾರವಹಿವಾಟಿನ ಪದ್ದತಿ ಬದಲಾಗಿದೆ. ಮಾಲ್ಗಳು, ಆನ್ಲೈನ್ ವ್ಯವಹಾರಗಳು ಹೆಚ್ಚಾಗಿವೆ. ಹೋಬಳಿ ಮಟ್ಟದಲ್ಲೂ ಎಪಿಎಂಸಿಗಳು ಆರಂಭವಾಗಿ ಸಮಸ್ಯೆಯಾಗಿ ವರ್ತಕರು ಕಷ್ಟದಲ್ಲಿದ್ದಾರೆ.
ಸಿದ್ದಲಿಂಗ ಸ್ವಾಮೀಜಿ
ಮಠಾಧ್ಯಕ್ಷರು, ಸಿದ್ದಗಂಗಾ ಮಠ