ಸಿದ್ದಗಂಗಾ ಮಠಕ್ಕೆ ನೀರಾತಂಕ ದೂರ

ಸಿದ್ದಗಂಗಾಮಠ
ಸಿದ್ದಗಂಗಾಮಠ
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್​ ಬಾಕಿ ಮೊತ್ತ 1.96 ಕೋ.ರೂ.,
  • ವರ್ಷದ ಹಿಂದಿನ ಬಾಕಿ ಪಾವತಿಸದ ಸರ್ಕಾರ
  • ಸಚಿವ ಎಂ.ಬಿ.ಪಾಟೀಲ್​ ಬಿಲ್​ ಪಾವತಿಸುವ ಭರವಸೆ
ತುಮಕೂರು: ಸಿದ್ದಗಂಗಾ ಮಠಕ್ಕೆ ಹೇಮಾವತಿ ನೀರು ಪೂರೈಸುವ ಹೊನ್ನೇನಹಳ್ಳಿ ಕೆರೆ ಪಂಪ್​ಹೌಸ್​ ವಿದ್ಯುತ್​ ಬಿಲ್​ ಅನ್ನು ಕೆಐಎಡಿಬಿ ವತಿಯಿಂದ ಪಾವತಿಸದ ಹಿನ್ನೆಲೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ವಿದ್ಯುತ್​ ಬಿಲ್​ ಪಾವತಿಸುವುದಾಗಿ ಭರವಸೆ ಕೊಟ್ಟಿದ್ದ ರಾಜ್ಯ ಸರ್ಕಾರವು ವರ್ಷವಾದರೂ ಪಾವತಿಸಿರಲಿಲ್ಲ.
ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಪೂರೈಸುವ ಪಂಪ್​ ಹೌಸ್​ ವಿದ್ಯುತ್​ ಬಿಲ್​ ಕಳೆದ ವರ್ಷದ ಬಾಕಿ 70 ಲಕ್ಷ ರೂ., ಪಾವತಿಸಿರಲಿಲ್ಲ. ಈ ಹಿನ್ನೆಲೆ ಬೆಸ್ಕಾಂ ವಿದ್ಯುತ್​ ಸಂಪರ್ಕ ಕಡಿತಗೊಳಿಸಿತ್ತು. ಆ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್​ ಬಿಲ್​ ಪಾವತಿಸುವುದಾಗಿ ಭರವಸೆ ಕೊಟ್ಟಿದ್ದರು. ಕಳೆದ ವರ್ಷದ ಬಿಲ್​ ಹಾಗೂ ಈ ವರ್ಷದ ವಿದ್ಯುತ್​ ಬಿಲ್​ ಸೇರಿದ್ದು ವಿದ್ಯುತ್​ ಬಾಕಿ ಮೊತ್ತ 1.96 ಕೋ.ರೂ., ಬೆಳೆದಿತ್ತು!. ಇಷ್ಟೊಂದು ದೊಡ್ಡ ಮೊತ್ತದ ವಿದ್ಯುತ್​ ಬಿಲ್​ ಪಾವತಿಸದ ಪರಿಣಾಮ ಹೊನ್ನೇನಹಳ್ಳಿ ಪಂಪ್​ ಹೌಸ್​ ಸ್ತಬ್ದಗೊಂಡಿದ್ದು ಸಿದ್ದಗಂಗಾಮಠಕ್ಕೆ ನೀರು ಪೂರೈಕೆ ಬಂದ್​ ಆಗಿತ್ತು.
ಕಳೆದ 6 ತಿಂಗಳಿಂದ ಹೊನ್ನೇನಳ್ಳಿಯಿಂದ ನೀರು ಬಾರದ ಕಾರಣ ದೇವರಾಯಪಟ್ಟಣ ಕೆರೆ ನೀರು ಪೂರೈಕೆ ಬಂದ್​ ಆಗಿದೆ. ಹಾಗಾಗಿ, ದೇವರಾಯಪಟ್ಟಣ ಕೆರೆಯಿಂದ ಶ್ರೀಮಠಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು ಮಾರ್ಚ್​-ಏಪ್ರಿಲ್​ ತಿಂಗಳಲ್ಲಿ ಮಠಕ್ಕೆ ನೀರಿನ ಕೊರತೆ ಉದ್ಭವಿಸಲಿತ್ತು. ಫೆ.6 ರಿಂದ 20 ರವರೆಗು ಶ್ರೀಮಠದಲ್ಲಿ ಜಾತ್ರೆ ನಡೆಯಲಿದ್ದು ಈ ವೇಳೆ ಜನಜಾನುವಾರುಗಳಿಗೂ ನೀರಿನ ಅಭಾವ ಉಂಟಾಗುತ್ತಿತ್ತು. ಪ್ರತಿದಿನ 10 ಸಾವಿರ ವಿದಾರ್ಥಿಗಳ ಜತೆಗೆ ಪ್ರತಿನಿತ್ಯ ಸಾವಿರಾರು ಭಕ್ತರು ಮಠಕ್ಕೆ ಬರಲಿದ್ದು ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಇತ್ತು.
ಅರ್ಧಗಂಟೆಯಲ್ಲೇ ವಿದ್ಯುತ್​ ಬಿಲ್​ ಪಾವತಿ !
ವಿದ್ಯುತ್​ ಬಿಲ್​ ಪಾವತಿಸಿದ ಕಾರಣ ಸಿದ್ದಗಂಗಾಮಠಕ್ಕೆ ನೀರಿನ ವ್ಯತ್ಯಯ ಉಂಟಾಗಿದೆ ಎಂಬ ಸುದ್ದಿ ಖಾಸಗಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೆಐಎಡಿಬಿ ಅಧಿಕಾರಿಗಳು ಬಿಲ್​ ಪಾವತಿಸಿದ್ದಾರೆ. ಕೇವಲ ಅರ್ಧ ಗಂಟೆಯಲ್ಲಿ ಬಿಲ್​ ಪಾವತಿ ಮಾಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್​ ಹೇಳಿದ್ದು ಬರೋಬ್ಬರಿ 1 ಕೋಟಿ 96 ಲಕ್ಷ ರೂ., ಬಾಕಿ ಇದ್ದ ವಿದ್ಯುತ್​ ಬಿಲ್​ ಅನ್ನು ಆರ್​ಟಿಜಿಎಸ್​ ಮೂಲಕ ಗುರುವಾರ ಕೆಐಎಡಿಬಿ ಅಧಿಕಾರಿಗಳು ಪಾವತಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net