ಪಾಲನೆಯಾಗದ ಲಕ್ಷ್ಮೀ ಆನೆ ರ್ನಿಬಂಧ !

ತುಮಕೂರು ದಸಾರದಲ್ಲಿ ಅರಣ್ಯ ಇಲಾಖೆ ನಿಯಮ ಗಾಳಿಗೆ ತೂರಿದ ಜಿಲ್ಲಾಡಳಿತ
Lakshmi Elephant
ಲಕ್ಷ್ಮೀ ಆನೆ
Published on: 

ತುಮಕೂರು: ತುಮಕೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಹೊರಪೇಟೆಯ ಕರಿಬಸವಸ್ವಾಮಿ ಮಠದ 33 ವರ್ಷದ ಹೆಣ್ಣಾನೆ "ಲಕ್ಷ್ಮೀ'ಯ ಯೋಗಕ್ಷೇಮಕ್ಕೆ ಕುರಿತು ಅರಣ್ಯ ಇಲಾಖೆಯು ವಿಧಿಸಿರುವ ಅನೇಕ ರ್ನಿಬಂಧಗಳು ಜಿಲ್ಲಾಡಳಿತವನ್ನೇ ಬೆಚ್ಚೀಬಿಳಿಸುವಂತಿದೆ! 3.5 ಕಿ.ಮೀ., ಅಂಬಾರಿ ಹೊತ್ತ ಲಕ್ಷ್ಮಣನ ಜತೆ ಹೆಜ್ಜೆ ಹಾಕಿದ ಲಕ್ಷ್ಮೀ ಜನಸಂದಣಿಗೆ ಕರೆದೊಯ್ಯುವಂತಿಲ್ಲ ಎಂಬ ನಿಬಂಧನೆಗಳನ್ನು ವಿಧಿಸಿರುವ ಅಂಶವು ನಿಜಕ್ಕೂ ಕಳವಳಕಾರಿ ಎನಿಸಿದೆ.

ಆನೆಯನ್ನು ದೀರ್ಘಕಾಲ ಬಿಸಿಲಿನಲ್ಲಿ ನಿಲ್ಲಿಸುವಂತಿಲ್ಲ, ಟಾರ್​ ರಸ್ತೆಯಲ್ಲಿ ನಡೆಸುವಂತಿಲ್ಲ, ಭಿಕ್ಷಾಟನೆಗೆ ಬಳಸುವಂತಿಲ್ಲ, ಅಸಮಂಜಸ ಅಲಂಕಾರಿಕ ಉಡುಪು ಹಾಕುವಂತಿಲ್ಲ ಎಂಬುದು ಸೇರಿದಂತೆ ಆನೆಯ ವಾಸಸ್ಥಳದಿಂದ ಹಿಡಿದು, ಅದರ ನೀರು-ಆಹಾರ-ನೈರ್ಮಲ್ಯ, ಆರೋಗ್ಯ ತಪಾಸಣೆ, ಆನೆಯ ಸಾಗಾಣಿಕೆ, ಆನೆಯ ಬಳಕೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ಹಲವು ಸ್ಪಷ್ಟ ನಿಬಂಧನೆಗಳನ್ನು ವಿಧಿಸಿದೆ.

ಇತ್ತೀಚೆಗೆ ಶಿವಮೊಗ್ಗದ ದಸರಾ ಮೆರವಣಿಗೆ ಸಂದರ್ಭದಲ್ಲಿ "ಸೋಮಣ್ಣ' ಎಂಬ ಆನೆಯು ಅಂಬಾರಿ ಸಮೇತ ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡಿ ಅಪಾರ ಹಾನಿ ಉಂಟಾದ ಘಟನೆಯ ಹಿನ್ನೆಲೆಯಲ್ಲಿ, ತುಮಕೂರಿನ "ಲಕ್ಷ್ಮೀ' ಆನೆಯ ಬಗ್ಗೆ ಅರಣ್ಯ ಇಲಾಖೆ 2023ರಲ್ಲಿ ರ್ನಿಬಂಧಗಳ ವಿಧಿಸಿದ್ದು ನಗರದ ಸಾಮಾಜಿಕ ಕಾರ್ಯಕರ್ತ ಆರ್​.ವಿಶ್ವನಾಥನ್​ ಆರ್​ಟಿಐ ಅರ್ಜಿ ಮೂಲಕ ಸಂಗ್ರಹಿಸಿದ್ದಾರೆ. ಈ ಮಾಹಿತಿಯ ಆಘಾತಕಾರಿ ಅಂಶ ಬಹಳ ಹಿಂದೆಯೇ ಬೆಳಕಿಗೆ ಬಂದಿದೆ.

ಪ್ರಮುಖ ನಿಬಂಧನೆಗಳು: ಲಕ್ಷ್ಮೀ ಎಂಬ ಮರಿ ಆನೆಯನ್ನು 1993 ರಲ್ಲಿ ಇಲ್ಲಿನ ಮಠಕ್ಕೆ ಹಸ್ತಾಂತರಿಸಲಾಗಿದ್ದು, ಆ ಆನೆಯ ಯೋಗಕ್ಷೇಮಕ್ಕಾಗಿ ಅರಣ್ಯ ಇಲಾಖೆಯು 19 ನಿಬಂಧನೆಗಳನ್ನು ವಿಧಿಸಿದೆ. ಅದರ ಪ್ರಕಾರ, ಈ ಆನೆಯನ್ನು ಅದರ ಮಾಲೀಕರು ತಮ್ಮ ವ್ಯಾಪ್ತಿಯ ಧಾರ್ಮಿಕ ಆಚರಣೆಗಳಿಗೆ ಮಾತ್ರ ಬಳಸಬಹುದೆಂದು ಸ್ಪಷ್ಟಪಡಿಸಿದೆ.

ಒಂದು ಆನೆಯ ವಾಸದಿಂದ ಹಿಡಿದು ಅದರ ಆಹಾರ ಹೀಗೆ ಎಲ್ಲವೂ ಸ್ವಚ್ಛವಾಗಿ ಇರಬೇಕು. ಆನೆಯ ವಯಸ್ಸಿಗೆ ಅನುಗುಣವಾಗಿ ಪ್ರತಿದಿನ 50 ರಿಂದ 100 ಲೀಟರ್​ಗಳಷ್ಟು ಕುಡಿಯಲು ಯೋಗ್ಯವಾದ ಅಥವಾ ಹರಿಯುವ ನೀರನ್ನು ಒದಗಿಸಬೇಕು. ಆನೆಯ ಮಾಲೀಕರು ನಿಯಮಿತವಾಗಿ, ಸಾಧ್ಯವಾದರೆ ತಿಂಗಳಿಗೊಮ್ಮೆ, ಸ್ಥಳಿಯ ಪಶುವೈದ್ಯರು ಅಥವಾ ಅರಣ್ಯ ಇಲಾಖೆಯ ಪಶುವೈದ್ಯಾಧಿಕಾರಿಗಳಿಂದ ಆನೆಯ ಆರೋಗ್ಯ ತಪಾಸಣೆ ಮಾಡಿಸಬೇಕು. ಆನೆಗಳಿಗೆ ತಗಲಬಹುದಾದ ರೋಗಗಳ ವಿರುದ್ಧ ಅಗತ್ಯ ಲಸಿಕೆಗಳನ್ನು ಹಾಕಿಸುವಂತೆ ಅರಣ್ಯ ಇಲಾಖೆ ನಿರ್ದೇಶಿಸಿತ್ತು.

ಇನ್ನು ಆನೆಯನ್ನು ಜನಸಂದಣಿ ಹೆಚ್ಚಿರುವ ಹಾಗೂ ಜನವಸತಿ ಪ್ರದೇಶಗಳಿಗೆ ಕರೆದೊಯ್ಯಬಾರದು. ಆನೆಯನ್ನು ಭಿಕ್ಷಾಟನೆಗಾಗಿ ಬಳಸಬಾರದು. ಧಾರ್ಮಿಕ ಅಥವಾ ಇತರ ಯಾವುದೇ ಉದ್ದೇಶಕ್ಕಾಗಿ, ದಿನದ ಹೆಚ್ಚು ಬಿಸಿಲಿರುವ ಸಮಯದಲ್ಲಿ ಅಥವಾ ದೀರ್ಘಕಾಲ ನಿರಂತರವಾಗಿ ವಿಶ್ರಾಂತಿ ನೀಡದೆ, ಡಾಂಬರು ರಸ್ತೆಗಳ ಮೇಲೆ ಅಥವಾ ಇತರ ಮಾರ್ಗಗಳಲ್ಲಿ ಆನೆಯನ್ನು ನಡೆಸಿಕೊಂಡು ಹೋಗುವುದನ್ನು ನಿಷೇಧಿಸಲಾಗಿತ್ತು. ಆನೆಗಳನ್ನು ದೀರ್ಘಕಾಲದವರೆಗೆ ಬಿಸಿಲಿನಲ್ಲಿ ನಿಲ್ಲಿಸುವುದು ಅಥವಾ ಧಾರ್ಮಿಕ ಸಮಾರಂಭಗಳಿಗಾಗಿ ಅಸಮಂಜಸವಾಗಿ ದೀರ್ಘಕಾಲದವರೆಗೆ ಅಲಂಕಾರಿಕ ವಸ್ತುಗಳು ಹಾಗೂ ಸಮಾರಂಭದ ಉಡುಪುಗಳನ್ನು ಧರಿಸುವಂತೆ ಮಾಡಿ ಅವುಗಳಿಗೆ ನೋವು ಅಥವಾ ಸಂಕಟ ಉಂಟುಮಾಡುವುದು ಹಾಗೂ ಅವುಗಳ ಬಳಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಅರಣ್ಯ ಇಲಾಖೆ ಸ್ಪಷ್ಟವಾಗಿ ಸೂಚನೆಗಳನ್ನು ನೀಡಿತ್ತು. ಶಿವಮೊಗ್ಗ ಘಟನೆ ಬಳಿಕ ಅರಣ್ಯ ಇಲಾಖೆಗಳು 3 ವರ್ಷಗಳ ಹಿಂದೆಯೇ ವಿಧಿಸಿರುವ ರ್ನಿಬಂಧಗಳನ್ನು ಮುನ್ನೆಲೆಗೆ ತಂದಿದೆ.

ಶಿವಮೊಗ್ಗದ ದಸರಾ ಮೆರವಣಿಗೆ ಸಂದರ್ಭದಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಿದ್ದ ಘಟನೆ ತುಮಕೂರು ದಸರಾದಲ್ಲಿ ಭಾಗವಹಿಸಿದ್ದ ಆನೆಗಳ "ಯೋಗಕ್ಷೇಮ'ವನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಪಾಲಿಸಿದೆಯೇ ಎಂಬ ಚರ್ಚೆ ಹುಟ್ಟುಹಾಕಿದೆ. ಅರಣ್ಯ ಇಲಾಖೆ ವಿಧಿಸಿರುವ ಷರತ್ತುಗಳ ಪಾಲನೆಯಲ್ಲಿ ಲೋಪವಾದಲ್ಲಿ ಆನೆಯ ಮಾಲೀಕತ್ವದ ಪತ್ರವನ್ನು ರದ್ದು ಮಾಡುವುದಲ್ಲದೆ, ತನ್ನ ಸುಪರ್ದಿಗೆ ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆ ಸಹ ನೀಡಿದೆ.

ಆರ್​.ವಿಶ್ವನಾಥನ್​

ಸಾಮಾಜಿಕ ಕಾರ್ಯಕರ್ತ

ಲಕ್ಷ್ಮೀ ಆನೆ ಆರೋಗ್ಯವಾಗಿದ್ದು ಅದರ ಯೋಗಕ್ಷೇಮದ ಬಗ್ಗೆ ತುಮಕೂರು ದಸರಾ ಸಂದರ್ಭದಲ್ಲಿ ಒತ್ತುಕೊಡಲಾಗಿತ್ತು. ಜಂಬೂ ಸವಾರಿ ನಡೆದ ರಸ್ತೆಗಳಲ್ಲಿ ಯಾವುದೇ ರೀತಿಯ ಕಬ್ಬಿಣದ ಚೂರಾಗಲಿ, ತಂತಿಗಳಾಗಲಿ ಅಪಾಯಕಾರಿ ವಸ್ತುಗಳ ಕಾಲಿಗೆ ಚುಚ್ಚದಂತೆ ಎಚ್ಚರಿಕೆ ವಹಿಸಲಾಗಿತ್ತು. ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಸೂಕ್ತ ಜಾಗವನ್ನು ಲಕ್ಷ್ಮೀ ಆನೆಗೆ ನೀಡಿ 3-4 ದಿನ ಅಲ್ಲಿ ಬಿಡಾರಕ್ಕೆ ವ್ಯವಸ್ಥೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ.

ಡಾ.ಶ್ರೀಧರ್​

ಪಶುವೈದ್ಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net