ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆದ್ಯತೆ

ತುಮಕೂರಿನಲ್ಲಿ ಕರ್ನಾಟಕ ಸಮಗ್ರ ಅಭಿವೃದ್ಧಿ ವೇದಿಕೆ ವತಿಯಿಂದ ಆಯೋಜಿಸಿದ್ದ ಚಿಂತನ ಸಮಾವೇಶದ ಸಮಾರೋಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​, ಡಾ.ಕೆ.ಆರ್​.ವೇಣುಗೋಪಾಲ್​, ಮದನ್​ ಪದಾಕಿ, ಜಿ.ಆರ್​.ಸುರೇಶ್​, ವಿ.ಎಸ್​.ವಿ.ಪ್ರಸಾದ್​ ಇದ್ದರು.
ತುಮಕೂರಿನಲ್ಲಿ ಕರ್ನಾಟಕ ಸಮಗ್ರ ಅಭಿವೃದ್ಧಿ ವೇದಿಕೆ ವತಿಯಿಂದ ಆಯೋಜಿಸಿದ್ದ ಚಿಂತನ ಸಮಾವೇಶದ ಸಮಾರೋಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​, ಡಾ.ಕೆ.ಆರ್​.ವೇಣುಗೋಪಾಲ್​, ಮದನ್​ ಪದಾಕಿ, ಜಿ.ಆರ್​.ಸುರೇಶ್​, ವಿ.ಎಸ್​.ವಿ.ಪ್ರಸಾದ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಸಮಗ್ರ ಅಭಿವೃದ್ಧಿ ವೇದಿಕೆ
  • ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
  • ತುಮಕೂರಲ್ಲಿ ಎರಡನೇ ಏರ್​ಪೋರ್ಟ್​ ಅವಶ್ಯ
ತುಮಕೂರು:

ಭಾರತ ವಿಕಸಿತ ಭಾರತವಾಗಿ ಪರಿವರ್ತನೆ ಆಗಬೇಕಾದರೆ ಬೆಂಗಳೂರಿನ ಜತೆಜತೆಗೆ ಕರ್ನಾಟಕದ ಸಮಗ್ರ ಅಭಿವೃದ್ಧಿ ಅತ್ಯವಶ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.

ನಗರದ ಎಸ್​ಐಟಿ ಕಾಲೇಜಿನ ಬಿರ್ಲಾ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಸಮಗ್ರ ಅಭಿವೃದ್ಧಿ ವೇದಿಕೆ ಆಯೋಜಿಸಿದ್ದ ಚಿಂತನ ಸಮಾವೇಶದ ಸಮಾರೋಪ ಭಾಷಣ ಮಾಡಿದ ಅವರು, ಬೆಂಗಳೂರಿನ ಅಭಿವೃದ್ಧಿಯೊಂದನ್ನೇ ರಾಜ್ಯದ ಅಭಿವೃದ್ಧಿ ಎಂದು ಭಾವಿಸುವ ಸೀಮಿತ ಮನೋಭಾವದಿಂದ ಹೊರಬಂದು ಸಮಗ್ರ ಕರ್ನಾಟಕದ ಪ್ರಗತಿಗೆ ಶ್ರಮಿಸಬೇಕಿದೆ ಎಂದು ಸಲಹೆನೀಡಿದರು.
ಬೆಂಗಳೂರು ಬೆಳೆದರೆ ರಾಜ್ಯ ಬೆಳೆದಂತೆ ಎಂಬ ಕಲ್ಪನೆಯಿಂದ ಹೊರಬಂದು ರಾಜ್ಯದ ಪ್ರತಿಯೊಂದು ಭಾಗದ ಅಭಿವೃದ್ಧಿಗೆ ಆದ್ಯತೆ ನೀಡುವುದು ಇಂದಿನ ಅನಿವಾರ್ಯತೆಯಾಗಿದೆ.
ಇತ್ತೀಚೆಗೆ ರಾಜ್ಯದ ಪ್ರಮುಖ ನಾಯಕರೊಬ್ಬರು ಇಡೀ ಜಗತ್ತು ಭಾರತವನ್ನು ಬೆಂಗಳೂರಿನ ಮೂಲಕವೇ ನೋಡುತ್ತಿದೆ ಎಂದು ಹೇಳಿದ್ದನ್ನು ಉಲ್ಲೇಖಿಸಿದ ಅವರು, ಇದ ಹೆಮ್ಮೆಯ ವಿಚಾರವೆನಿಸಿದರು ರಾಜ್ಯದ ಸಮತೋಲಿತ, ಸುಸ್ಥಿರ ಅಭಿವೃದ್ಧಿ ಮುಖ್ಯ. ಇಡೀ ಜಗತ್ತು ಇಂದಿನ ಭಾರತ ಹಾಗೂ ಬೆಂಗಳೂರಿನತ್ತ ಗಮನ ನೆಟ್ಟಿದ್ದು ದೇಶದ ಅಭಿವೃದ್ಧಿಯು ಕರ್ನಾಟಕ ಮುಖೇನೆ ಆಗಬೇಕಿದೆ. ಭಾರತದ ಒಟ್ಟಾರೆ ಬೆಳವಣಿಗೆಗೆ ಕರ್ನಾಟಕವು ನಾಯಕತ್ವವಹಿಸಬೇಕು ಎಂದರು. ದೇಶದಲ್ಲಿ ಶೇ. 55 ರಿಂದ 60 ರಷ್ಟು ಜಸಂಖ್ಯೆಯು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಈ "ಡೆಮೋಗ್ರಾಫಿಕ್​ ಡಿವಿಡೆಂಟ್​' (ಜನಸಂಖ್ಯಾ ಲಾಭಾಂಶ) ದೇಶದ ಅತಿ ದೊಡ್ಡ ಶಕ್ತಿಯಾಗಿದೆ. ಈ ಯುವಶಕ್ತಿ ಮತ್ತು ನೈಪುಣ್ಯತೆಯನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಿದರೆ ಮಾತ್ರ ಅದು ಕರ್ನಾಟಕ ಹಾಗೂ ಇಡೀ ದೇಶಕ್ಕೆ ದೊಡ್ಡ ಆಸ್ತಿಯಾಗಲಿದೆ. ಯುವಜನರ ಸಾಮರ್ಥ್ಯವನ್ನು ದೇಶದ ಏಳಿಗೆಗಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರ ಜತೆಗೆ ಎಚ್ಚರಿಕೆವಹಿಸುವ ಅಗತ್ಯವಿದೆ ಎಂದು ತಿಳಿಸಿದರು.
ವೃದ್ಧಾಶ್ರಮ ಹೆಚ್ಚುತ್ತಿವೆ: ರಾಜ್ಯದಲ್ಲಿ ಇಂದು ಐಟಿ-ಬಿಟಿ ಮೀರಿಸಿ ಮೀರಿಸುವ ಉದ್ಯಮಗಳಾಗಿ ವೃದ್ಧಾಶ್ರಮಗಳು ಬೆಳೆದಿವೆ. ಇದು ಪ್ರಮುಖ ಸಾಮಾಜಿಕ ಕಳವಳಕ್ಕೆ ಕಾರಣವಾಗಿದೆ. ಹೆತ್ತ ತಂದೆ -ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಪ್ರಸ್ತುತ ದಿನಗಳಲ್ಲಿ ಒಂದು ಯಶಸ್ವಿ ಬಿಸಿನೆಸ್​ ಮಾಡೆಲ್​ ಆಗಿ ಮಾರ್ಪಡುತ್ತಿವೆ. ಸುಶಿಕ್ಷಿತ ಯುವಕರು ಐಟಿ-ಬಿಟಿ ಕ್ಷೇತ್ರದಲ್ಲಿ ಉನ್ನತ ಹುದ್ದೆ ಗಿಟ್ಟಿಸಿಕೊಂಡು ವಿದೇಶಗಳಲ್ಲಿ ನೆಲೆಸಿ ತಂದೆತಾಯಿಗಳನ್ನು ವೃದ್ಧಾಶ್ರಮಗಳಿಗೆ ಸೇರಿಸಲಾಗುತ್ತಿದೆ. ಈ ಸಾಮಾಜಿಕ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುಮದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ ಎಂದು ವಿಜಯೇಂದ್ರ ಹೇಳಿದರು.
ವೇದಿಕೆಯಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​, ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಆರ್​.ವೇಣುಗೋಪಾಲ್​, ಮದನ್​ ಪದಾಕಿ, ಅಭಿವೃದ್ಧಿ ಚಿಂತನ ಸಮಾವೇಶದ ಸಂಯೋಜಕರಾದ ಉದ್ಯಮಿ ಹುಬ್ಬಳ್ಳಿಯ ಡಾ.ವಿ.ಎಸ್​.ವಿ.ಪ್ರಸಾದ್​, ತುಮಕೂರಿನ ಜಿ.ಆರ್​.ಸುರೇಶ್​ ಉಪಸ್ಥಿತರಿದ್ದರು.
ನಕ್ಸಲಿಸಂ ಬಗ್ಗೆ ಝೀರೋ ಟಾಲರೆನ್ಸ್​
ದೇಶದ ಡೆಮೋಗ್ರಾಫಿಕ್​ ಡಿವಿಡೆಂಡ್​ (ಯುವಸಂಪತ್ತು) ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗದಿದ್ದರೆ ಅದು ಭವಿಷ್ಯದಲ್ಲಿ ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ರೂಪಾಂತರಗೊಳ್ಳಲಿದೆ. ದೇಶದ ಯುವಶಕ್ತಿಯನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ. ಗ್ರಾಮೀಣ ಯುವಕರಿಗೆ ಸೂಕ್ತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳು ಸಿಗದಿದ್ದಾಗ, ಹಲವು ಸಮಾಜಘಾತಕ ಶಕ್ತಿಗಳು ಅವರನ್ನು ದುರ್ಬಳಕೆ ಮಾಡಿಕೊಂಡು ರಾಜ್ಯ ಮತ್ತು ದೇಶದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಲಿವೆ. ಇದರಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ನಕ್ಸಲಿಸಂ ಹುಟ್ಟಿಕೊಳ್ಳಲು ಹಾಗೂ ವ್ಯಾಪಿಸಲು ದಾರಿ ಮಾಡಿಕೊಡಲಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ವಿಜಯೇಂದ್ರ ಅಭಿಪ್ರಾಯಪಟ್ಟರು.
ಕಳೆದ 12-&13 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ಅವರ ಸತತ ಪ್ರಯ್ನದ ಫಲವಾಗಿ ನಕ್ಸಲಿಸಂ ಬಗ್ಗೆ "ಝೀರೋ ಟಾಲರೆನ್ಸ್​' (ಶೂನ್ಯ ಸಹಿಷ್ಣುತೆ) ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ಪರಿಣಾಮವಾಗಿ ದೇಶದಲ್ಲಿ ನಕ್ಸಲಿಸಂ ಸಂಪೂರ್ಣವಾಗಿ ನಿಮೂರ್ಲನೆಯಾಗುವ ಹಂತ ತಲುಪಿದೆ. ಗ್ರಾಮೀಣ ಯುವಕರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ ಎಂದರು.
ಹೆಮ್ಮೆಯ ಕನ್ನಡಿಗನಾಗಿ....!
ಚಿಂತನಾ ಸಮಾವೇಶದಲ್ಲಿ ಶಿಕಾರಿಪುರ ಶಾಸಕನಾಗಿ ಅಥವಾ ಪಕ್ಷದ ರಾಜ್ಯಾಧ್ಯಕ್ಷನಾಗಿ ಅಲ್ಲ, ಒಬ್ಬ ಹೆಮ್ಮೆಯ ಕನ್ನಡಿಗನಾಗಿ ಮತ್ತು ಸಮಗ್ರ ಸಮೃದ್ಧ ಕರ್ನಾಟಕದ ಕನಸು ಹೊತ್ತ ವ್ಯಕ್ತಿಯಾಗಿ ಭಾಗವಹಿಸಿದ್ದೇನೆ. ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರು ನಾಡಿನ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಇಂತಹ ಚಿಂತನ ವೇದಿಕೆಗಳ ಅಗತ್ಯವಿದೆ. ಈ ವೇದಿಕೆಯನ್ನು ಯಾವುದೇ ಕಾರಣಕ್ಕು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ. ಈ ವೇದಿಕೆ ಇಲ್ಲಿಗೆ ನಿಲ್ಲದೆ, ರಾಜ್ಯದಾದ್ಯಂತ ಆಂದೋಲನ ರೂಪ ಪಡೆದುಕೊಳ್ಳಲಿ ಎಂದು ಬಿ.ವೈ.ವಿಜಯೇಂದ್ರ ಆಶಿಸಿದರು.
ತುಮಕೂರಲ್ಲಿ ಎರಡನೇ ವಿಮಾನ ನಿಲ್ದಾಣ !
ಇದಕ್ಕೂ ಮುನ್ನ ಬೆಂಗಳೂರು ಹಾಗೂ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಸಮಗ್ರ ಅಭಿವೃದ್ಧಿಗೆ ಸಂಬಧಿಸಿದ ಸಮಕಾಲೀನ ವಿಷಯಗಳ ಕುರಿತು ಎರಡು ಚರ್ಚಾಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಮೊದಲನೇ ಗೋಷ್ಠಿಯನ್ನು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಆರ್​. ವೇಣುಗೋಪಾಲ್​ ಹಾಗೂ ಎರಡನೇ ಗೋಷ್ಠಿಯನ್ನು ಮದನ್​ ಪದಾಕಿ ನೇತೃತ್ವವಹಿಸಿ ನಡೆಸಿಕೊಟ್ಟರು. ಎರಡನೇ ವಿಮಾನ ನಿಲ್ದಾಣ, ರಸ್ತೆ ಸೇರಿ ಮೂಲಸೌಕರ್ಯಗಳ ಬಗ್ಗೆ ಚರ್ಚೆ ನಡೆದರೆ ಎರಡನೇ ಗೋಷ್ಠಿಯಲ್ಲಿ ಜಿಡಿಪಿ, ಸ್ವಯಂ ಉದ್ಯೋಗಗಳ ಬಗ್ಗೆ ತಜ್ಞರು ಅಭಿಪ್ರಾಯ ಹಂಚಿಕೊಂಡರು. ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಕನಕಪುರ ಬದಲು ರಾಜಧಾನಿ ಹೆಬ್ಬಾಗಿಲು ತುಮಕೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವುದು ಸೂಕ್ತ ಎಂಬ ಅಭಿಪ್ರಾಯಗಳು ಮೊದಲ ಗೋಷ್ಠಿಯಲ್ಲಿ ವ್ಯಕ್ತವಾಯಿತು.
ಸಂಪನ್ಮೂಲವ್ಯಕ್ತಿಗಳಾಗಿ ಪ್ರೊ.ಶ್ರೀನಿವಾಸ ಬಳ್ಳಿ,ವಿಜಕುಮಾರ್​ ಮಾಕಲ, ಡಾ.ಕೆ.ವಿ.ಸಿಬಂತಿ ಪದ್ಮನಾಬ್​, ಉದ್ಯಮಿಗಳಾದ ಎಚ್​.ಜಿ.ಚಂದ್ರಶೇಖರ್​, ಸುಜ್ಞಾನ್​ ಹಿರೇಮಠ್​, ಬಿ.ಗೋಪಿನಾಥ್​ ಭಾಗವಹಿಸಿದ್ದರು.
ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಅಭಿಯಾನ
ಕರ್ನಾಟಕ ಸಮಗ್ರ ಅಭಿವೃದ್ಧಿ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು ಸಮೃದ್ಧ ಕರ್ನಾಟಕಕ್ಕಾಗಿ ಒಗ್ಗೂಡುವ ಸಂಕಲ್ಪ ಧ್ಯೇಯದೊಂದಿಗೆ ತುಮಕೂರಲ್ಲಿ ನಡೆದ ಚಿಂತನಾ ಸಮಾವೇಶ ಒಂದು ಆರಂಭವಾಗಿದೆ. ಪದ್ಮಶ್ರೀ ಡಾ.ವಿಜಯಸಂಕೇಶ್ವರ, ಡಾ.ಪ್ರಭಾಕರ ಕೋರೆ ಮಾರ್ಗದರ್ಶನದಲ್ಲಿ ವೇದಿಕೆಯ ತೆರೆಯ ಹಿಂದಿರುವರ ಜತೆಗೂಡಿ ಹೊಸ ತಲೆಮಾರಿನ ಯುವಕರನ್ನು ಒಳಗೊಂಡು ಕರ್ನಾಟಕದ ಬೇರೆ ಬೇರೆ ವಿಭಾಗ ಮತ್ತು ಜಿಲ್ಲೆಗಳಲ್ಲಿ ಮುಂದೆ ಸಮಗ್ರ ಕರ್ನಾಟಕ ಅಭಿವೃದ್ಧಿ ಚಿಂತನ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿ.ಎಸ್​.ವಿ.ಪ್ರಸಾದ್​ ಹಾಗೂ ಜಿ.ಆರ್​.ಸುರೇಶ್​ ಜಂಟಿಯಾಗಿ ಪ್ರಕಟಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net