ಎಂಎಸ್ಪಿ ಅಡಿ ಖರೀದಿಸಿರುವ ರಾಗಿ ಬಾಕಿ ಪಾವತಿಸುವಂತೆ ಜಿಲ್ಲಾಡಳಿತವನ್ನು ಬಿಜೆಪಿ ರೈತ ಮೋರ್ಚಾ ನಿಯೋಗ ಒತ್ತಾಯಿಸಿ ಎಡಿಸಿ ಡಾ.ಎನ್.ತಿಪ್ಪೇಸ್ವಾಮಿಗೆ ಮನವಿ ಸಲ್ಲಿಸಿತು. ಬ್ಯಾಟರಂಗೇಗೌಡ, ಸತ್ಯಮಂಗಲ ಜಗದೀಶ್, ಬೀರನಕಲ್ಲು ಸತೀಶ್, ಗಿರೀಶ್, ಸಿದ್ಧರಾಜು, ರವೀಶ್, ಲೋಕೇಶ್, ಚಂದ್ರಣ್ಣ, ಸೋಮಶೇಖರ್, ನಾಗೇಶ್, ಹರೀಶ್, ಕೀರ್ತಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಆಗ್ರಹ
ಎಂಎಸ್ಪಿ ಯೋಜನೆ ಅಡಿ ಖರೀದಿಸಿದ್ದ ರಾಗಿ
ಜಿಲ್ಲಾಡಳಿತಕ್ಕೆ ಬಿಜೆಪಿ ನಿಯೋಗ ಮನವಿ
ತುಮಕೂರು: ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆ ಅಡಿ ರಾಗಿ ಮಾರಾಟ ಮಾಡಿದ್ದ ಜಿಲ್ಲೆಯ ರೈತರಿಗೆ ಕಳೆದ ವರ್ಷದ 206 ಕೋಟಿ ರೂ., ಬಾಕಿ ಹಣವನ್ನು ತತ್ಕ್ಷಣವೇ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತವನ್ನು ಬಿಜೆಪಿ ರೈತ ಮೋರ್ಚಾ ಆಗ್ರಹಿಸಿದೆ.
ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ ನೇತೃತ್ವದ ನಿಯೋಗವು ಗುರುವಾರ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ನೀಡಿ, ಮುಂಗಾರು ಮಳೆ ಕೈಕೊಟ್ಟಿದ್ದು ಬರದ ಛಾಯೆ ಆವರಿಸಿದೆ. ಮುಂಗಾರು ಹಂಗಾಮಿನಿ ಬಿತ್ತನೆ ಬೀಜ ಕೊಳ್ಳಲು ರೈತರು ಸಂಕಷ್ಟಕ್ಕೆ ಸಿಲುಕಿದ್ದು ಎಂಎಸ್ಪಿ ಅಡಿ ಖರೀದಿಸಿರುವ ರಾಗಿಯ ರೈತರ ಬಾಕಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ತುಮಕೂರು ಜಿಲ್ಲೆ ರಾಜ್ಯದ ಪ್ರಮುಖ ರಾಗಿ ಉತ್ಪಾದನಾ ಜಿಲ್ಲೆಗಳಲ್ಲಿ ಒಂದಾಗಿದ್ದು, ಜಿಲ್ಲೆಯ ಸಾವಿರಾರು ರೈತರು ರಾಗಿ ಬೆಳೆಯನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ಅವಲಂಬಿಸಿದ್ದಾರೆ. ಸರ್ಕಾರವು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಿದ್ದು ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಸುಮಾರು 206 ಕೋಟಿ ರೂ. ರಾಗಿ ಖರೀದಿ ಹಣ ರೈತರಿಗೆ ಬಾಕಿ ಉಳಿಸಿಕೊಂಡಿರುವುದು ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಹರಿಹಾಯ್ದರು.
ಈಗಾಗಲೇ ಮಳೆ ಕೈಕೊಟ್ಟಿರುವುದರಿಂದ ಕೃಷಿ ಚಟುವಟಿಕೆ ಸ್ಥಗಿತಗೊಂಡು ಬರ ಪರಿಸ್ಥಿತಿ ಎದುರಾಗಿದೆ. ಬೆಳೆ ನಷ್ಟದಿಂದ ಜಿಲ್ಲೆಯ ರೈತರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಒಂದು ಕಡೆ ಮಳೆಯಾಶ್ರಿತ ರಾಗಿ ಬೆಳೆಯುವ ರೈತರು ಬಿತ್ತನೆ ಮಾಡಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ. ಮತ್ತೊಂದೆಡೆ ಈಗಾಗಲೇ ಬೆಳೆದ ರಾಗಿಯನ್ನು ಸರ್ಕಾರಕ್ಕೆ ಮಾರಾಟ ಮಾಡಿದ ರೈತರಿಗೆ 206 ಕೋಟಿ ರೂ., ಹಣ ಇನ್ನೂ ಪಾವತಿಯಾಗದೆ ಇರುವುದು ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್ ಮಾತನಾಡಿ, ರಾಗಿ ಬೆಳೆಯೇ ಬದುಕಿನ ಆಧಾರವಾಗಿರುವ ಜಿಲ್ಲೆಯ ರೈತರಿಗೆ ಮಳೆ ಕೈಕೊಟ್ಟಿದ್ದರಿಂದ ಸರ್ಕಾರವು ಇಂತಹ ಬರಪರಿಸ್ಥಿತಿಯಲ್ಲಿ ಪರಿಹಾರ ನೀಡಿ ಅವರ ನೆರವಿಗೆ ಬರಬೇಕಿತ್ತು. ಆದರೆ ರೈತರಿಗೆ ಕೊಡಬೇಕಾಗಿರುವ ಬಾಕಿ 206 ಕೋಟಿ ರೂ., ಗಳನ್ನೇ ಕೊಡದಿರುವುದು ಅನ್ಯಾಯವಾಗಿದೆ. ರಾಗಿ ಖರೀದಿ ಹಣವನ್ನು ಯಾವುದೇ ವಿಳಂಬವಿಲ್ಲದೆ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಈಗ ರೈತರು ರಾಗಿ ಬಿತ್ತನೆ ಮಾಡುವ ಸಂದರ್ಭ, ಅವರಿಗೆ ಗೊಬ್ಬರ, ಬಿತ್ತನೆಬೀಜ ಖರೀದಿಗೆ ಹಣದ ಅವಶ್ಯಕತೆ ಹೆಚ್ಚಾಗಿದೆ. ಈ ಪರಿಸ್ಥಿತಿಯಲ್ಲಿ ಬಾಕಿ ಇರುವ ರಾಗಿ ಹಣವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ತ್ವರಿತವಾಗಿ ಜಮಾ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರ ಸಂಕಷ್ಟದ ಸಮಯದಲ್ಲಿ ಸರ್ಕಾರವು ಅವರ ಬೆನ್ನಿಗೆ ನಿಂತು ತಕ್ಷಣದ ನೆರವು ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಬೀರನಕಲ್ಲು ಸತೀಶ್, ಖಜಾಂಚಿ ಗಿರೀಶ್, ಕಾರ್ಯದರ್ಶಿ ಸಿದ್ಧರಾಜು, ನಗರ ಅಧ್ಯಕ್ಷ ರವೀಶ್, ಪ್ರಧಾನ ಕಾರ್ಯದರ್ಶಿ ಲೋಕೇಶ್, ಮುಖಂಡರಾದ ಚಂದ್ರಣ್ಣ, ಸೋಮಶೇಖರ್, ನಾಗೇಶ್, ಹರೀಶ್, ಕೀರ್ತಿ ಮತ್ತಿತರರು ಇದ್ದರು.