

ವಿಜಯವಾಣಿ ಸುದ್ದಿಜಾಲ ಮಧುಗಿರಿ
ರಾಷ್ಟ್ರೀಯ ಹೆದ್ದಾರಿ -69ರ ಶಿರಾ-ಬಡವನಹಳ್ಳಿ ಚತುಷ್ಪಥ ಕಾಮಗಾರಿಯನ್ನು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ -69ರ ಚತುಷ್ಪಥ ಅಭಿವೃದ್ಧಿ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಶಿರಾದಿಂದ ಬಡವನಹಳ್ಳಿವರೆಗಿನ 20.2 ಕಿ.ಮೀ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ 584 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು 15 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.
ಶಿರಾ ಮತ್ತು ಮಧುಗಿರಿ ತಾಲೂಕಿನಲ್ಲಿ ಒಟ್ಟು 900 ಮರಗಳನ್ನು ತೆರವುಗೊಳಿಸಲಾಗುವುದು. ಇದಕ್ಕೆ ಪರ್ಯಾಯವಾಗಿ 1 ಮರಕ್ಕೆ 10 ಸಸಿಗಳಂತೆ ನೆಡಲು ಉದ್ದೇಶಿಸಲಾಗಿದ್ದು, ಪ್ರತಿ ಸಸಿಗೆ 411ರಂತೆ ಒಟ್ಟು 37 ಲಕ್ಷ ರೂ. ಅನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಅರಣ್ಯ ಇಲಾಖೆಗೆ ಪಾವತಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಎಇಇ ಲಕ್ಷಿ$್ಮಕಾಂತ ಸಭೆಗೆ ಮಾಹಿತಿ ನೀಡಿದರು.
ಎರಡನೇ ಹಂತದ ಬಡವನಹಳ್ಳಿಯಿಂದ ಭೈರೇನಹಳ್ಳಿವರೆಗಿನ ಚತುಷ್ಪಥ ನಿಮಾರ್ಣಕ್ಕೂ 950 ಕೋಟಿ ರೂ. ಬಿಡುಗಡೆಯಾಗಿದ್ದು, ಶೀಘ್ರವೇ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭವಾಗಲಿದೆ. ಅಲ್ಲದೆ, ಪಟ್ಟಣದ ನೃಪತುಂಗ ವೃತ್ತದಿಂದ ಹೈಸ್ಕೂಲ್ ರಸ್ತೆಯವರೆಗಿನ ಭೂಮಾಲೀಕರಿಗೆ ಜನವರಿ ತಿಂಗಳಲ್ಲಿ ಪರಿಹಾರದ ಮೊತ್ತವನ್ನು ವಿತರಿಸುವಂತೆ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.
ವಿದ್ಯುತ್ ಕಂಬಗಳ ಸ್ಥಳಾಂತರ: ರಸ್ತೆ ವಿಸ್ತರಣೆಗೆ ಅಡ್ಡಿಯಾಗುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು 2.22 ಕೋಟಿ ರೂ. ಅಂದಾಜು ಪಟ್ಟಿಯ ಪ್ರಸ್ತಾವನೆಯನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಬೆಸ್ಕಾಂ ಎಇಇ ಮಾಕಣ್ಣನಾಯಕ್ ತಿಳಿಸಿದರು.
ಡಿವೈಎಸ್ಪಿ ಮಂಜುನಾಥ್, ತಾಪಂ ಇಒ ಧನಂಜಯ, ಜಿಪಂ ಎಇಇ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಮುಖಂಡರಾದ ಲಕ್ಷಿ$್ಮನಾರಾಯಣ, ಕುರುಬರಹಳ್ಳಿ ಹರ್ಷ ಇದ್ದರು.