ತುಮಕೂರು ವಿಶ್ವವಿದ್ಯಾಲಯದ ಡಿ.ದೇವರಾಜ ಅರಸು ಅಧ್ಯಯನ ಪೀಠ ಹಾಗೂ ಹಿಂದುಳಿದ ವರ್ಗಗಳ ಕೋಶದ ವತಿಯಿಂದ ಆಯೋಜಿಸಿದ್ದ ಅರಸು ಅವರ 111ನೇ ಜಯಂತಿ ಕಾರ್ಯಕ್ರಮದಲ್ಲಿ ಡಾ. ನಟರಾಜು, ಪ್ರೊ. ಎಚ್. ನಾಗಭೂಷಣ್, ಪ್ರೊ.ಕೆ.ಜಿ.ಪರಶುರಾಮ, ಪ್ರೊ.ಬಿ.ನಿತ್ಯಾನಂದಶೆಟ್ಟಿ, ಪ್ರೊ.ಪಿ.ಪರಮಶಿವಯ್ಯ, ಡಾ. ಗುಂಡೇಗೌಡ ಭಾಗವಹಿಸಿದ್ದರು.
ತುಮಕೂರು: ಉಳುವವನೇ ಭೂಮಿ ಒಡೆಯ ಎಂಬ ತತ್ವದಡಿ ಕೃಷಿಕರಿಗೆ ಗೇಣಿದಾರರ ಬಳಿಯಿದ್ದ ಭೂಮಿಯನ್ನು ಒದಗಿಸಿಕೊಟ್ಟ ಕ್ರಾಂತಿಕಾರಿ ನಾಯಕ ದೇವರಾಜ ಅರುಸು ಎಂದು ಸಾಹಿತಿ ಹಾಗೂ ಚಿಂತಕ ಡಾ. ಕೆ.ಪಿ.ನಟರಾಜು ಬಣ್ಣಿಸಿದರು.
ತುಮಕೂರು ವಿಶ್ವವಿದ್ಯಾಲಯದ ಡಿ. ದೇವರಾಜ ಅರಸು ಅಧ್ಯಯನ ಪೀಠ ಹಾಗೂ ಹಿಂದುಳಿದ ವರ್ಗಗಳ ಕೋಶದ ವತಿಯಿಂದ ಗುರುವಾರ ಆಯೋಜಿಸಿದ್ದ ಅರಸು ಅವರ 111ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರಸು ಅವರ ಕಾರ್ಯವೈಖರಿ ಅನನ್ಯವಾಗಿದ್ದು, ಅವರನ್ನು ಮಹಾತ್ಮಾ ಎಂದರೆ ತಪ್ಪಾಗಲಾರದು ಎಂದರು.
ನಾಡಿನ ಭವಿಷ್ಯವನ್ನೇ ರೂಪಿಸಿದ ಮಹಾನ್ ಚೇತನ, ಸಾಮಾಜಿಕ ನ್ಯಾಯದ ಹರಿಕಾರ ದೇವರಾಜು ಅರಸು. ರಾಜಕೀಯದಲ್ಲಿ ದೀರ್ಘ ಸೇವೆ ಸಲ್ಲಿಸಿದ ಅವರು, ಸಂವಿಧಾನದ ಆಶಯಗಳನ್ನು ಅರಿತು, ಎಲ್.ಜಿ. ಹಾವನೂರು ವರದಿಯನ್ನು ಜಾರಿಗೆ ತರುವ ಮೂಲಕ ಸಾಮಾಜಿಕ ನ್ಯಾಯದಿಂದ ವಂಚಿತರಾದ ಕೋಟ್ಯಂತರ ಜನರಿಗೆ ಧ್ವನಿಯಾದರು ಎಂದರು.
ಕಲಾ ನಿಕಾಯದ ಡೀನರು ಹಾಗೂ ಹಿಂದುಳಿದ ವರ್ಗಗಳ ಕೋಶದ ನಿರ್ದೇಶಕ ಪ್ರೊ. ಕೆ.ಜಿ.ಪರಶುರಾಮ್ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯವನ್ನು ತಲುಪಿಸಿದ ಅರಸು ಅವರ ಸಾಧನೆ ಮತ್ತು ಕಾರ್ಯವೈಖರಿಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತುಮಕೂರು ವಿವಿ ಪ್ರಭಾರ ಕುಲಪತಿ ಪ್ರೊ. ಎಚ್. ನಾಗಭೂಷಣ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಯನ ಪೀಠದ ಸಂಯೋಜಕ ಡಾ. ಗುಂಡೇಗೌಡ, ಪ್ರಾಧ್ಯಾಪಕರಾದ ಪ್ರೊ.ಬಿ.ನಿತ್ಯಾನಂದಶೆಟ್ಟಿ, ಪ್ರೊ.ಪಿ.ಪರಮಶಿವಯ್ಯ, ಪ್ರೊ. ನಾಗಭೂಷಣ್ ಬಗ್ಗನಡು, ಡಾ. ಸುನಿತಾ ಮತ್ತಿತರರು ಉಪಸ್ಥಿತರಿದ್ದರು.